ಇರಾನ್-ಇಸ್ರೇಲ್ ಸಂಘರ್ಷ: ಆತಂಕದ ಮಧ್ಯೆ ಅಬುಧಾಬಿಯಿಂದ ಬೆಂಗಳೂರಿಗೆ ಬಂದಿಳಿದ ವಿಮಾನ; 230 ಕನ್ನಡಿಗರು ವಾಪಸ್
Middle East Crisis: ಯುದ್ಧಭೂಮಿಯಿಂದ ಕನ್ನಡಿಗರನ್ನು ಒಳಗೊಂಡ ಮೊದಲ ಬ್ಯಾಚ್‌ನ ವಿಮಾನ ಸೋಮವಾರ ರಾತ್ರಿ (ಮಾರ್ಚ್ 2) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಸದ್ಯ ತಾಯ್ನಾಡಿಗೆ ಬಂದಿದ್ದು ಸಂತಸ ತಂದಿದೆ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣ (ಸಂಗ್ರಹ ಚಿತ್ರ) -
ಬೆಂಗಳೂರು, ಮಾ. 3: ಇಸ್ರೇಲ್-ಅಮೆರಿಕ ಜಂಟಿ ದಾಳಿಯಿಂದ ಕೆರಳಿರುವ ಇರಾನ್, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮಧ್ಯಪ್ರಾಚ್ಯದ ದೇಶಗಳ ಮೇಲೆ ದಾಳಿ ನಡೆಸುತ್ತಿದೆ (Middle East Crisis). ಇದರಿಂದ ಕೆಲವು ದಿನಗಳಿಂದ ಹಲವು ಕೊಲ್ಲಿ ರಾಷ್ಟ್ರಗಳಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿಲಾಗಿದ್ದು, ಕನ್ನಡಗರು ಸೇರಿ ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಮಧ್ಯೆಯೇ ಅಬುಧಾಬಿಯಿಂದ ಇದೀಗ ಮೊದಲ ವಿಮಾನ ಬೆಂಗಳೂರಿಗೆ ಬಂದಿಳಿದಿದೆ. ಈ ವಿಮಾನದ ಮೂಲಕ ಸುಮಾರು 230 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ.
ಯುದ್ಧಭೂಮಿಯಿಂದ ಕನ್ನಡಿಗರನ್ನು ಒಳಗೊಂಡ ಮೊದಲ ಬ್ಯಾಚ್‌ನ ವಿಮಾನ ಸೋಮವಾರ ರಾತ್ರಿ (ಮಾರ್ಚ್ 2) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ವಿಮಾನ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಪ್ರಯಾಣಿಕರು, ಅವರ ಸಂಬಂಧಿಕರು ಭಾವುಕರಾದರು. ಕೆಲವು ದಿನಗಳಿಂದ ಡ್ರೋನ್, ಕ್ಷಿಪಣಿ, ಬಾಂಬ್ ಸದ್ದು ಕೇಳಿ ಭಯವಾಗುತ್ತಿತ್ತು. ಸದ್ಯ ತಾಯ್ನಾಡಿಗೆ ಬಂದಿದ್ದು ಸಂತಸ ತಂದಿದೆ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.
ಆತಂಕದಲ್ಲಿ ಸಾವಿರಾರು ಭಾರತೀಯರು
ಸದ್ಯ ಕೊಲ್ಲಿ ರಾಷ್ಟ್ರಗಳಲ್ಲಿ ಇರಾನ್‌ನ ದಾಳಿ ಮುಂದುವರಿದಿದ್ದು, ಅಲ್ಲಿರುವ ಭಾರತೀಯರು ಭಯದಿಂದ ದಿನ ದೂಡುವಂತಾಗಿದೆ. ದುಬೈ ಸೇರಿದಂತೆ ಭಾರತೀಯರು, ಕನ್ನಡಿಗರು ಅಧಿಕ ಸಂಖ್ಯೆಯಲ್ಲಿರುವ ದೇಶಗಳ ವೇಳೆ ಆಕ್ರಮಣ ಮುಂದುವರಿದಿದೆ. ಮನೆ, ಕಚೇರಿ, ಹೋಟೆಲ್ ಸಮೀಪ ಬಾಂಬ್ ಸ್ಫೋಟದ ಸದ್ದು ಕೇಳಿ ಬರುತ್ತಿದ್ದು, ಭಾರತೀಯರು ಜೀವ ಕೈಯಲ್ಲಿ ಹಿಡಿದು ದಿನ ದೂಡುತ್ತಿದ್ದಾರೆ. ವಿಮಾನ ಸಂಚಾರ ರದ್ದಾದ ಕಾರಣ ಹಲವರು ಏರ್‌ಪೋರ್ಟ್‌ನಲ್ಲಿ ಬಾಕಿ ಆಗಿದ್ದಾರೆ. ಸದ್ಯ ಮೊದಲ ವಿಮಾನ ಸುರಕ್ಷಿತವಾಗಿದ್ದು ಬೆಂಗಳೂರಿಗೆ ಬಂದಿಳಿದಿದ್ದು, ಉಳಿದರವನ್ನು ಕರೆತರಲು ಪ್ರಯತ್ನಿಸುವುದಾಗಿ ಸರ್ಕಾರ ತಿಳಿಸಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಈ ಮಧ್ಯೆ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರು, ಕನ್ನಡಿರನ್ನು ಸುರಕ್ಷಿತವಾಗಿ ಕರೆತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ʼʼಮಧ್ಯಪ್ರಾಚ್ಯ ಗಲಭೆಪೀಡಿತವಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಮತ್ತು ಭಾರತೀಯರನ್ನು ಕಾಪಾಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆʼʼ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ʼʼರಾಜತಾಂತ್ರಿಕ ಸಂಪರ್ಕವನ್ನು ಬಲಪಡಿಸಬೇಕು. ಅಲ್ಲಿ ಸಿಲುಕಿರುವ ಕನ್ನಡಿಗರು ಸೇರಿ ಭಾರತೀಯರನ್ನು ಕರೆತರಲು ಅಗತ್ಯವಿದ್ದರೆ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ರಾಯಭಾರ ಕಚೇರಿಗಳು ಮತ್ತು ವಿಮಾನಯಾನ ಸಂಸ್ಥೆಗಳ ಮೂಲಕ ಸಂಘಟಿತ ಬೆಂಬಲ ಪಡೆಯಬೇಕು. ನಮ್ಮ ಜನರ ಸುರಕ್ಷತೆ ಖಚಿತಪಡಿಸಲು ಮತ್ತು ಅವರನ್ನು ಕರೆತರಲು ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ನೀಡಲು ಕರ್ನಾಟಕವು ಬದ್ಧʼʼ ಎಂದು ಹೇಳಿದ್ದಾರೆ.
ಸಹಾಯವಾಣಿ
ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆಗಾಗಿ ಈಗಾಗಲೇ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ.