ಹಾವೇರಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ನೂತನ ಸಚಿವ ಸಂಪುಟದಲ್ಲಿ (Karnataka cabinet) ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಸಂಪುಟ ಸೇರಲು ಹಾವೇರಿ ಜಿಲ್ಲೆಯ ಆರು ಶಾಸಕರ ನಡುವೆಯೂ ಭಾರಿ ಪೈಪೋಟಿ ಶುರುವಾಗಿದೆ. ಇದಕ್ಕಾಗಿ ಶಾಸಕರು ನಾನಾ ಕಸರತ್ತು ನಡೆಸುತ್ತಿರುವುದು ಕಂಡುಬಂದಿದೆ.
ಈ ಬಾರಿ ನಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಶಾಸಕರು ಹೈ ಕಮಾಂಡ್‌ಗೆ ದುಂಬಾಲು ಬಿದ್ದಿದ್ದಾರೆ. ಇದರಿಂದಾಗಿ, ಕಾಂಗ್ರೆಸ್ ಪಕ್ಷದಲ್ಲಿ ಒಳಬೇಗುದಿಯೊಂದಿಗೆ ಭಿನ್ನಮತವೂ ಸ್ಫೋಟಗೊಂಡಿದೆ.
ಇನ್ನು ನೂತನ ಸಚಿವ ಸಂಪುಟದಲ್ಲಿ ಹಾವೇರಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗುವ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಈಗಾಗಲೇ ಸಚಿವರಾಗಿ ಕೆಲಸ ಮಾಡಿದ್ದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಅವರು ಮತ್ತೊಮ್ಮೆ ಸಚಿವರಾಗುವ ಉತ್ಸಾಹದಲ್ಲಿದ್ದಾರೆ. ಆದರೆ, ಹೊಸಬರಿಗೆ ಅವಕಾಶ ನೀಡುವಂತೆ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಸಹ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ. ಇದಲ್ಲದೇ ಪ್ರಭಾವಿ ಕಾಂಗ್ರೆಸ್ ನಾಯಕ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಕೂಡ ಸಚಿವ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ.
ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ನಾಲ್ಕು ಬಾರಿ ವಿಜಯಶಾಲಿಯಾಗಿರುವ ಬ್ಯಾಡಗಿಯ ಶಾಸಕ ಬಸವರಾಜ ಶಿವಣ್ಣನವರ ಅವರು, 'ಕುರುಬ ಸಮುದಾಯದ ಶಾಸಕ' ಎಂದು ಹೇಳಿಕೊಂಡು ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಿದ್ದಾರೆ. 'ಲಂಬಾಣಿ ಸಮುದಾಯದ ಶಾಸಕ'ನಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂದು ರುದ್ರಪ್ಪ ಲಮಾಣಿ ಹೇಳುತ್ತಿದ್ದಾರೆ.
ಶ್ರೀನಿವಾಸ್ ಮಾನೆ ಅವರು, 'ಯೂತ್ ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಬಂದಿದ್ದೇನೆ. ಪಕ್ಷ ವಹಿಸಿದ ಅನ್ಯ ರಾಜ್ಯಗಳ ಚುನಾವಣೆ ಜವಾಬ್ದಾರಿಯನ್ನೂ ನಿರ್ವಹಿಸಿದ್ದೇನೆ. ಹೀಗಾಗಿ, ನನಗೆ ಅವಕಾಶ ನೀಡಬೇಕು' ಎಂದು ಒತ್ತಾಯಿಸುತ್ತಿದ್ದಾರೆ.
ಇದರ ನಡುವೆಯೇ ಬಸವರಾಜ ಶಿವಣ್ಣನವರ, 'ನನಗೆ ಸಿಗುವ ಸಚಿವ ಸ್ಥಾನ ತಪ್ಪಿಸಲು, ನಮ್ಮದೇ ಪಕ್ಷದ ಹಾನಗಲ್ ಶಾಸಕ ಅಪಪ್ರಚಾರ ಮಾಡುತ್ತಿದ್ದಾರೆ' ಎಂದು ನೇರವಾಗಿ ಆರೋಪಿಸಿರುವುದು ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ.
"ಒಗ್ಗಟ್ಟಾಗಿದ್ದೇವೆ" ಎಂದವರ ನಡುವೆಯೇ ಪೈಪೋಟಿ
'ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ' ಎಂದು ಘೋಷಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರ ನಡುವೆಯೇ ಈಗ ಸಚಿವ ಸ್ಥಾನಕ್ಕಾಗಿ ಜಟಾಪಟಿ ಶುರುವಾಗಿದೆ. 'ನನಗೆ ಸಚಿವ ಸ್ಥಾನ ಕೊಡಿ' ಎಂದು ಕೇಳುವ ಬದಲು, 'ಅವರಿಗೆ ಸಚಿವ ಸ್ಥಾನ ನೀಡಬೇಡಿ' ಎಂದು ಕೇಳಿಬರುತ್ತಿರುವ ಮಾತುಗಳೇ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಅಪಪ್ರಚಾರದ ವಿರುದ್ಧ ಸುದ್ದಿಗಾರರ ಎದುರು ಬೇಸರ ಹೊರಹಾಕಿರುವ ಶಾಸಕ ಬಸವರಾಜ ಶಿವಣ್ಣನವರ, 'ರಾಜಕೀಯ ಮಾಡಬೇಕು. ಆದರೆ, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಮಾಡಬಾರದು. ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಅವರೂ ಕೇಳಲಿ. ನಾನೂ ಕೇಳುತ್ತೇನೆ. ಯಾರಿಗೆ ಕೊಟ್ಟರೂ ನಾನು ಖುಷಿ ಪಡುತ್ತೇನೆ. ಅದನ್ನು ಬಿಟ್ಟು, ನನ್ನ ಆರೋಗ್ಯ ಸರಿ ಇಲ್ಲವೆಂದು ಹೈಕಮಾಂಡ್‌ನ ಮುಖಂಡರ ಮುಂದೆ ಹೇಳುವುದು ಸರಿಯಲ್ಲ. ಇದರಿಂದ ನನ್ನ ಮನಸ್ಸಿಗೂ ನೋವಾಗಿದೆ' ಎಂದಿದ್ದಾರೆ.
'ಶ್ರೀನಿವಾಸ್ ಮಾನೆ, ಹೈಕಮಾಂಡ್‌ನಲ್ಲಿ ತುಂಬಾ ಪ್ರಭಾವಿ ವ್ಯಕ್ತಿ. ಕಾಂಗ್ರೆಸ್ ಮುಖಂಡರನ್ನು ಹಿಂದಿಕ್ಕಿ ಧಾರವಾಡ ಜಿಲ್ಲೆಯಿಂದ ಹಾವೇರಿ ಜಿಲ್ಲೆಗೆ ಬಂದು ಬೆಳೆದವರು. ಅವರು ಇಲ್ಲಿ ಗೆಲ್ಲಲು ನಾನೂ ಸಹಾಯ ಮಾಡಿದ್ದೇನೆ. ಗೆದ್ದಿದ್ದಾರೆ. ಇನ್ನೂ ಬೆಳೆಯಲಿ. ಇನ್ನೊಬ್ಬರನ್ನು ನೋಯಿಸಬಾರದು. ಆರೋಗ್ಯ ಸರಿಯಿಲ್ಲ. ವಯಸ್ಸಾಗಿದೆ ಎಂದು ಆ ಪುಣ್ಯಾತ್ಮ ಹೇಳಿದ್ದಾರೆ. ಆ ಸುದ್ದಿ ನನನಗೂ ಬಂದಿದೆ. ಅದಕ್ಕೆ ನಾನು ಈಗ ಮಾತನಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಿಗೆ ಮಾನೆ ಪತ್ರ
ಶಾಸಕ ಬಸವರಾಜ ಶಿವಣ್ಣನವರ ಅವರ ಹೇಳಿಕೆ ಚರ್ಚೆಗೆ ಕಾರಣವಾಗುತ್ತಿದ್ದಂತೆ, ಶಾಸಕ ಶ್ರೀನಿವಾಸ್ ಮಾನೆ ಅವರು ಪ್ರತಿಕ್ರಿಯಿಸಿದ್ದಾರೆ. ನವದೆಹಲಿಗೆ ಹೋಗಿರುವ ಅವರು ಅಲ್ಲಿಂದಲೇ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರಿಗೆ ಪತ್ರ ಬರೆದಿದ್ದಾರೆ.
'ಬಸವರಾಜ ಶಿವಣ್ಣನವರ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಹಿರಿಯ ಶಾಸಕರ ಈ ಹೇಳಿಕೆ ನನ್ನ ಮನಸ್ಸಿಗೆ ನೋವುಂಟು ಮಾಡಿದೆ' ಎಂದು ಮಾನೆ ಅಸಮಾಧಾನ ಹೊರಹಾಕಿದ್ದಾರೆ.
'ಜಿಲ್ಲೆಯಲ್ಲಿ ಯಾರಿಗಾದರೂ ಸಚಿವ ಸ್ಥಾನ ಸಿಕ್ಕರೂ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಇರುವುದಾಗಿ ಹೇಳಿಕೊಂಡು ಬಂದಿದ್ದೇನೆ. ಹೀಗಿರುವಾಗ, ನಾನು ಯಾವ ನಾಯಕರ ಮುಂದೆ ಅಪಪ್ರಚಾರ ಮಾಡಿದ್ದೇನೆ ಎನ್ನುವ ಬಗ್ಗೆ ತಾವು ಬಸವರಾಜ ಶಿವಣ್ಣನವರ ಅವರಿಂದ ಮಾಹಿತಿ ಪಡೆದುಕೊಂಡು, ತಾವೇ ಆಯಾ ನಾಯಕರ ಬಳಿ ತೆರಳಿ ಸ್ಪಷ್ಟನೆ ಪಡೆದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಂತೆ ಕೋರುತ್ತೇನೆ. ಇಂತಹ ಹೇಳಿಕೆಗಳಿಂದ ಅನಾವಶ್ಯಕ ಗೊಂದಲ ಸೃಷ್ಟಿಯಾಗಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಾರದು. ನಾನೀಗ ನವದೆಹಲಿಯಲ್ಲಿ ಇರುವುದರಿಂದ, ಈ ಬಗ್ಗೆ ತಮಗೆ ವಾಟ್ಸಾಪ್ ಮೂಲಕ ಪತ್ರ ಬರೆಯುತ್ತಿದ್ದೇನೆ' ಎಂದು ಮಾನೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.
'ಮೂವರಲ್ಲಿ ಒಬ್ಬರಿಗೆ ಸಚಿವ ಸ್ಥಾನ'
'ಜಿಲ್ಲೆಯ ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಹಾಗೂ ಶ್ರೀನಿವಾಸ್ ಮಾನೆ ಅವರಲ್ಲಿ ಒಬ್ಬರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಖಚಿತ' ಎಂದು ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ತಿಳಿಸಿದರು. 'ಮೂವರು ಸಮರ್ಥರಿದ್ದಾರೆ. ಜೊತೆಗೆ, ಹಿರಿಯರು ಹಾಗೂ ಅನುಭವಿಗಳು. ಎಲ್ಲರೂ ಹೈಕಮಾಂಡ್ ಮುಖಂಡರ ಎದುರು ತಮ್ಮ ಬೇಡಿಕೆ ಇಟ್ಟಿದ್ದಾರೆ. ಮೂವರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಿ, ಇಬ್ಬರಿಗೆ ಬೇರೆ ಸ್ಥಾನಗಳನ್ನು ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ' ಎಂದರು.
'ಹಾವೇರಿ ಜಿಲ್ಲೆಯ ಆರೂ ಶಾಸಕರು, ಕಾಂಗ್ರೆಸ್‌ನವರು. ಬೇರೆ ಜಿಲ್ಲೆಯ ಶಾಸಕರು, ನಮ್ಮ ಜಿಲ್ಲೆಯ ಉಸ್ತುವಾರಿ ಆಗುತ್ತಿದ್ದಾರೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈ ಬಾರಿ ನಮ್ಮದೇ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ನಾವೂ ಒತ್ತಾಯಿಸುತ್ತಿದ್ದೇವೆ. ನವದೆಹಲಿಗೂ ಹೋಗಿ ಬಂದಿದ್ದೇನೆ' ಎಂದು ಹೇಳಿದರು.
ಡಿಕೆ ಶಿವಕುಮಾರ್ ಸಂಪುಟ ಸೇರಲು ಕೈ ನಾಯಕರ ಕಸರತ್ತು; ಸಚಿವ ಸ್ಥಾನ ಯಾರಿಗೆ?
ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಘಟಕದ ಸಂಜೀವಕುಮಾರ ನೀರಲಗಿ ಪ್ರತಿಕ್ರಿಯಿಸಿ, ಜಿಲ್ಲೆಯ ಆರೂ ಶಾಸಕರು ಒಗ್ಗಟ್ಟಾಗಿದ್ದಾರೆ. ಶಾಸಕರಿಬ್ಬರ ನಡುವೆ ಸಣ್ಣದೊಂದು ಮನಸ್ತಾಪವಾಗಿದ್ದು, ಅದನ್ನು ಪರಸ್ಪರ ಚರ್ಚಿಸಿ ಸರಿ ಮಾಡುತ್ತೇವೆ. ಒಗ್ಗಟ್ಟಿನಿಂದ ಎಲ್ಲರೂ ಮುನ್ನಡೆಯುತ್ತೇವೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ.