ಹಾವೇರಿ, ಸೆ.17: ಸಾಲ ಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ (Haveri News) ದೇವಗಿರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಿಪ್ಪಣ್ಣ ರಾಮಣ್ಣ ವಡ್ಡರ (65) ಆತ್ಮಹತ್ಯೆ ಮಾಡಿಕೊಂಡ ರೈತ. ಒಂದು ವಾರದ ಹಿಂದೆ ಸಾಲ ಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಗುರುವಾರ (ಸೆಪ್ಟೆಂಬರ್ 17) ಮಧ್ಯಾಹ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಿಪ್ಪಣ್ಣ ಮೂರು ಎಕರೆ ಜಮೀನು ಹೊಂದಿದ್ದು, ಬರದ ಪರಿಣಾಮ ಬೆಳೆ ಹಾನಿಗೊಳಗಾಗಿತ್ತು. ಬೆಳೆ ಬೆಳೆಯಲು ದೇವಗಿರಿ ಕೆವಿಜಿ ಬ್ಯಾಂಕ್‌ನಲ್ಲಿ ಸುಮಾರು ₹ 2.50 ಲಕ್ಷ ಸಾಲ ಸೇರಿ ಖಾಸಗಿ ಫೈನಾನ್ಸ್ ಹಾಗೂ ಇತರ ಮೂಲಗಳಿಂದ ಒಟ್ಟು ₹ 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮೃತರಿಗೆ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ. ಬರದಿಂದ ಬೆಳೆ ಕೈಕೊಟ್ಟ ಬೆನ್ನಲ್ಲೇ ಸಾಲದ ಹೊರೆ ಹೆಚ್ಚಾಗಿದ್ದು, ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು ಎಂದು ತಿಳಿದುಬಂದಿದೆ.