ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಮಂಡಗೋಡ ತಾಲೂಕಿನ ಮಳಗಿ ಗ್ರಾಮದ ಧರ್ಮಾ ಕಾಲೋನಿಯ ಧರ್ಮಾ ಡ್ಯಾಂ (Dharma Reservoir) ಇಂದು ವಿವಿಧ ನೀರಾವರಿ ಯೋಜನೆಗಳ ಹೆಸರಿನಲ್ಲಿ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ ರೈತರು ಆತಂಕ ವ್ಯಕ್ತಪಡಿಸಿದ್ದು, ತೂಬು ಹಾಗೂ ಕಾಲುವೆಗಳ ದುರಸ್ತಿಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ರೈತ ಆನಂದ ನಾಯಕ ಅವರು ಪ್ರತಿಕ್ರಿಯಿಸಿ, ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿರ್ಮಾಣಗೊಂಡ ಧರ್ಮಾ ಡ್ಯಾಂಗಾಗಿ ರೈತರು ಸುಮಾರು 19 ಸಾವಿರ ಎಕರೆ ಫಲವತ್ತಾದ ಜಮೀನು ನೀಡಿದ್ದರು. ಜಮೀನು ಕಳೆದುಕೊಂಡ ರೈತರು ಬೀದಿಪಾಲಾಗಿದ್ದು, ಪುನರ್ವಸತಿ ಹಾಗೂ ಪರಿಹಾರವಾಗಿ ನೀಡಲಾದ ಜಮೀನುಗಳಿಗೆ ಇಂದಿಗೂ ಸಮರ್ಪಕ ಖಾತೆ ಸೇರಿದಂತೆ ಅಗತ್ಯ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧರ್ಮಾ ಡ್ಯಾಂ ಹಾವೇರಿ ಜಿಲ್ಲೆಯ, ಅದರಲ್ಲೂ ಹಾನಗಲ್ ತಾಲೂಕಿನ ಬಹುಭಾಗಕ್ಕೆ ನೀರಾವರಿ ಹಾಗೂ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ. ಇಂತಹ ಮಹತ್ವದ ಜಲಾಶಯದ ಒಳಭಾಗಕ್ಕೆ ಮಣ್ಣು ಹಾಕಿ ಮುಚ್ಚುವ ರೀತಿಯ ಕಾಮಗಾರಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ತೂಬು ಹಾಗೂ ಕಾಲುವೆಗಳ ದುರಸ್ತಿ ಇಲ್ಲದೆ ರೈತರ ಜಮೀನುಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಸಮರ್ಪಕ ನೀರಾವರಿ ವ್ಯವಸ್ಥೆ ಮಾಡಬೇಕು ಎಂದು ಆನಂದ ನಾಯಕ ಒತ್ತಾಯಿಸಿದ್ದಾರೆ.
ಹನೂರು ಪ್ರಕರಣ: ಅರಣ್ಯ ಅಧಿಕಾರಿಗಳ ತನಿಖೆಯಲ್ಲಿ ಸಾಬೀತು: ಸತ್ತಿದ್ದು ʼಕಳ್ಳʼ ಬೇಟೆಗಾರರು ?
“ಧರ್ಮಾ ಡ್ಯಾಂ ನಮ್ಮ ಜೀವನಾಡಿ. ಇದನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಹಾಳು ಮಾಡುವ ಕೆಲಸ ನಡೆಯುತ್ತಿದೆ. ರೈತರು ಸಾವಿರಾರು ಎಕರೆ ಫಲವತ್ತಾದ ಭೂಮಿ ಕೊಟ್ಟು ತ್ಯಾಗ ಮಾಡಿದ್ದಾರೆ. ಆದರೆ ಇಂದು ಅದೇ ಡ್ಯಾಂನ ಅಸ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿರುವುದು ನೋವಿನ ಸಂಗತಿ. ಇದು ಜನಹಿತದ ಯೋಜನೆಯೋ ಅಥವಾ ಲೂಟಿ ಹೊಡೆಯುವ ಯೋಜನೆಯೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.