ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಯೇ ಮೊಬೈಲ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಬೆಳಕಿಗೆ ಬಂದಿದ್ದು, ಪರೀಕ್ಷಾ ಕೇಂದ್ರದ ಭದ್ರತಾ ವ್ಯವಸ್ಥೆ ಹಾಗೂ ಮೇಲ್ವಿಚಾರಕರ ಕರ್ತವ್ಯದ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ.
ಅ.4ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ವಿಎಒ ನೇಮಕಾತಿ ಪರೀಕ್ಷೆಯಲ್ಲಿ ಹಾನಗಲ್ ತಾಲೂಕಿನ ಶಂಕರ ಬಸವರಾಜ ಬನ್ನೂರು 200 ಅಂಕಗಳಿಗೆ 151.25 ಅಂಕ ಗಳಿಸಿ ಗಮನ ಸೆಳೆದಿದ್ದ. ಆದರೆ, ಇದಕ್ಕೂ ಕೆಲವೇ ದಿನಗಳ ಹಿಂದೆ ನಡೆದ ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆ(KSRP Police Constable Recruitment Exam) ಯಲ್ಲಿ ಕೇವಲ 25 ಅಂಕ ಗಳಿಸಿದ್ದದ್ದು ಅನುಮಾನಕ್ಕೆ ಕಾರಣ ವಾಗಿತ್ತು.
ಈ ಅಂಕಗಳ ವ್ಯತ್ಯಾಸದ ಹಿನ್ನೆಲೆಯಲ್ಲಿ ಕೆಇಎ ತನಿಖೆಗೆ ಸೂಚಿಸಿತ್ತು. ಶಿಗ್ಗಾಂವಿಯ ಬಿ.ಬಿ. ಮಾಮ್ಲೆದೇಸಾಯಿ ಕಾಲೇಜಿನ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಭ್ಯರ್ಥಿ ಮೊಬೈಲ್ ಬಳಸಿ ಪ್ರಶ್ನೆಪತ್ರಿಕೆಯನ್ನು ಗೂಗಲ್ ಲೆನ್ಸ್ ಮೂಲಕ ಸ್ಕ್ಯಾನ್ ಮಾಡಿ ಉತ್ತರಗಳನ್ನು ಹುಡುಕಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಬಳಿಕ ಉತ್ತರಗಳನ್ನು ಒಎಂಆರ್ ಪತ್ರಿಕೆಯಲ್ಲಿ ದಾಖಲಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಂಕರ ಬನ್ನೂರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭದ್ರತಾ ವ್ಯವಸ್ಥೆ ಏನಾಯಿತು?
ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಜಾಮರ್, ಅಭ್ಯರ್ಥಿಗಳ ತಪಾಸಣೆ ಹಾಗೂ ಮೇಲ್ವಿಚಾರಕರ ನಿಯೋಜನೆ ಇದ್ದರೂ ಮೊಬೈಲ್ ಒಳಗೆ ಹೋಗಿದ್ದು ಹೇಗೆ? ಪರೀಕ್ಷಾ ಕೊಠಡಿಯಲ್ಲೇ ಮೊಬೈಲ್ ಬಳಕೆಯಾಗುತ್ತಿದ್ದರೂ ಮೇಲ್ವಿಚಾರಕರ ಗಮನಕ್ಕೆ ಬಾರದಿರುವುದೇಕೆ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲಿನ ತಪಾಸಣೆ, ಕೊಠಡಿಯಲ್ಲಿನ ಮೇಲ್ವಿಚಾರಣೆ ಹಾಗೂ ಭದ್ರತಾ ಸಿಬ್ಬಂದಿಯ ಕರ್ತವ್ಯಲೋಪದ ಬಗ್ಗೆಯೂ ತನಿಖೆ ನಡೆಯಬೇಕಿದೆ. ಈ ಅಕ್ರಮದಲ್ಲಿ ಅಭ್ಯರ್ಥಿ ಮಾತ್ರ ಭಾಗಿಯಾಗಿದ್ದಾನೆಯೇ ಅಥವಾ ಬೇರೆಯವರ ಸಹಕಾರವೂ ಇದೆಯೇ ಎಂಬು ದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಇಂತಹ ಅಕ್ರಮ ಗಳಿಂದ ಪ್ರಶ್ನಾರ್ಹವಾಗುತ್ತಿದೆ. ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಉಳಿಸಲು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.ಸುದ್ದಿಯ ಪ್ರಮುಖ ಅಂಶಗಳು ಸಿಸಿಟಿವಿ ಪರಿಶೀಲನೆ, ಮೊಬೈಲ್ ಬಳಕೆ ಆರೋಪ ಮತ್ತು ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆಯ ವೈಫಲ್ಯದ ಸುತ್ತ ಕೇಂದ್ರೀಕೃತವಾಗಿವೆ.