ಹಾಸನ: ಸಾಲ ಕೊಡಿಸುವುದಾಗಿ ಹೇಳಿ 50ಕ್ಕೂ ಹೆಚ್ಚು ಗ್ರಾಹಕರಿಂದ 3 ಕೋಟಿಗೂ ಹೆಚ್ಚು ಹಣ ಪಡೆದು ಖಾಸಗಿ ಬ್ಯಾಂಕ್‌ನ ಮ್ಯಾನೇಜರ್ ನಾಪತ್ತೆಯಾಗಿರುವ ಘಟನೆ (Hassan Bank Fraud Case) ಹಾಸನದಲ್ಲಿ ನಡೆದಿದೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ಬ್ಯಾಂಕ್ ಮ್ಯಾನೇಜರ್ ಎಚ್.ಎಸ್.ಪೂಜಾ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾಗೆ ಗ್ರಾಹಕರು ದೂರು ನೀಡಿದ್ದಾರೆ. ಎಫ್‌ಡಿ ಇಡುವಂತೆ ಹೇಳಿ ಕೋಟ್ಯಂತರ ಹಣ ಸಮೇತ ಮ್ಯಾನೇಜರ್ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವ ಆಮಿಷವನ್ನು ಗ್ರಾಹಕರಿಗೆ ಬ್ಯಾಂಕ್ ಮ್ಯಾನೇಜರ್ ಎಚ್.ಎಸ್.ಪೂಜಾ ಒಡ್ಡಿದ್ದರು. ಜತೆಗೆ 25 ಲಕ್ಷ ಲೋನ್ಗೆ 10 ಲಕ್ಷ ಸಬ್ಸಿಡಿ ಎಂದು ನಂಬಿಸಿ ಜನರಿಂದ ಹಣ ಸಂಗ್ರಹ ಮಾಡಿದ್ದರು. ಇವರ ಮಾತು ನಂಬಿ ಬ್ಯಾಂಕ್‌ನಲ್ಲಿ ಜನ ಹಣ ಇಟ್ಟಿದ್ದಾರೆ. ಆದರೆ, ಎಫ್‌ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್ ನೀಡಿಲ್ಲ ಎನ್ನಲಾಗಿದೆ. ಗ್ರಾಹಕರು ಹಣ ವಾಪಸ್ ಕೇಳಿದ್ದಕ್ಕೆ ಕೆಲವರಿಗೆ ಚೆಕ್ ನೀಡಿ ಪೂಜಾ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಂದೇ ಕುಟುಂಬದ ಮೂವರ ಆತ್ಮಹತ್ಯೆ: ಕ್ರೆಡಿಟ್ ಕಾರ್ಡ್ ವಂಚನೆ, ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ಬಂಧನ!
ಇನ್ನು ಹಣ ಸಂಗ್ರಹದ ಬಳಿಕ ಆರೋಪಿ ಎಚ್.ಎಸ್.ಪೂಜಾ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ದುಬೈಗೆ ಹಾರಲು ಅವರು ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿರುವ ಮಾಹಿತಿ ಇದ್ದು, ಅವರು ಪರಾರಿಯಾಗಲು ಯಾವುದೇ ಕಾರಣಕ್ಕೂ ಬಿಡಬಾರದು. ಅವರ ಪಾಸ್ಪೋರ್ಟ್ ರದ್ದು ಮಾಡಿ ವಿದೇಶ ಪ್ರಯಾಣವನ್ನು ತಡೆಯಬೇಕು. ಗ್ರಾಹಕರನ್ನು ವಂಚಿಸಿರುವ ಆಕೆಯನ್ನು ಬಂಧಿಸಿ, ತಮಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸರಿಗೆ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರು ಮನವಿ ಮಾಡಿದ್ದಾರೆ.