ಅರಣ್ಯ ಇಲಾಖೆ ಕ್ರಮಕ್ಕೆ ಬೇಸರ; ಕೆಡಿಪಿ ಸಭೆಯಲ್ಲಿ ಕಣ್ಣೀರಿಟ್ಟ ಉಪಸಭಾಪತಿ ರುದ್ರಪ್ಪ ಲಮಾಣಿ
ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಗ್ರಾಮದ ಮನೆಗಳು ಬರುತ್ತವೆ ಎಂದು ಜನರ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿದ ಹಿನ್ನೆಲೆಯಲ್ಲಿ ಭಾವೋದ್ವೇಗಗೊಂಡು ಉಪಸಭಾಪತಿ ರುದ್ರಪ್ಪ ಲಮಾಣಿ ಕಣ್ಣೀರಿಟ್ಟಿದ್ದಾರೆ. ಒಕ್ಕಲೆಬ್ಬಿಸಿದರೆ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ. -
ಹಾವೇರಿ: ಅರಣ್ಯ ಇಲಾಖೆ ಕ್ರಮಕ್ಕೆ ಬೇಸರ ಹೊರಹಾಕಿರುವ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ (Rudrappa Lamani) ಅವರು ಕೆಡಿಪಿ ಸಭೆಯಲ್ಲೇ ಕಣ್ಣೀರಿಟ್ಟ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯುವ ವೇಳೆ ಉಪಸಭಾಪತಿ ರುದ್ರಪ್ಪ ಲಮಾಣಿ ಕಣ್ಣೀರು ಹಾಕಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕೆಲವು ಗ್ರಾಮಗಳು ಇವೆ. ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಗ್ರಾಮದ ಮನೆಗಳು ಬರುತ್ತವೆ ಎಂದು ಜನರ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿದೆ. ನಾನು ಕಲಿತ ಶಾಲೆ ಗ್ರಾಮಕ್ಕೇ ಈ ರೀತಿಯಾದರೆ ಹೇಗೆ ಎಂದು ಭಾವೋದ್ವೇಗಗೊಂಡು ರುದ್ರಪ್ಪ ಲಮಾಣಿ ಕಣ್ಣೀರಿಟ್ಟಿದ್ದಾರೆ.
75 ವರ್ಷದಿಂದ ಜಾಗದಲ್ಲಿದ್ದವರನ್ನು ಖಾಲಿ ಮಾಡಿಸಿದ್ದಾರೆ. ನಮ್ಮನ್ನು ಆಯ್ಕೆ ಮಾಡಿದ ಜನರ ಸಮಸ್ಯೆಗಳಿಗೆ ನಾವು ಸ್ಪಂದಿಸಲಿಲ್ಲಾ ಅಂದರೆ ಹೇಗೆ ಎಂದು ರುದ್ರಪ್ಪ ಲಮಾಣಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಾವೇರಿಯ ಗುತ್ತಲ ತಾಂಡಾ, ಕರೂರು ಗ್ರಾಮ ನಿವಾಸಿಯನ್ನು ಒಕ್ಕಲು ಎಬ್ಬಿಸಿದ್ದಾರೆ. ರಾಜ್ಯದಲ್ಲಿ 22 ಗ್ರಾಮದ ಜನರಿಗೆ ಈ ರೀತಿಯ ತೊಂದರೆ ಆಗಿದೆ. ಸರ್ಕಾರವೇ ಮೂರು ದಶಕಗಳಿಂದ ಮನೆ ಮತ್ತು ಉಳುಮೆಗೆ ಅವಕಾಶ ನೀಡಿದೆ. ಈಗ ಅರಣ್ಯ ಇಲಾಖೆಯ ಸಿಬ್ಬಂದಿ ಈ ಭೂಮಿ ಮೀಸಲು ಅರಣ್ಯಕ್ಕೆ ಬರುತ್ತಿದೆ ಎಂದು ನೋಟಿಸ್ ನೀಡಿದ್ದಾರೆ ಎಂದು ರುದ್ರಪ್ಪ ಲಮಾಣಿ ಹೇಳಿದ್ದಾರೆ.
ಐದು ವರ್ಷಗಳಿಂದ ನಾನು ಕೇಂದ್ರ ಸರ್ಕಾರದ ಮಂತ್ರಿ ಮತ್ತು ಸಂಸದರನ್ನು ಭೇಟಿ ಮಾಡಿದ್ದೇನೆ. ಲೋಕಸಭೆ ಸ್ಪೀಕರ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಮನವಿ ಸಲ್ಲಿಸಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿ ಎಸಿ ಕಚೇರಿಯಲ್ಲಿ ಕುಳಿತು ಆದೇಶ ಮಾಡುತ್ತಾರೆ. ಇಲ್ಲಿ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು ಎಂದು ರುದ್ರಪ್ಪ ಲಮಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಮ್ಮ ಎಂಪಿಗಳು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಬೇಕು. ಬಡವರಿಗೆ ಹಕ್ಕುಪತ್ರ ನೀಡಬೇಕು. ಅರಣ್ಯ ಇಲಾಖೆ ಎಫ್‌ಐಆರ್ ಹಾಕಿ ತೊಂದರೆ ನೀಡುತ್ತಿದ್ದಾರೆ, ಇದನ್ನು ತಪ್ಪಿಸಬೇಕು. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಬಡವರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಡೆಪ್ಯುಟಿ ಸ್ಪೀಕರ್ ಮನವಿ ಮಾಡಿದ್ದಾರೆ.