ಹಾವೇರಿ: ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನವರಾತ್ರಿ ಪ್ರಯುಕ್ತ ಮಾಲತೇಶ ದೇವರ ಕಾರ್ಣಿಕೋತ್ಸವ (Devaragudda Karnikotsava) ನಡೆಯಿತು. ಈ ಬಾರಿ ಗೊರವಯ್ಯ "ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತಲೇ ಪರಾಕ್" ಎಂಬ ದೈವವಾಣಿ ನುಡಿದಿದ್ದಾರೆ.
ಪ್ರತಿವರ್ಷವೂ ನವರಾತ್ರಿ ಹಬ್ಬದಲ್ಲಿ ಐತಿಹಾಸಿಕ ಮಾಲತೇಶ ಕಾರ್ಣಿಕೋತ್ಸವ ನಡೆಯುತ್ತದೆ. ಈ ಬಾರಿ ದೇವರಗುಡ್ಡದ ಕರಿಯಾಲ್ ಕಟ್ಟಿಯಲ್ಲಿ ನಾಗಪ್ಪ ಅಜ್ಜ ಉರ್ಮಿ ನುಡಿದ ಕಾರ್ಣಿಕ ನುಡಿಯನ್ನು ಭಕ್ತರು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

ಗೊರವಯ್ಯ ಸ್ವಾಮಿ ಒಂಬತ್ತು ದಿನಗಳ ಕಾಲ ಉಪವಾಸ ವೃತ ಕೈಗೊಂಡು 15 ಅಡಿ ಎತ್ತರದ ಬಿಲ್ಲನ್ನೇರಿ ವರ್ಷದ ಕಾರ್ಣಿಕ ನುಡಿದಿದ್ದಾರೆ. ದೈವವಾಣಿಯ ಪ್ರಕಾರ, ಈ ಬಾರಿ ಮುಂಗಾರು ಮಳೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ, ಹಿಂಗಾರು ಮಳೆ ಉತ್ತಮವಾಗುವ ಮತ್ತು ರೈತರು ಸಮೃದ್ಧವಾಗಿ ಬೆಳೆ ಬೆಳೆಯುವ ಆಶಯ ವ್ಯಕ್ತವಾಗಿದೆ. ಮಳೆ ಉತ್ತಮವಾಗಿ ಸುರಿದು, ಬೆಳೆಗಳು ಸಮೃದ್ಧವಾಗಿ ಬೆಳೆದರೆ ರೈತರ ಸಂಕಷ್ಟಗಳು ದೂರವಾಗಬಹುದು ಎಂಬ ಆಶಾಭಾವನೆ ಮೂಡಿದೆ.
ರಾಜಕೀಯವಾಗಿ ಸಹ ಕಾರ್ಣಿಕ ಕುತೂಹಲ ಮೂಡಿಸಿದೆ. ರಾಜಕೀಯದ ದೃಷ್ಟಿಯಿಂದ ವಿಶ್ಲೇಷಿಸಿರುವ ಪ್ರಧಾನ ಅರ್ಚಕ ಸಂತೋಷಭಟ್ಟ ಗುರೂಜಿ, ಕೆಂಪುಕೋಟೆಯ ಮೇಲೆ ಸಾಧು-ಸಂತರು ಧ್ವಜ ಹಾರಿಸುವ ಕಾಲ ಬರಬಹುದು. ಮುಂದಿನ ದಿನಗಳಲ್ಲಿ ಸಾಧು-ಸಂತರಿಗೆ ದೇಶದ ಆಡಳಿತದಲ್ಲಿ ಪ್ರಮುಖ ಪಾತ್ರ ಸಿಗಬಹುದು. ಸಾಧು-ಸಂತರು ಪ್ರಧಾನಿಯಾಗುವ ಸಾಧ್ಯತೆಯ ಕುರಿತ ಮುನ್ಸೂಚನೆ ಇದರಲ್ಲಿ ಅಡಗಿದೆ ಎಂಬ ವಿಶ್ಲೇಷಣೆ ಮಾಡಿದ್ದಾರೆ.