ಹಾಸನ: ಜಿಲ್ಲೆಯ ಬೇಲೂರಿನಲ್ಲಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮುಸುಕುಧಾರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಘಟನೆಗೆ ಹಿಂದೂಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಹಾಸನದ ಗುಡ್ಡೇನಹಳ್ಳಿಯ ಲೀಲಮ್ಮ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ಸುರೇಶ್ ಹಾಗೂ ಶೋಭಾ ನೇತೃತ್ವದ ತಂಡವು ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಭಾನುವಾರ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಬೇಲೂರಿನ ಶ್ರೀ ವಿದ್ಯಾ ಗಣಪತಿ ದೇವಸ್ಥಾನಕ್ಕೆ ಲೀಲಮ್ಮ ತೆರಳಿದ್ದಳು. ಈ ವೇಳೆ ಗಣೇಶ ಮೂರ್ತಿಗೆ ಚಪ್ಪಲಿಹಾರ ಹಾಕಿ ವಿಕೃತಿ ಮೆರೆದಿದ್ದಳು.
ಈ ಸುದ್ದಿಯನ್ನೂ ಓದಿ | Beluru News: ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ದುಷ್ಕರ್ಮಿಗಳು; ಭಕ್ತರಿಂದ ಆಕ್ರೋಶ
ಪುರಸಭೆ ಆವರಣದಲ್ಲಿರುವ ದೇವಸ್ಥಾನದೊಳಗೆ ಲೀಲಮ್ಮ ಒಳಗೆ ಪ್ರವೇಶಿಸಿರುವುದು ಹಾಗೂ ಹೊರ ಹೋಗಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಚಪ್ಪಲಿ ಧರಿಸಿ ಹೋಗಿದ್ದ ಮಹಿಳೆ ಬರುವಾಗ ಬರಿಗಾಲಿನಲ್ಲಿ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಆಕೆಯೇ ಕೃತ್ಯ ಎಸಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೇವಾಲಯದ ಅಧ್ಯಕ್ಷ ವಿರೂಪಾಕ್ಷ ಅವರು ದೂರು ದಾಖಲಿಸಿದ್ದರು. ಆರೋಪಿ ಬಂಧನಕ್ಕೆ ಆಗ್ರಹ ಕೇಳಿಬಂದಿದ್ದರಿಂದ, ಪೊಲೀಸರು ಆರೋಪಿ ಬಂಧನಕ್ಕೆ 8 ತಂಡಗಳನ್ನು ರಚಿಸಿತ್ತು. ಇದೀಗ ಆರೋಪಿ ಮಹಿಳಯನ್ನು ಬಂಧಿಸಲಾಗಿದೆ.