Elephant attack: ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಸಾವು; ಶಾಸಕ ಸಿಮೆಂಟ್ ಮಂಜು ಸಂತಾಪ
Elephant attack: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೈಕೆರೆವ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮೃತಪಟ್ಟಿರುವ ಷಣ್ಮುಖ ಅವರ ಸಾವಿಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಸಂತಾಪ ವ್ಯಕ್ತಪಡಿಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು

ವಿಶ್ವವಾಣಿ ಸುದ್ದಿಮನೆ, ಸಕಲೇಶಪುರ: ಕಾಫಿ ತೋಟದಲ್ಲಿ ಕಾಡಾನೆ ದಾಳಿಯಿಂದ ಮಾಲೀಕ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಬೈಕೆರೆವ ಗ್ರಾಮದಲ್ಲಿ ನಡೆದಿದೆ.
ಬೈಕೆರೆವ ಗ್ರಾಮದ ಷಣ್ಮುಖ(45) ಮೃತಪಟ್ಟವರು. ಅಮೃತೇಶ್ವರ ಕಾಫಿ ತೋಟದ ಮಾಲಿಕರಾಗಿದ್ದ ಇವರು ತೋಟದಲ್ಲಿ ಕೆಲಸ ಮಾಡಿಸಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಷಣ್ಮುಖರಿಗೆ 15 ಎಕರೆ ಕಾಫಿ ಕಾಫಿ ತೋಟವಿದೆ. ಇವರ ತೋಟದಲ್ಲಿ ರಾತ್ರಿಯಿಂದಲೇ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಈ ಬಗ್ಗೆ ಷಣ್ಮುಖರಿಗೆ ಮಾಹಿತಿ ಇತ್ತು ಎನ್ನಲಾಗಿದೆ. ಹೀಗಿದ್ದರೂ ಅವರು ಏಕೆ ತೋಟಕ್ಕೆ ಹೋದರು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನು ಮೃತಪಟ್ಟಿರುವ ಷಣ್ಮುಖ ಅವರ ಸಾವಿಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಸಂತಾಪ ವ್ಯಕ್ತಪಡಿಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಕಾಡಾನೆ ದಾಳಿಗೆ 15 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರಕಾರ ಪರಿಹಾರವನ್ನು 25 ಲಕ್ಷಕ್ಕೆ ಏರಿಸಿದೆ. ಈ ಪ್ರಕರಣದಲ್ಲಿ 15 ಲಕ್ಷ ರೂ. ಪರಿಹಾರ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಆದರೆ ಶಾಸಕರ ಆಗ್ರಹಕ್ಕೆ ಮಣಿದು 20 ಲಕ್ಷ ರೂಪಾಯಿ ಚೆಕ್ ವಿತರಿಸಲು ಇಲಾಖೆ ತೀರ್ಮಾನಿಸಿದೆ.
![]()
ಮಾನವ-ಕಾಡು ಪ್ರಾಣಿಗಳ ಸಂಘರ್ಷ ತಡೆಗೆ ಹಲವು ಕ್ರಮಗಳ ಅಗತ್ಯವಿದೆ. ಕ್ಷೇತ್ರದಲ್ಲಿ ಪದೇಪದೆ ಕಾಡಾನೆ ದಾಳಿಯಾಗುತ್ತಿದ್ದು, ಈ ಬಗ್ಗೆ ಸರಕಾರದ ಗಮನಕ್ಕೆ ಈಗಾಗಲೇ ತರಲಾಗಿದೆ. ಮುಂದಿನ ದಿನದಲ್ಲಿ ಈ ರೀತಿಯ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗುವುದು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಲಾಗುವುದು.
-ಸಿಮೆಂಟ್ ಮಂಜು, ಶಾಸಕ