ಹಾವೇರಿ, ಡಿ.26: ಹಾವೇರಿ ಹುಕ್ಕೇರಿ ಮಠದಲ್ಲಿರುವ ಪ್ರಸಾದ ನಿಲಯ ಸ್ಥಾಪನೆಯಾಗಿ 75 ವರ್ಷ ಕಳೆದು ಅಮೃತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿದೆ. ಜಾತಿ, ಮತ, ಪಂಥ ಎನ್ನದೇ ಎಲ್ಲರನ್ನು ಒಂದೇ ದೃಷ್ಟಿಯಿಂದ ಕಾಣುವ ದೊಡ್ಡ ಮನಸ್ಸು ಹುಕ್ಕೇರಿ ಮಠಕ್ಕಿದೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ತಿಳಿಸಿದರು. ಹಾವೇರಿ ಹುಕ್ಕೇರಿ ಮಠದ ನಮ್ಮೂರ ಜಾತ್ರಾ ಮಹೋತ್ಸವ ಅಂಗವಾಗಿ (Hukkeri Matha) ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ (Haveri News) ಹಮ್ಮಿಕೊಂಡಿರುವ ಮಹಾವೇದಿಕೆಯ ಆಧ್ಯಾತ್ಮ ಪ್ರವಚನ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ದಿನಕ್ಕೆ 10 ಸಾವಿರ ಮಕ್ಕಳಿಗೆ ದಾಸೋಹ ನಡೆಯುತ್ತದೆ. ಜಗತ್ತಿನಲ್ಲಿ ಇದೊಂದೆ ಮಠ ಮಾತ್ರ ಈ ರೀತಿಯ ಕಾರ್ಯ ಮಾಡಲು ಸಾಧ್ಯ. ಕರ್ನಾಟಕ ಸುಶಿಕ್ಷಿತ ರಾಜ್ಯವಾಗಿದೆ ಎಂದರೆ ಇದರ ಶ್ರೇಯಸ್ಸು ಲಿಂಗಾಯಿತ ಮಠಕ್ಕೆ ಸೇರುತ್ತದೆ. ಹೀಗಾಗಿ ಮಠಗಳ ಪರಂಪರೆ ಉಳಿಯಬೇಕು. ಮಠ ಮೌಲ್ಯಗಳು ದೊಡ್ಡವು. ಅದು ಹಾವೇರಿ ಹುಕ್ಕೇರಿ ಮಠಕ್ಕಿದೆ. ಶ್ರೀ ಮಠದ ಸದಾಶಿವ ಸ್ವಾಮೀಜಿಗಳು ಹಳ್ಳಿ- ಹಳ್ಳಿಗೆ ಓಡಾಡಿ ನಮ್ಮ ಮಕ್ಕಳನ್ನು ದುಶ್ಚಟಗಳಿಂದ ದೂರ ಇಡಬೇಕು ಎಂದು 75 ಹಳ್ಳಿಗಳಲ್ಲಿ ಜೋಳಿಗೆ ಹಿಡಿದು ಮಹಾ ಅಭಿಯಾನ ನಡೆಸಿ ಸಮಾಜದ ಸ್ವಾಸ್ಥ್ಯ ಕಾಪಾಡಿದರು ಎಂದು ಹೇಳಿದರು.
ಮಕ್ಕಳ ಮೇಲೆ ನಿಗಾ ಇಡಬೇಕು. ಯುವಕರು ಮಾದಕ ವ್ಯಸನಕ್ಕೆ ಅಂಟಿಕೊಂಡು ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಿಗಾ ವಹಿಸದೇ ಹೋದರೆ ಅಪಾಯ ತಪ್ಪಿದ್ದಲ್ಲ. ಯುವಕರು ಕಾಯಕದ ಕಡೆ ಮುಖ ಮಾಡಬೇಕು. ಕಾಯಕ ಬೆನ್ನು ಹತ್ತಿದರೆ ನೀವು ನಾಯಕರಾಗುತ್ತಿರಿ ಎಂದು ತಿಳಿಸಿದರು.
ಮಕ್ಕಳು ವಿಶೇಷ ಸಂಸ್ಕಾರ ಅಳವಡಿಸಿಕೊಳ್ಳಬೇಕು. ಮಾನವ ಶಿಕ್ಷಣ ಪಡೆದು ವಿಕಾಸ ಆಗಬೇಕಿತ್ತು ಆದರೆ ವಿಕಾರ ಆಗುತ್ತಿದ್ದಾರೆ ಇದು ದುರಂತ ಎಂದು ಶ್ರೀಗಳು ಹೇಳಿದರು.
ಅಕ್ಷರದೊಂದಿಗೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು: ಡಾ. ಮಹಾಂತ ಪ್ರಭು ಸ್ವಾಮೀಜಿ
ಈ ವೇಳೆ ಹುಕ್ಕೇರಿ ಮಠದ ಮಕ್ಕಳ ಗ್ರಂಥಾಲಯದ ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಸಿದ್ದಲಿಂಗ ಮಹಾಸ್ವಾಮೀಜಿ, ಮಂಡರಗಿ ಮಠದ ಅನ್ನದಾನೀಶ್ವರಿ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಅಭಿನವ ಸಿದ್ದಾರೂಢ ಸ್ವಾಮೀಜಿ, ಘಟಪ್ರಭದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್, ಶಾಸಕರಾದ ಯು.ಬಿ ಬಣಕಾರ, ಬಸವರಾಜ ಶಿವಣ್ಣನವರ, ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮ ಶೆಟ್ಟಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ಮಾಜಿ ಶಾಸಕ ಶಿವರಾಜ ಸಜ್ಜನರ ಸೇರಿದಂತೆ ಅನೇಕ ಗಣ್ಯರು, ವಿವಿಧ ಮಠದ ಶ್ರೀಗಳು ಉಪಸ್ಥಿತರಿದ್ದರು.