ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಯಸ್ಸು 40 ದಾಟಿದ್ರೂ ಮದುವೆ ಮಾಡಿಲ್ಲ ಎಂದು ತಾಯಿಯನ್ನೇ ಕೊಲ್ಲಲು ಯತ್ನಿಸಿದ ಪಾಪಿ ಮಗ!

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದುವೆ ಮಾಡಿಲ್ಲ ಎಂದು ತಾಯಿಯೊಂದಿಗೆ ಜಗಳವಾಡಿರುವ ಮಗ, ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾನೆ. ಸದ್ಯ ಆರೋಪಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ತಾಯಿಯ ಸ್ಥಿತಿ ಗಂಭೀರವಾಗಿದೆ.

ಆರೋಪಿ ಉಮಾಶಂಕರ್ ಮತ್ತು ತಾಯಿ ಗಂಗಮ್ಮ.

ಹಾಸನ: 40 ವರ್ಷವಾದ್ರೂ ಮದುವೆ ಮಾಡಲಿಲ್ಲ ಎಂದು ಪಾಪಿ ಪುತ್ರನೊಬ್ಬ ತಾಯಿಯನ್ನೇ ಕೊಲೆ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ (attempt to murder ) ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ತಾಯಿ ಜತೆ ಜಗಳವಾಡಿ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿರುವ ಆರೋಪಿಯನ್ನು ಗ್ರಾಮಸ್ಥರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಉಮಾಶಂಕರ್ (40) ತಾಯಿಯ ಕೊಲೆಗೆ ಯತ್ನಿಸಿದ ಆರೋಪಿ. ತಾಯಿ ಗಂಗಮ್ಮ ಗಾಯಾಳುವಾಗಿದ್ದು, ಸದ್ಯ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ.

ಏನಿದು ಘಟನೆ?

ಆರೋಪಿ ಉಮಾಶಂಕರ್ ಗಂಗಮ್ಮನ ಎರಡನೇ ಮಗ. ಮೊದಲ ಮಗ ಅಂತರ್ಜಾತಿ ವಿವಾಹವಾದ ಹಿನ್ನೆಲೆ ಕುಟುಂಬದಿಂದ ಪ್ರತ್ಯೇಕವಾಗಿದ್ದರು. ಮಗಳನ್ನು ಬೆಂಗಳೂರು ಮೂಲದ ವರನಿಗೆ ಕೊಟ್ಟು ಮದುವೆ ಮಾಡಿದ್ದರು. ಆದರೆ, ಎರಡನೇ ಮಗನಿಗೆ ಮದುವೆ ಮಾಡುವ ಪ್ರಯತ್ನದಲ್ಲಿದ್ದರು.

ಗಂಗಮ್ಮ ತನ್ನ ಮಗನಿಗೆ ಮದುವೆ ಮಾಡಲು ವಧುವನ್ನು ನೋಡುತ್ತಿದ್ದರು. ಆದರೆ, ಕಳೆದ ವರ್ಷ ಕುಂಭಮೇಳಕ್ಕೆ ಉಮಾಶಂಕರ್ ಹೋಗಿ ಬರುವಾಗ ಕಾರು ಅಪಘಾತದಲ್ಲಿ ಹೊಟ್ಟೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಹೀಗಾಗಿ, ಕಳೆದ 10 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಔಷಧ ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ, ಆತನಿಗೆ ಸ್ವಲ್ಪ ಬುದ್ಧಿ ಭ್ರಮಣೆಯಾದಂತೆ ಕಾಣುತ್ತಿದ್ದ. ಅಲ್ಲದೇ, ನನಗೆ ಮದುವೆ ಮಾಡು ಎಂದು ತಾಯಿ ಮತ್ತು ಸಂಬಂಧಿಕರನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ವಧುವನ್ನು ಕೊಡಲು ಯಾರೂ ಮುಂದಾಗದ ಹಿನ್ನೆಲೆಯಲ್ಲಿ ಮನೆಯಲ್ಲಿ ಇದೇ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಗಲಾಟೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯೊಂದಿಗೆ ಮದುವೆ ವಿಚಾರವಾಗಿ ಗಲಾಟೆ ನಡೆದಿದೆ. ಇದೇ ವೇಳೆ ಮಗ ಮತ್ತು ತಾಯಿಯ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ವಯಸ್ಸಾದ ಅಮ್ಮನನ್ನು ಬಲವಾಗಿ ತಳ್ಳಿದ್ದರಿಂದ ತಾಯಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಆರೋಪಿ ಕಲ್ಲನ್ನು ಎತ್ತಿ ತಾಯಿಯ ತಲೆ ಮೇಲೆ ಹಾಕಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.