ಹಾವೇರಿ, ನ.04: ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಆಡಳಿತದ ಅರಾಜಕತೆ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷದ ಧಾರವಾಡ ವಿಭಾಗದ ವತಿಯಿಂದ ಬುಧವಾರ ನಗರದಲ್ಲಿ (Haveri News) 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಎಂಬ ಘೋಷವಾಕ್ಯದೊಂದಿಗೆ ಪಾದಯಾತ್ರೆ ನಡೆಸಲಾಯಿತು. ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಾಥ್ ನೀಡಿದರು.
ಪಾದಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಬಿ.ಸಿ. ಪಾಟೀಲ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಭಾಗವಹಿಸಿದ್ದರು.
ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗದಗ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಭರತ ಬೊಮ್ಮಾಯಿ, ಗವಿಸಿದ್ದಪ್ಪ ದ್ಯಾಮಣ್ಣವರ, ಜಯತೀರ್ಥ ಕಟ್ಟಿ, ಭೋಜರಾಜ ಕರೂದಿ, ಡಾ. ಬಸವರಾಜ ಕೇಲಗಾರ ಸೇರಿದಂತೆ ಪಕ್ಷದ ಪ್ರಮುಖರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಾರ್ಜ್ ಸೋರೋಸ್ನಿಂದ ಹಣ ಪಡೆದು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ರಾಹುಲ್ ಗಾಂಧಿ ಹೋರಾಟ: ಬೊಮ್ಮಾಯಿ
ಹಾವೇರಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಒಬ್ಬ ಹತಾಶ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ತಮ್ಮ ಮೇಲಿರುವ ಆರೋಪಗಳನ್ನು ಇತರರ ಮೇಲೆ ಹೊರಿಸುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದಾರೆ. ಜಾರ್ಜ್ ಸೋರೋಸ್ನಂತಹ ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಪ್ರಶ್ನೆಗಳು ಇಂದು ದೇಶದ ಮುಂದೆ ಇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ವಿದೇಶಿ ನೆರವಿನಿಂದ ಪ್ರಧಾನಿಯಾಗಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ವಿದೇಶಿ ಸಂಪರ್ಕಗಳ ಬಗ್ಗೆ ಮಾತನಾಡುವುದಾದರೆ, ಪದೇಪದೇ ವಿದೇಶ ಪ್ರವಾಸ ಕೈಗೊಳ್ಳುವ ರಾಹುಲ್ ಗಾಂಧಿಯವರೇ ತಮ್ಮ ವಿದೇಶಿ ಸಂಪರ್ಕಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡುವುದು, ದೇಶದ ಆಂತರಿಕ ವಿಚಾರಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸುವುದು ಮತ್ತು ಭಾರತದ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದು ಅವರ ರಾಜಕೀಯ ನಡವಳಿಕೆಯಾಗಿದೆ.
ಜಾರ್ಜ್ ಸೋರೋಸ್ ಹಾಗೂ ಅವರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳ ವಿಚಾರವಾಗಿ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಅದರ ಚಟುವಟಿಕೆಗಳ ಬಗ್ಗೆ ದೇಶದ ಜನತೆಗೆ ಸ್ಪಷ್ಟನೆ ನೀಡುವ ಜವಾಬ್ದಾರಿ ಕಾಂಗ್ರೆಸ್ ನಾಯಕರ ಮೇಲಿದೆ.
ವಿದೇಶಿ ಹಣದ ಪ್ರಭಾವದಿಂದ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನಗಳು ನಡೆದರೂ ಅವುಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರಯತ್ನಗಳ ಬಗ್ಗೆ ದೇಶದ ಜನತೆ ಜಾಗೃತರಾಗಿರಬೇಕು.
ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲು ದೇಶವನ್ನು ಪ್ರೀತಿಸುವ, ದೇಶದ ಹಿತವನ್ನೇ ಉಸಿರಾಗಿಸಿಕೊಂಡಿರುವ ನಾಯಕರು. ವೈಯಕ್ತಿಕ ಸುಖ, ಸ್ವಾರ್ಥ ಮತ್ತು ಅಧಿಕಾರದ ಆಸೆಗಳನ್ನು ಬದಿಗಿಟ್ಟು ತಮ್ಮ ಇಡೀ ಜೀವನವನ್ನು ದೇಶಸೇವೆಗೆ ಮುಡಿಪಾಗಿಟ್ಟಿರುವ ಮಹಾನ್ ನಾಯಕರು. ಅಂತಹ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ಕೇವಲ ಒಬ್ಬ ವ್ಯಕ್ತಿಗೆ ಮಾಡುವ ಅವಮಾನವಲ್ಲ, ಅದು ದೇಶದ ಅಭಿವೃದ್ಧಿಯನ್ನು ಬಯಸುವ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಮಾಡುವ ಅವಮಾನವಾಗಿದೆ ಎಂದು ಬೊಮ್ಮಾಯಿ ಕಿಡಿಕಾರಿದ್ದಾರೆ.