ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Elephant Attack: ಹಾಸನದಲ್ಲಿ 2 ದಿನಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ; 10 ಸಲಗಗಳ ಸೆರೆಗೆ ಸರ್ಕಾರ ಆದೇಶ

ಹಾಸನ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ 10 ಗಂಡು ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ, ಸುರಕ್ಷತಾ ದೃಷ್ಟಿಯಿಂದ ಹಾಗೂ ಅವುಗಳಿಂದ ಉಂಟಾಗಬಹುದಾದ ಪ್ರಾಣಹಾನಿ ಹಾಗೂ ಇನ್ನಿತರ ದಾಳಿ ತಪ್ಪಿಸುವ ಸಲುವಾಗಿ ಆನೆಗಳನ್ನು ಸೆರೆ ಹಿಡಿಯಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಹಾಸನ: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ (Elephant Attack) ಎರಡು ದಿನಗಳ ಅಂತರದಲ್ಲಿ ಇಬ್ಬರು ಬಲಿಯಾಗಿರುವ ಬೆನ್ನಲ್ಲೇ ಸ್ಥಳೀಯರ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ, ಜನರಲ್ಲಿ ಭೀತಿ ಸೃಷ್ಟಿಸಿರುವ ಹತ್ತು ಕಾಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಆದೇಶ ಹೊರಡಿಸಿದೆ.

ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ ಶನಿವಾರ ಜಯಮ್ಮ, ಇಂದು ನಾಗೇನಹಳ್ಳಿ ಗ್ರಾಮದಲ್ಲಿ ಹಫೀಝುರ್ ರೆಹಮಾನ್ ಆನೆ ದಾಳಿಯಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಸೆರೆಗೆ ರಾಜ್ಯ ಪ್ರಧಾನ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಮಹತ್ವದ ಸೂಚನೆ ನೀಡಿದ್ದಾರೆ.

ಹಾಸನ ವಿಭಾಗದಲ್ಲಿ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗಿರುವ 10 ಗಂಡು ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ, ಸುರಕ್ಷತಾ ದೃಷ್ಟಿಯಿಂದ ಹಾಗೂ ಅವುಗಳಿಂದ ಉಂಟಾಗಬಹುದಾದ ಪ್ರಾಣಹಾನಿ ಹಾಗೂ ಇನ್ನಿತರ ದಾಳಿ ಮತ್ತು ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಆನೆಗಳನ್ನು ಸೆರೆ ಹಿಡಿಯಬೇಕು. ಬಳಿಕ ಆನೆಗಳ ಆರೋಗ್ಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವುಗಳ ಆವಾಸಕ್ಕೆ ಸೂಕ್ತವಾಗಿರುವ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ವನ್ಯಜೀವಿ (ರಕ್ಷಣಾ) ಕಾಯ್ದೆ, 1972ರ ಸೆಕ್ಷನ್ 11(1)(ಎ) ರನ್ವಯ ಅನುಮತಿ ನೀಡಲಾಗಿದೆ. ಆನೆ ಸೆರೆ ಕಾರ್ಯಾಚರಣೆಗೆ ಉಲ್ಲೇಖ (3)ರ ಆದೇಶದಂತೆ ಪುನರ್ ರಚಿಸಲಾಗಿರುವ ಸಾಕಾನೆ ತಂಡ ಎ ಮತ್ತು ಸಿ ಕುಮ್ಕಿ ಆನೆಗಳನ್ನು ಉಪಯೋಗಿಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.

ಕಾಡಾನೆ ದಾಳಿಗೆ ಹಾಸನದಲ್ಲಿ ಇಬ್ಬರು ಪ್ರಾಣ ಬಿಟ್ಟಿರುವ ನಡುವೆಯೇ ಹಾಸನ-ಚಿಕ್ಕಮಗಳೂರು ಗಡಿ ಭಾಗದಲ್ಲಿ 53 ಕಾಡಾನೆಗಳು ಪ್ರತ್ಯಕ್ಷವಾಗಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಗೋಣಿಬೀಡು ಗ್ರಾಮಕ್ಕೆ ಕೂಗಳತೆ ದೂರದಲ್ಲಿ ಗಜಪಡೆ ಕಂಡುಬಂದಿದ್ದು, ಯಾವುದೇ ಕ್ಷಣದಲ್ಲಿ ಅವು ಗೋಣಿಬೀಡು ‌ಪ್ರವೇಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕಾಫಿತೋಟದ ಕಾರ್ಮಿಕರು ಜಾಗೃತಿಯಿಂದ ಇರುವಂತೆ ಸೂಚನೆ ನೀಡಲಾಗಿದೆ.