Maize Growers Protest: ಮೋಟೆಬೆನ್ನೂರು ಬಳಿ ಡಿ.8ಕ್ಕೆ ಮೆಕ್ಕೆಜೋಳ ಬೆಳೆಗಾರರ ಪ್ರತಿಭಟನೆ; ಹೆದ್ದಾರಿ ಬಂದ್‌ಗೆ ಅವಕಾಶವಿಲ್ಲ ಎಂದ ಹಾವೇರಿ ಎಸ್‌ಪಿ
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಮತ್ತು ಖರೀದಿ ಪ್ರಮಾಣ ಹೆಚ್ಚಿಸಲು ಆಗ್ರಹಿಸಿ ಡಿಸೆಂಬರ್ 8 ರಂದು ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಅಹೋರಾತ್ರಿ ಹೋರಾಟ ನಡೆಸಲು ರೈತರು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್‌ಗೆ ಅವಕಾಶವಿಲ್ಲ ಎಂದು ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ.
ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ -
ಹಾವೇರಿ, ಡಿ.6: ಮೆಕ್ಕೆಜೋಳಕ್ಕೆ 3000 ರೂ. ಬೆಂಬಲ ಬೆಲೆ ಹಾಗೂ ಖರೀದಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಡಿಸೆಂಬರ್ 8ರಂದು ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಮೆಕ್ಕೆಜೋಳ ಬೆಳೆಗಾರರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಹೆದ್ದಾರಿ ಬಂದ್‌ಗೆ ಅವಕಾಶವಿಲ್ಲ ಎಂದು ಎಸ್‌ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಯಶೋಧಾ ವಂಟಗೋಡಿ ಅವರು, ಜಿಲ್ಲೆಯ ವಿವಿಧ ರೈತ ಸಂಘಟನೆಯವರು ಮೆಕ್ಕೆಜೋಳ ಖರೀದಿ ವಿಚಾರಕ್ಕಾಗಿ ಡಿ.8ಕ್ಕೆ ಮೋಟೆಬೆನ್ನೂರು ಬಳಿ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೆದ್ದಾರಿ ಬಂದ್‌ಗೆ ಅವಕಾಶ ಇರುವುದಿಲ್ಲ ಎನ್ನುವ ಕಟ್ಟುನಿಟ್ಟಿನ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದರಿಂದ ಪ್ರಯಾಣಿಕರಿಗೆ ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ, ಅಗತ್ಯ ವಸ್ತುಗಳ ವಾಹನಗಳ ಸಂಚಾರಕ್ಕೆ ಅಡ್ಡಿ, ತುರ್ತು ಆಂಬ್ಯುಲೆನ್ಸ್ ಸಂಚಾರ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆ ಆಗುವ ಹಿನ್ನೆಲೆ ಗಮನದಲ್ಲಿಟ್ಟುಕೊಂಡು, ಸರ್ವೋಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಿವಿಲ್ ನಂ.249/2021 (ಮೊನಿಕಾ ಅಗರವಾಲ್ Vs ಯುನಿಯನ್ ಆಪ್ ಇಂಡಿಯಾ & ಅನದರ್) ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿರುವುದರಿಂದ ಯಾವುದೇ ಸಂಘ-ಸಂಸ್ಥೆಗಳು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆಗೆ 50 ಸಂಘಟನೆಗಳು ಸಜ್ಜು: ಕಟ್ಟೆಚ್ಚರ
ಅಹೋರಾತ್ರಿ ಹೋರಾಟಕ್ಕೆ ರೈತರ ನಿರ್ಧಾರ
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹೆಚ್ಚಳ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಆಗ್ರಹಿಸಿ ಡಿಸೆಂಬರ್ 8 ರಂದು ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಅಹೋರಾತ್ರಿ ಹೋರಾಟ ನಡೆಸಲು ರೈತರು ನಿರ್ಧಾರ ಮಾಡಿದ್ದಾರೆ. ಈ ಹೋರಾಟ ಹತ್ತಿಕ್ಕಲು ಪೊಲೀಸರು ರೈತ ಮುಖಂಡರಿಗೆ ಕಿರುಕುಳ ನೀಡುತ್ತಿದ್ದು, ಮುಂದಾಗುವ ಅನಾಹುತಕ್ಕೆ ಪೊಲೀಸರೆ ಹೊಣೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದ್ದು, ಡಿಸೆಂಬರ್ 8 ರಂದು ಹೋರಾಟ ಮಾಡಿಯೇ ತೀರುತ್ತೇವೆಂದು ಹೇಳಿದ್ದಾರೆ.