ಹಾಸನ, ನ. 8: ಕಲ್ಲು ಗಣಿಗಾರಿಕೆ (ಕ್ರಷರ್)ಗಳಿಗೆ ಅನುಮತಿ ನೀಡುವುದು ಹಾಗೂ ವಸತಿ ಬಡಾವಣೆಗಳ ಅಲ್ಯುಲೇಷನ್ ವಿಚಾರದಲ್ಲಿ ಹಾಸನ ಜಿಲ್ಲಾಧಿಕಾರಿ (Haasan DC) ಕಚೇರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ (Minister Shivalinge Gowda) ಕೂಡ ಶಾಮೀಲಾಗಿದ್ದಾರೆ ಎಂದು ಹೇಳುವ ಮೂಲಕ ರಾಜಯದಲ್ಲಿ ಸಂಚಲನ ಮೂಡಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ತಿರುಗೇಟು ಕೊಟ್ಟಿದ್ದಾರೆ (H.D. Kumaraswamy vs K.S. Lathakumari). ಯಾವುದೇ ಕಾನೂನುಬಾಹಿರ ಚಟುಚಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ, ಈ ಬಗ್ಗೆಪೊಲೀಸ್ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಜಟಾಪಟಿ ಆರಂಭವಾಗಿದೆ.
ಡಿ.ಕೆ. ಶಿವಕುಮಾರ್, ಅಶೋಕ್ ಖೇಣಿ, ಪ್ರಿಯಾಂಕ್ ಖರ್ಗೆ ಮುಂತಾದವರ ವಿರುದ್ಧ ಸಮರ ಸಾರಿದ್ದ ಎಚ್ಡಿಕೆ ಇದೀಗ ಜಿಲ್ಲಾಧಿಕಾರಿ ವಿರುದ್ಧ ರಂಗಕ್ಕಿಳಿದಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿಂತೆ ಭ್ರಷ್ಟಾಚಾರ, ಲಂಚ ಸ್ವೀಕಾರದ ಬಗ್ಗೆ ಎಚ್ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಲತಾ ಕುಮಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಹಾಸನ ಡಿಸಿ ಲತಾಕುಮಾರಿ ಮಾತು:
ಜಿಲ್ಲಾಧಿಕಾರಿ ಹೇಳಿದ್ದೇನು?
ʼʼನಾನು ಯಾವುದೇ ಕಾರಣಕ್ಕೂ ಯಾವುದೇ ಅನಧಿಕೃತ ಅಥವಾ ಕಾನೂನುಬಾಹಿರ ಕೆಲಸಗಳನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಹಾಸನ ಡಿಸಿ ಪಿಎ ಅವರ ವಾಟ್ಸ್ಆ್ಯಪ್ ಚಾಟ್ ಎಂದು ಅನಧಿಕೃತವಾಗಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.
ಕ್ರಷರ್ ಮಾಲೀಕರಿಂದ ಹಣ ಸುಲಿಗೆ; ಹಾಸನ ಜಿಲ್ಲಾಧಿಕಾರಿ, ಸಚಿವ ಶಿವಲಿಂಗೇಗೌಡ ವಿರುದ್ಧ ಹೆಚ್.ಡಿ.ಕೆ ಗಂಭೀರ ಆರೋಪ
ತಮ್ಮ ಮೇಲೆ ಬಂದಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, "ಸತ್ಯಾಸತ್ಯತೆ ಹೊರಬರಬೇಕಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುತ್ತೇನೆ ಮತ್ತು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುತ್ತೇನೆ. ಸಂಪೂರ್ಣ ವಿಚಾರಣೆ ನಡೆದು ತಪ್ಪು ಯಾರದ್ದೇ ಇದ್ದರೂ ಅವರಿಗೆ ಕಾನೂನು ಪ್ರಕಾರ ಶಿಸ್ತುಕ್ರಮ ಆಗಬೇಕುʼʼ ಎಂದು ಆಗ್ರಹಿಸಿದ್ದಾರೆ. ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದಿದ್ದಾರೆ.
ಏನಿದು ವಿವಾದ?
ಭಾನುವಾರ (ನವೆಂಬರ್ 8) ಹಾಸನಾಂಬೆಯ ದರ್ಶನ ಪಡೆದ ನಂತರ ಶಾಸಕ ಸ್ವರೂಪ ಪ್ರಕಾಶ್ ಅವರ ಮನೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಎಚ್ಡಿಕೆ, ಮಧ್ಯವರ್ತಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯೇ ನೇರವಾಗಿ ಕ್ರಷರ್ ಮಾಲಕರು ಹಾಗೂ ವಸತಿ ಬಡಾವಣೆಗಳ ಮಾಲಕರಿಂದ ಹಣ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದರು.
ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಹಣವನ್ನು ಸುಲಿಗೆ ಮಾಡಿ ಜಿಲ್ಲಾಧಿಕಾರಿಗೆ ಕೊಡುತ್ತಿದ್ದಾರೆ ಎನ್ನಲಾದ ಅಂಶವು ಆ ವ್ಯಕ್ತಿಯ ವಾಟ್ಸ್ಆ್ಯಪ್ ಚಾಟ್ ಮೂಲಕ ಬಯಲಿಗೆ ಬಂದಿದೆ ಎಂದು ಸಚಿವರು ಹೇಳಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಶಶಿಕಿರಣ್ ಅವರ ವಾಟ್ಸ್ಆ್ಯಪ್ ಚಾಟ್ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.
"ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ"; ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ತಿರುಗೇಟು
ʼʼಹಾಸನ ಜಿಲ್ಲಾಡಳಿತದ ಬ್ರಹ್ಮಾಂಡ ಭ್ರಷ್ಟಾಚಾರದ ವಾಟ್ಸ್ಆ್ಯಪ್ ಚಾಟ್ ದಾಖಲೆಗಳನ್ನು ಪ್ರಾಮಾಣಿಕ ಅಧಿಕಾರಿಯೊಬ್ಬರು ನನಗೆ ನೀಡಿದ್ದಾರೆ. ಶಶಿಕಿರಣ್ ಎಂಬ ಬ್ರೋಕರ್ ಮೂಲಕ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂ. ಲಂಚದ ಚೌಕಾಸಿ ನಡೆಯುತ್ತಿದ್ದು, 60 ಲಕ್ಷ ರೂ. ಲಂಚದಲ್ಲಿ 50 ಲಕ್ಷ ರೂ. ಡಿಸಿಗೆ ಹಾಗೂ ಉಳಿದ ಹಣವನ್ನು ಡಿಸಿ ಮೇಡಂ ಆಪ್ತ ಸಹಾಯಕಿ ಸಹನಾ, ವಾಹನ ಚಾಲಕ, ಗನ್ ಮ್ಯಾನ್ ಮತ್ತು ಇತರ ಸಿಬ್ಬಂದಿಗೆ ಹಂಚಿಕೆಯಾಗುತ್ತಿದೆ. ಹಾಗೆಯೇ ಹಾಸನದ ಎಸಿ ಜಗದೀಶ್ ಅವರು 22 ಲಕ್ಷ ರೂ., ತಹಶೀಲ್ದಾರ್ ಗೀತಾ 13 ಲಕ್ಷ ರೂ. ಲಂಚ ಪಡೆದಿರುವ ಉಲ್ಲೇಖ ವಾಟ್ಸ್ಆ್ಯಪ್ ಚಾಟ್ನಲ್ಲಿದೆ. ಮುಖ್ಯವಾಗಿ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡದಂತೆ ತಡೆಯಲು ಸಚಿವ ಶಿವಲಿಂಗೇಗೌಡರಿಗೆ ತಹಶೀಲ್ದಾರ್ ಸಂತೋಷ್ ಮೂಲಕ 75 ಲಕ್ಷ ರೂ. ನೀಡಲಾಗಿದೆʼʼ ಎಂದು ಸಚಿವ ಕುಮಾರಸ್ವಾಮಿ ಹೇಳಿದ್ದು ಸಂಚಲನ ಸೃಷ್ಟಿಸಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.