ಹಾಸನ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿಯ ಕುಟುಂಬಸ್ಥರು ಮನೆಯಿಂದ ಹೊರಹಾಕಿ, ನಿರಂತರ ಕಿರುಕುಳ ನೀಡಿದ್ದರಿಂದ ಬೇಸತ್ತು ಮಹಿಳೆಯೊಬ್ಬರು ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ (Hassan News) ಆಲೂರಿನ ಹೌಸಿಂಗ್ ಬೋರ್ಡ್‌ನಲ್ಲಿ ನಡೆದಿದೆ. ಅನುಪಮಾ (27) ಹಾಗೂ ಆರ್ಯನ್ (2) ಮೃತ ದುರ್ದೈವಿಗಳು.
ಮಹಿಳೆಯ ಪತಿ ಶ್ರೀನಿವಾಸ್ ತಾಯಿ ಜಯಮ್ಮ ಹಾಗೂ ಆಕೆಯ ಪುತ್ರಿ ಅನುಶ್ರೀ ಕಿರುಕುಳ ನೀಡುತ್ತಿದ್ದರು ಎಂದು ಅನುಪಮಾ ತಾಯಿ ಆರೋಪಿಸಿದ್ದಾರೆ. ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಶ್ರೀನಿವಾಸ್ ಹಾಗೂ ಅನುಪಮಾ ಅಕ್ಕಪಕ್ಕದ ಮನೆಯವರಾಗಿದ್ದು, ಎರಡು ಕುಟುಂಬಗಳು ಅನ್ಯೋನ್ಯವಾಗಿದ್ದರು. ಶ್ರೀನಿವಾಸ್ ಹಾಗೂ ಅನುಪಮಾ ಪರಸ್ಪರ ಪ್ರೀತಿಸಿ ಪೋಷಕರ ಮುಂದೆ ಮದುವೆ ಪ್ರಸ್ತಾಪ ಮಾಡಿದಾಗ ಶ್ರೀನಿವಾಸ್ ತಾಯಿ ಜಯಮ್ಮ ಹಾಗೂ ಅಕ್ಕ ಅನುಶ್ರೀ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅನುಪಮಾ ಮನೆಯವರು ಮದುವೆಗೆ ಒಪ್ಪಿದ್ದು ದೇವಾಲಯದಲ್ಲಿ ಮದುವೆ ಮಾಡಿದ್ದರು.
ಶ್ರೀನಿವಾಸ್ ತಾಯಿ ಜಯಮ್ಮ, ಮಗ ಹಾಗೂ ಸೊಸೆಯನ್ನು ಮನೆಗೆ ಸೇರಿಸಿರಲಿಲ್ಲ. ನವದಂಪತಿ ಇಬ್ಬರು ಊರು ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದರು. ಶ್ರೀನಿವಾಸ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾದ ನಾಲ್ಕು ವರ್ಷದ ಬಳಿಕ ಗಂಡು ಮಗು ಹುಟ್ಟಿತ್ತು. ಬೆಂಗಳೂರಿನಲ್ಲಿ ದಂಪತಿ ನೆಮ್ಮದಿ ಜೀವನ ನಡೆಸುತ್ತಿದ್ದರೆ ಇತ್ತ ಸಿಂಗಾಪುರ ಗ್ರಾಮದಲ್ಲಿ ಶ್ರೀನಿವಾಸ್ ತಾಯಿ ಜಯಮ್ಮ, ಅನುಪಮಾ ತಾಯಿ ಯಶೋಧ ಜತೆ ಮದುವೆ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಈ ವಿಷಯವನ್ನು ಮಗಳು ಅನುಪಮಾಗೆ ಯಶೋಧ ಹೇಳುತ್ತಿದ್ದರು.
ಶ್ರೀನಿವಾಸ್ ತನ್ನ ಮನೆಗೆ ಹೋಗದಿದ್ದರೂ ತಾಯಿ ಜಯಮ್ಮ ಹಾಗೂ ಅಕ್ಕ ಅನುಶ್ರೀ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಇದೇ ವಿಚಾರಕ್ಕೆ ಅನುಪಮಾ ಪತಿ ಜತೆ ಜಗಳವಾಡುತ್ತಿದ್ದಳು. ನಮ್ಮನ್ನು ನಿಮ್ಮ ತಾಯಿ ಮನೆಗೆ ಸೇರಿಸಿಲ್ಲ. ನೀನು ಕೂಡ ಅವರೊಂದಿಗೆ ಮಾತನಾಡಬಾರದು ಎಂದು ಪತಿ ಜತೆ ಜಗಳವಾಡುತ್ತಿದ್ದಳು. ಒಂದು ವೇಳೆ ಮಾತನಾಡಿದರೆ ಸಾಯುತ್ತೇನೆ ಎಂದು ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದರು. ನಂತರ ಅನುಪಮಾ ತಾಯಿ ಯಶೋಧ, ಅಣ್ಣ ಸಂಜು ರಾಜಿ ಸಂಧಾನ ಮಾಡಿ ತಿಳಿವಳಿಕೆ ಹೇಳಿದ್ದರು. ಆದರೆ ಅನುಪಮಾ ಮಾತ್ರ ಬದಲಾಗಿರಲಿಲ್ಲ.
ಪತ್ನಿ ವರ್ತನೆಯಿಂದ ಬೇಸತ್ತ ಪತಿ ಶ್ರೀನಿವಾಸ್ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು. ಪುನಃ ರಾಜಿ ಸಂಧಾನ ಮಾಡಿದ ಬಳಿಕ ಕಳೆದ ಎರಡು ತಿಂಗಳ ಹಿಂದೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್‌ಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅನುಪಮಾ ವಾಸವಿರುವ ಮನೆಯ ಪಕ್ಕದಲ್ಲೇ ಶ್ರೀನಿವಾಸ್ ಸೈಟ್ ಖರೀದಿಸಿ ಮನೆ ಕಟ್ಟಲು ನಿರ್ಧರಿಸಿದ್ದರು. ಆದರೆ ಜಯಮ್ಮ ಮಗ ಶ್ರೀನಿವಾಸ್‌ಗೆ ಫೋನ್ ಮಾಡಿ ಮನೆ ಕಟ್ಟಲು ಒಂದು ಬಿಡಿಗಾಸು ಕೊಡಲ್ಲ. ಆಸ್ತಿಯನ್ನು ಕೊಡುವುದಿಲ್ಲ ಎಂದು ಹೇಳಿ, ಸೊಸೆಯನ್ನು ನಿಂದಿಸಿದ್ದರು.
“ಮುಂದಿನ ಜನ್ಮದಲ್ಲಿ ವೈದ್ಯನಾಗುತ್ತೇನೆ”: ಡೆತ್‌ನೋಟ್ ಬರೆದಿಟ್ಟು 19 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ
ಇದರಿಂದ ಅನುಪಮಾ ಪತಿ ಜೊತೆ ಜಗಳವಾಡಿ ಕಳೆದ ಒಂದು ವಾರದ ಹಿಂದೆ ತಾಳಿ ಬಿಚ್ಚಿಟ್ಟು, ಮಗು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದರು. ಮಧ್ಯೆ ಒಂದೆರಡು ಬಾರಿ ಪತಿಗೆ ಕರೆ ಮಾಡಿ ನಾನು ಸಾಯುತ್ತೇನೆ ಎಂದಿದ್ದರು. ಎರಡು ದಿನಗಳ ಹಿಂದೆ ತಾಯಿ ಮನೆಗೆ ಮಗು ಜೊತೆ ಬಂದಿದ್ದರು. ನಿನ್ನೆ ತಮ್ಮ ಮನೆಗೆ ಬಂದು ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಪತಿಗೆ ಫೋನ್ ಮಾಡಿ ಸಂಜೆ ಬೇಗ ಮನೆಗೆ ಬಾ ಮಾತನಾಡಬೇಕು ಎಂದು ಹೇಳಿದ್ದರು. ಶ್ರೀನಿವಾಸ್ ಸಂಜೆ ಐದು ಗಂಟೆಗೆ ಮನೆಗೆ ಬಂದಾಗ ಬಾಗಿಲು, ಕಿಟಕಿಗಳು ಎಲ್ಲಾ ಬಂದ್ ಆಗಿದ್ದವು. ಪತ್ನಿಗೆ ಫೋನ್ ಮಾಡಿದರೆ ಮನೆಯೊಳಗೆ ರಿಂಗ್ ಆಗುತ್ತಿತ್ತು. ನಂತರ ಅನುಪಮಾ ಅಣ್ಣ ಸಂಜುಗೆ ಫೋನ್ ವಿಷಯ ತಿಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಒಳಗಿನಿಂದ ಹಾಕಿದ್ದ ಬಾಗಿಲು ಲಾಕ್ ಮುರಿದು ಒಳಗೆ ಹೋಗಿ ನೋಡಿದ ವೇಳೆ ಮಗು ಆರ್ಯನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ನೇಣುಬಿಗಿದುಕೊಂಡು ಅನುಪಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಎಸ್‌ಪಿ ಶುಭನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.