Haveri News: ಹಾವೇರಿಯಲ್ಲಿ ಹದಗೆಟ್ಟ ಹಳ್ಳಿ ರಸ್ತೆಗಳು; ದುರಸ್ತಿಗೆ ಸಾರ್ವಜನಿಕರ ಆಗ್ರಹ
Haveri News: ಹಾವೇರಿ ತಾಲೂಕಿನ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತೀರಾ ಹದಗೆಟ್ಟು ಹೋಗಿವೆ. ಕಳೆದ ಬಾರಿಯ ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹಾವೇರಿ ತಾಲೂಕಿನ ಗುತ್ತಲದಿಂದ ನೆಗಳೂರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ. -
| ಪರಶುರಾಮ ಎಸ್.ಡಿ, ಹಾವೇರಿ
ಹಾವೇರಿ ತಾಲೂಕಿನ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತೀರಾ ಹದಗೆಟ್ಟು ಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಗುತ್ತಲದಿಂದ ನೆಗಳೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ತುಂಬಿ ಹೋಗಿದ್ದು, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮುಂಗಾರು ಮಳೆ ಆರಂಭವಾಗಿದ್ದು, ರಸ್ತೆಯಲ್ಲಿರುವ ಗುಂಡಿಗಳು ಮಳೆ ನೀರಿಗೆ ತುಂಬಿಕೊಂಡು ಹೊಂಡಗಳಂತಾಗುತ್ತವೆ. ಇದರಿಂದ ಪ್ರತಿ ನಿತ್ಯ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು, ನರಕಯಾತನೆ ಅನುಭವಿಸಬೇಕಾಗಿದೆ. ರಸ್ತೆಗಳ ನಿರ್ವಹಣೆ ಮಾಡದಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿ ನಿತ್ಯ ಹಿಡಿಶಾಪ ಹಾಕಿಕೊಂಡು ಸಂಚರಿಸುತ್ತಾರೆ.

ಕಳೆದ ಬಾರಿಯ ಮಳೆಯಿಂದಾಗಿ ವಿಪರೀತವಾಗಿ ಹಾವೇರಿ ತಾಲೂಕಿನ ಬಹುಪಾಲು ರಸ್ತೆಗಳು ಹಾಳಾಗಿ ಹೋಗಿದ್ದವು. ಇದರ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಮತ್ತು ಶಾಸಕರು ಕೆಲ ರಸ್ತೆಗಳನ್ನು ಸರಿಪಡಿಸಿ ಕೈ ತೊಳೆದುಕೊಂಡಿದ್ದಾರೆ. ಉಳಿದ ಬಹುಪಾಲು ಹಳ್ಳಿ ರಸ್ತೆಗಳು ಕಾಮಗಾರಿಯಾಗದೇ ಹಳ್ಳಗಳಂತಾಗಿವೆ ಎಂಬುದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
Haveri Rains: ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ; ಹಲವಡೆ ಸಂಚಾರಕ್ಕೆ ಅಡ್ಡಿ, ಮನೆಗಳಿಗೆ ನೀರು ನುಗ್ಗಿ ಹಾನಿ
ಪ್ರತಿನಿತ್ಯ ಹಳ್ಳಿಗಳಿಗೆ ಓಡಾಡುವ ಬಸ್ ಗಳು ಹದಗೆಟ್ಟ ರಸ್ತೆಯಲ್ಲಿಯೇ ರಿಪೇರಿಯಾಗಿ ಸ್ಥಳದಲ್ಲಿಯೇ ನಿಲ್ಲುತ್ತವೆ. ಹಳ್ಳಿಯಿಂದ ಓಡಾಡುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸುಗಮವಾಗಿ ತೆರಳಲು ಬಹು ಕಷ್ಟವಾಗಿದೆ. ಇಲಾಖೆಗಳ ಗಮನಕ್ಕೆ ಇದ್ದರೂ ಹಳ್ಳಿ ರಸ್ತೆ ದುರಸ್ತಿ ಮಾಡದೇ ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![]()
ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗದವರು ತಕ್ಷಣವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ದುರಸ್ತಿ ಹೆಸರಲ್ಲಿ ಹಣ ಲೂಟಿಯಾಗುತ್ತದೆ. ನಮಗೆ ಲೂಟಿಕೋರ ಅಧಿಕಾರಿಗಳು ಅಗತ್ಯವಿಲ್ಲ. ಜನ ಸೇವೆ ಮಾಡುವ ಅಧಿಕಾರಿಗಳು ಈ ಜಿಲ್ಲೆಗೆ ಬರಬೇಕು. ತಕ್ಷಣವೇ ಜಿಲ್ಲೆಯ ರಸ್ತೆಗಳನ್ನು ದುರಸ್ತಿ ಮಾಡಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
ಲೊಕೇಶ ಕುಬಸದ, ಸಾಮಾಜಿಕ ಕಾರ್ಯಕರ್ತ