ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬದಲಾಗಬೇಕಿರುವುದು ಮಕ್ಕಳಲ್ಲ, ಪೋಷಕರು, ಶಿಕ್ಷಕರು: ಸದ್ಗುರು ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: ಮಕ್ಕಳನ್ನು ಬೆಳೆಸಲು ಪೋಷಕರು ಹೆಚ್ಚು ಗಮನಕೊಡುತ್ತಿಲ್ಲ ಎನ್ನುವುದು ವಿಷಾದಕರ ಸತ್ಯ. ಶಿಕ್ಷಕರೂ ಅಷ್ಟೇ, ಕೇವಲ ತರಗತಿಯ ಪಾಠದಿಂದ ಕಲಿಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ನನ್ನ ಪ್ರಕಾರ ಬದಲಾಗಬೇಕಿರುವುದು ಮಕ್ಕಳಲ್ಲ; ಪೋಷಕರು ಮತ್ತು ಶಿಕ್ಷಕರು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಪ್ರಾಯಪಟ್ಟಿದ್ದಾರೆ.

ಸದ್ಗುರು ಶ್ರೀ ಮಧುಸೂದನ ಸಾಯಿ.

ಹಾಸನ, ಸೆ.01: ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಬೇಗ ಅರ್ಥವಾಗುತ್ತದೆ. ಅವರ ವರ್ತನೆಯು ನಿರಂತರ ಮಾನವ ವಿಕಸನದ ಒಂದು ಭಾಗ. ಅವರ ವರ್ತನೆ ಸಹಜವಾಗಿದೆ. ಅವರು ಬದಲಾಗಲು ಸಾಧ್ಯವಿಲ್ಲ. ಶಿಕ್ಷಕರು ಮತ್ತು ಪೋಷಕರು ಇದನ್ನು ಅರ್ಥಮಾಡಿಕೊಂಡು ಬದಲಾಗಬೇಕಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ನಗರದಲ್ಲಿ ಮಂಗಳವಾರ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ 'ವಿಜಯ ಕರ್ನಾಟಕ' ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

'ಈ ಮಕ್ಕಳಿಗೆ ಭಯ ಇಲ್ಲ. 15 ನಿಮಿಷಗಳಿಗಿಂತಲೂ ಹೆಚ್ಚಿನ ಏಕಾಗ್ರತೆ ಅವರಲ್ಲಿ ನಿಲ್ಲುವುದು ಕಷ್ಟ. ಅವರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಮನಸ್ಸು ಅರ್ಥ ಮಾಡಿಕೊಂಡು ನಾವು ಸಮಾಧಾನದಿಂದ ಉತ್ತರಿಸಿದರೆ ಬದಲಾವಣೆ ಖಂಡಿತ ಸಾಧ್ಯವಿದೆ' ಎಂದು ಸದ್ಗುರುಗಳು ವಿಶ್ಲೇಷಿಸಿದರು.

Sadguru Sri Madhusudan Sai

'ಮಕ್ಕಳನ್ನು ಬೆಳೆಸಲು ಪೋಷಕರು ಹೆಚ್ಚು ಗಮನಕೊಡುತ್ತಿಲ್ಲ ಎನ್ನುವುದು ವಿಷಾದಕರ ಸತ್ಯ. ಶಿಕ್ಷಕರೂ ಅಷ್ಟೇ, ಕೇವಲ ತರಗತಿಯ ಪಾಠದಿಂದ ಕಲಿಕೆ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ನನ್ನ ಪ್ರಕಾರ ಬದಲಾಗಬೇಕಿರುವುದು ಮಕ್ಕಳಲ್ಲ; ಪೋಷಕರು ಮತ್ತು ಶಿಕ್ಷಕರು' ಎಂದು ಅವರು ಅಭಿಪ್ರಾಯಪಟ್ಟರು.

Divya Sanje

'ಸಮಾಜದಲ್ಲಿ ಬದಲಾವಣೆ ಬರಲು ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಇದು ಸಾಧ್ಯವಾಗಲು ನೀತಿ ಪಾಠಗಳು ಮತ್ತೆ ಶಿಕ್ಷಣ ವ್ಯವಸ್ಥೆಯ ಭಾಗವಾಗಬೇಕು. ಶಾಲಾ ಚಟುವಟಿಕೆಗಳಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿಶ್ವವಿದ್ಯಾಲಯಗಳಲ್ಲಿ ಕೌಶಲ ಆಧರಿತ ಶಿಕ್ಷಣಕ್ಕೆ ಒತ್ತು ಸಿಗಬೇಕು. ಇಂದಿನ ಉದ್ಯೋಗಿಗಳ ಪೈಕಿ ಶೇ 92 ರಷ್ಟು ಮಂದಿಯ ಓದಿಗೂ-ಕೆಲಸಕ್ಕೂ ಸಂಬಂಧವೇ ಇಲ್ಲ' ಎಂದು ಸದ್ಗುರುಗಳು ವಿವರಿಸಿದರು.

Divya sanje program

ವೈವಿಧ್ಯತೆ ನಮ್ಮ ದೇಶದ ನಿಜವಾದ ಶಕ್ತಿ. ಇಂಥ ದೇಶ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಹಲವು ಆಕ್ರಮಣಗಳ ನಂತರವೂ ನಮ್ಮ ದೇಶದಲ್ಲಿ ಅಧ್ಯಾತ್ಮ ಮರೆಯಾಗಲಿಲ್ಲ. ಪ್ರಗತಿಯ ಅರ್ಥವನ್ನು ಸರಿಯಾಗಿ ವ್ಯಾಖ್ಯಾನಿಸಬೇಕು. ರಾವಣನಂಥ ರಾಕ್ಷಸ ಸ್ವರ್ಣಲಂಕೆ ನಿರ್ಮಿಸಿಕೊಂಡಿದ್ದ. ಅದನ್ನು ಪ್ರಗತಿ ಎನ್ನಲು ಸಾಧ್ಯವೇ? ಇಂದಿಗೂ ಜನರು ರಾಮರಾಜ್ಯವನ್ನಷ್ಟೇ ನೆನಪಿಸಿಕೊಳ್ಳುತ್ತಾರೆ. ಸರ್ವಾಂಗೀಣ ಪ್ರಗತಿಗೆ ನಾವು ಒತ್ತು ಕೊಡಬೇಕು ಎಂದು ನುಡಿದರು.

Divya Sanje in Hassan

ಜೀವನ ಶಿಕ್ಷಣ ಕೊಟ್ಟ ಸಂಸ್ಥೆ

ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಕಥನ ಹಂಚಿಕೊಂಡ ಶ್ರೀ ಸತ್ಯ ಸಾಯಿ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಯೂ ಆಗಿರುವ ಅರಸೀಕೆರೆ ತಾಲೂಕಿನ ಮೋಹನ್‌ಕುಮಾರ್ ಕೆ.ಎಂ., ಅತ್ಯಂತ ಬಡಕುಟುಂಬದಿಂದ ಬಂದವನು ನಾನು. ಉನ್ನತ ಶಿಕ್ಷಣವು ನನ್ನ ಪಾಲಿಗೆ ಕನಸಷ್ಟೇ ಅಗಿತ್ತು. ಆದರೆ ಇಂದು ಸಂಸ್ಥೆಯು ನನಗೆ ಸರ್ವವನ್ನೂ ಕೊಟ್ಟಿದೆ. ನಿಸ್ವಾರ್ಥ ಸೇವೆ, ದೇಶಭಕ್ತಿ ಮತ್ತು ಸಮಾಜಸೇವೆಯ ಮನೋಭಾವ ರೂಪಿಸಿದೆ. ಅದಕ್ಕೂ ಮಿಗಿಲಾಗಿ ಒಬ್ಬ ನಾಯಕನನ್ನಾಗಿ ಬೆಳೆಸುತ್ತಿದೆ ಎಂದು ವಿವರಿಸಿದರು. ಪ್ರಸ್ತುತ ಅವರು ಸಂಸ್ಥೆಯ ಕಲಬುರಗಿ ಕ್ಯಾಂಪಸ್‌ನಲ್ಲಿ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಬೇಲೂರು ಶಾಸಕ ಎಚ್.ಕೆ.ಸುರೇಶ್, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಆಲೂರು, ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತಾರಾನಾಥ್, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ ಉಪಸ್ಥಿತರಿದ್ದರು. ಟಿ.ಸಿ.ಪ್ರವೀಣ್ ಕುಮಾರ್ ನಿರೂಪಿಸಿದರು.

ಸೇವಾಯಜ್ಞಕ್ಕೆ ಎಲ್ಲರೂ ಕೈಜೋಡಿಸೋಣ: ವಿನಯ್ ಗುರೂಜಿ

ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಒಂದು ಮಠ, ಮಂದಿರದ ಚೌಕಟ್ಟು ಹಾಕಿಕೊಂಡು ಆರಾಮಾಗಿ ಇರಬಹುದು. ಆದರೆ ಅವರು ಕಳೆದ 12 ವರ್ಷಗಳಿಂದ ಅಕ್ಷರಶಃ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದು ಯಜ್ಞ, ಕೇವಲ ಒಂದು ಬದುಕು ಅಲ್ಲ ಎಂದು ವಿವರಿಸಿದರು.

ಮುದ್ದೇನಹಳ್ಳಿಯಲ್ಲಿ ಸದ್ಗುರುಗಳು ಮಕ್ಕಳ ಮಿದುಳು ವಿಕಾಸಗೊಳಿಸುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯದ ಅಧಿಕಾರಕ್ಕೆ ಅವಧಿ ಇರಬಹುದು ಆದರೆ ಧರ್ಮಕ್ಕೆ ಎಂದಿಗೂ ಅವಧಿ ಇರುವುದಿಲ್ಲ. ಭಾರತೀಯ ಪರಂಪರೆಯು ದಾನಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಹೀಗಾಗಿ ಮುದ್ದೇನಹಳ್ಳಿಯಲ್ಲಿ ಹೂಡಿಕೆ ಮತ್ತು ಪ್ರತಿಫಲ ಎನ್ನುವ ಲೆಕ್ಕಾಚಾರ ಇಲ್ಲ. ಅಲ್ಲಿ ವಿದ್ಯೆಯ ಮೂಲಕ ಸಮಾಜ ಪರಿವರ್ತನೆಯ ಮಹಾನ್ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಸದ್ಗುರುಗಳಿಂದ ಸಂಸ್ಕಾರ ಪಡೆದ ಮಕ್ಕಳು ಸಕ್ರಿಯರಾಗಿ ಕೆಲಸ ಆರಂಭಿಸಿದ ನಂತರ ಇಡೀ ಜಗತ್ತು ಹೇಗೆ ಬದಲಾಗುತ್ತದೆ ಎನ್ನುವುದನ್ನು ನೋಡಲು ನಾನು ಕಾಯುತ್ತಿದ್ದೇನೆ. ಮಕ್ಕಳಿಗೆ ಆಶ್ರಯ, ಆರೋಗ್ಯ ಮತ್ತು ಅಕ್ಷರದ ಜತೆಗೆ ಪರಿಸರ ಹಾಗೂ ರಾಷ್ಟ್ರ ಭಕ್ತಿಯನ್ನೂ ಸದ್ಗುರುಗಳು ಕಲಿಸುತ್ತಿದ್ದಾರೆ. ಹಾಸನದ ಜನರು ಈ ಯಜ್ಞದಲ್ಲಿ ಸಕ್ರಿಯರಾಗಿ ಪಾಲ್ಗೊಂಡರೆ ಈ ಜಿಲ್ಲೆಯೂ ಪ್ರಜ್ವಲಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇಡೀ ಜಗತ್ತನ್ನು ಬೆಸೆಯುವ ರಾಮಸೇತುವೊಂದನ್ನು ಸದ್ಗುರುಗಳು ನಿರ್ಮಿಸುತ್ತಿದ್ದಾರೆ. ನಾವು ಲಕ್ಷ್ಮಣ, ಆಂಜನೇಯ ಆಗದಿದ್ದರೂ ಅಳಿಲಂತೂ ಆಗಬಹುದು. ಈ ಮಹಾನ್ ಸೇವಾಯಜ್ಞದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಾವೆಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

Divya sanje programme

ದಶಮಾನೋತ್ಸವ ಸಂಭ್ರಮದಲ್ಲಿ ಹಾಸನ ಕ್ಯಾಂಪಸ್

ಹಾಸನ ಜಿಲ್ಲೆ ಬೇಲೂರು ಸಮೀಪದ ಚನ್ನೇನಹಳ್ಳಿ ಸಮೀಪ ಇರುವ ಇರುವ ಶ್ರೀ ಸತ್ಯ ಸಾಯಿ ಸತ್ಯನಿಕೇತನಂ ಗುರುಕುಲಂ 2016ರ ಜೂನ್‌ 1ರಂದು ಆರಂಭವಾಯಿತು. ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಭಾಗವಾಗಿರುವ ಈ ಕ್ಯಾಂಪಸ್, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆ. ಇದುವರೆಗೆ 438 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯವರು, ಶೇ.75ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳ ವಿದ್ಯಾರ್ಥಿಗಳು ಹಾಗೂ ಶೇ 55 ಮಂದಿ ಪ್ರಥಮ ತಲೆಮಾರಿನ ಕಲಿಕಾರ್ಥಿಗಳು ಎಂಬುದು ವಿಶೇಷ.

ಹೆಚ್ಚುತ್ತಿರುವ ವಿಚ್ಛೇದನಗಳಿಗೆ ಏನು ಪರಿಹಾರ?

"ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ವಿಚ್ಛೇದನಗಳು ಕುಟುಂಬವನ್ನು ಒಡೆಯುತ್ತಿರುವ ಕುರಿತ ಪ್ರಶ್ನೆಗೆ ಸದ್ಗುರುಗಳು ಕೊಟ್ಟ ಉತ್ತರ ಜನರ ಗಮನ ಸೆಳೆಯಿತು.

ವೈಯಕ್ತಿಕತೆಗೆ ಹೆಚ್ಚು ಮಹತ್ವ ಕೊಡುವ ಸಮಾಜ ಇದಾಗುತ್ತಿದೆ. ಹೆಂಡತಿಯು ಮ್ಯಾಗಿಯನ್ನಷ್ಟೇ ಮಾಡುತ್ತಾಳೆ ಎನ್ನುವ ಕಾರಣಕ್ಕೆ ವಿಚ್ಛೇದನದ ನೊಟೀಸ್ ಕೊಟ್ಟಿದ್ದ ಗಂಡನ ಬಗ್ಗೆ ಬಳ್ಳಾರಿಯಿಂದ ವರದಿಯೊಂದು ಪ್ರಕಟವಾಗಿತ್ತು. ಒಂದು ಕುಟುಂಬವಾಗಿ ಎರಡು ಜೀವಗಳು ಒಟ್ಟಾಗಿ ಉಳಿಯಲು ಸಣ್ಣಪುಟ್ಟ ತ್ಯಾಗಗಳು ಬೇಕಾಗುತ್ತವೆ. ವಿವಾಹವು ಆಧ್ಯಾತ್ಮಿಕ ಬದ್ಧತೆ ಬಯಸುವ, ದಂಪತಿಯನ್ನು ಸಾಧನೆಯ ಮೂಲಕ ದೇವರ ಹತ್ತಿರಕ್ಕೆ ಕೊಂಡೊಯ್ಯುವ ಸಂಸ್ಥೆ ಎನ್ನುವ ಅರಿವು ಸಮಾಜದಲ್ಲಿ ಮತ್ತೆ ಮೂಡಬೇಕಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದಿಸಿದರು.

ಮೊದಲೂ ಗಂಡ-ಹೆಂಡತಿ ನಡುವೆ ಜಗಳು ಇರುತ್ತಿದ್ದವು. ಆದರೆ ಮಕ್ಕಳಿಗಾಗಿ ಅವರು ತ್ಯಾಗ ಮಾಡುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಗಂಡ-ಹೆಂಡತಿ ಇಬ್ಬರಲ್ಲಿಯೂ ಅತಿಯಾಗಿ 'ನಾನು' ಇರುವುದರಿಂದ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಕೆಟ್ಟ, ಕಲುಷಿತ, ಹಿಂಸಾ ಸಂಬಂಧಗಳಲ್ಲಿ ಉಳಿಯಬೇಕು ಎಂದು ನಾನು ಹೇಳುವುದಿಲ್ಲ. ಆದರೆ ಮಕ್ಕಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಸಣ್ಣಪುಟ್ಟ ತ್ಯಾಗಗಳ ಮೂಲಕ ವಿವಾಹ ಉಳಿಸಿಕೊಳ್ಳಲು ಯೋಚಿಸಬೇಕು ಎಂದು ಸಲಹೆ ಮಾಡುತ್ತೇನೆ ಎಂದು ಸದ್ಗುರು ಹೇಳಿದರು.

ದೊಡ್ಡಮಗ್ಗೆಯಿಂದ ದೇಶಕ್ಕೆ ಭರವಸೆ ಕೊಟ್ಟ ಕೃಷಿಕ

ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ದೊಡ್ಡಮಗ್ಗೆ ಗ್ರಾಮದ ಕೃಷಿಕ ಡಾ ಎಂ.ಸಿ. ರಂಗಸ್ವಾಮಿ ಅವರಿಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ: ಶ್ರೀ ಮಧುಸೂಧನ್ ಸಾಯಿ

ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಅವರು, ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಮಹತ್ವದ ಸಮಾಜ ಸೇವೆಯನ್ನು ಶ್ಲಾಘಿಸಿದರು. ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹಾಗೂ ತಮ್ಮಿಂದ ಆಗುವ ಎಲ್ಲ ನೆರವು ಒದಗಿಸುವುದಾಗಿ ಭರವಸೆ ನೀಡಿದರು. 30 ವರ್ಷಗಳ ಹಿಂದೆ 'ಬಂಗಾರದ ಮನುಷ್ಯ' ಸಿನಿಮಾ ನೋಡಿ ನಾನು ಮಾದರಿ ರೈತನಾಗುವ ನಿರ್ಧಾರ ಮಾಡಿದೆ. ಇಂದು ಸಾವಿರಾರು ಆಕಳು ಸಾಕಿದ್ದೇವೆ. ಪರಿಸರ ಸ್ನೇಹಿ ಕೃಷಿ ಪದ್ಧತಿ ಅನುಸರಿಸುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ಮೂವರು ಐಎಎಸ್ ಅಧಿಕಾರಿಗಳಿದ್ದಾರೆ. ನಾವು ನಾಲ್ವರು ಅಣ್ಣತಮ್ಮಂದಿರು ಕೂಡು ಕುಟುಂಬವಾಗಿ ಮುನ್ನಡೆಯುತ್ತಿದ್ದೇವೆ ಎಂದು ವಿವರಿಸಿದರು.