ಹಾಸನ: ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಾಮಸಮುದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚಿರಂತ್ (16) ಎಂದು ಗುರುತಿಸಲಾಗಿದೆ.
ಪರೀಕ್ಷೆ ಮುಗಿಸಿ ಬಸ್‍ನಲ್ಲಿ ಊರಿಗೆ ಬಂದಿದ್ದ ಬಾಲಕ ರಸ್ತೆ ದಾಟುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿಯಾಗಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅತಿಯಾದ ವೇಗ ಹಾಗೂ ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಸ್ಥಳೀಯರು ಆರೋಪಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ಮಂಡ್ಯದಲ್ಲಿ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮಲ್ಲಿಗೆರೆ ಗ್ರಾಮದ ನಿವಾಸಿ ವಿಶ್ವ (55) ಮೃತರು.
ಖಾಸಗಿ ಗುತ್ತಿಗೆದಾರರ ಬಳಿ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದ ವಿಶ್ವ ಅವರು, ಹೆಬ್ಬಾಡಿ ಗ್ರಾಮದಲ್ಲಿ ವಿದ್ಯುತ್ ಕಂಬವನ್ನೇರಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ, ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ. ಇದರಿಂದ ವಿಶ್ವ ಅವರು ಕಂಬದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.
ವಿದ್ಯುತ್ ತೀವ್ರತೆಗೆ ವಿಶ್ವ ಅವರ ಮೃತದೇಹ ಕಂಬದ ಮೇಲೆಯೇ ನೇತಾಡುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಸೆಸ್ಕ್ ಅಧಿಕಾರಿಗಳು ಹಾಗೂ ಅರಕೆರೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.