ಫೆ.13ಕ್ಕೆ ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ; ಸಿದ್ಧತೆ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ
Sadhana Samavesha in Haveri: ಹಾವೇರಿಯಲ್ಲಿ ಫೆಬ್ರವರಿ 13ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಜಿಲ್ಲೆಯ 30 ಸಾವಿರ ಫಲಾನುಭವಿಗಳು ಸೇರಿ ಸುಮಾರು ಒಂದು ಲಕ್ಷ ಜನರಿಗೆ ಕಂದಾಯ ಹಕ್ಕು ಪತ್ರ, ಇ -ಪೌತಿ ಮತ್ತು ಬಕರ್ ಹುಕುಂ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಹಾವೇರಿಯಲ್ಲಿ ಸಾಧನಾ ಸಮಾವೇಶ ನಡೆಯುವ ಸ್ಥಳವನ್ನು ಸಚಿವ ಶಿವಾನಂದ ಪಾಟೀಲ ಪರಿಶೀಲಿಸಿದರು. -
ಹಾವೇರಿ: ಫೆಬ್ರವರಿ 13ರಂದು ಹಾವೇರಿಯಲ್ಲಿ ಐತಿಹಾಸಿಕ 'ಸಾಧನಾ ಸಮಾವೇಶ' ನಡೆಯುವ ಹಿನ್ನೆಲೆಯಲ್ಲಿ ಅಜ್ಜನ ಗುಡಿ ಪ್ರದೇಶದ ಸಮಾವೇಶ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ (Shivanand Patil) ಅವರು ಭಾನುವಾರ ಸಂಜೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರದ 1,000 ದಿನಗಳ ಸಂಭ್ರಮ ಹಾಗೂ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವ ಸಲುವಾಗಿ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ಥಳ ಪರಿಶೀಲನೆ ವೇಳೆ ವೇದಿಕೆ ನಿರ್ಮಾಣ, ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಅಧಿಕಾರಿಗಳಿಗೆ ಮತ್ತು ಮುಖಂಡರಿಗೆ ಅಗತ್ಯ ಸೂಚನೆಗಳನ್ನು ಸಚಿವರು ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಸಚಿವರು, ನಮ್ಮ ಹಾವೇರಿ ಜಿಲ್ಲೆಯ ಅಭಿವೃದ್ಧಿಯ ಹಾದಿಯಲ್ಲಿ ಈ ಸಮಾವೇಶವು ಒಂದು ಮೈಲುಗಲ್ಲಾಗಲಿದೆ. ಜಿಲ್ಲೆಯ 30 ಸಾವಿರ ಫಲಾನುಭವಿಗಳು ಸೇರಿ ಸುಮಾರು ಒಂದು ಲಕ್ಷ ಜನರಿಗೆ ಕಂದಾಯ ಹಕ್ಕು ಪತ್ರ, ಇ -ಪೌತಿ ಮತ್ತು ಬಕರ್ ಹುಕುಂ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದುವರೆಗೆ ಒಟ್ಟು 65 ಸಾವಿರ ಹಕ್ಕು ಪತ್ರಗಳಿಗೆ ಅನುಮೋದನೆ ದೊರೆತಿದೆ. ಜಿಲ್ಲೆಯ 20 ಸಾವಿರ ಜನರಿಗೆ ಕಂದಾಯ ಹಕ್ಕು ಪತ್ರ ಹಾಗೂ 10 ಸಾವಿರ ಜನರಿಗೆ ಇ ಪೌತಿ ಹಾಗೂ ಇತರ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು.
ಕಂದಾಯ ಗ್ರಾಮದ ಹಕ್ಕು ಪತ್ರ, ಇ ಪಾವತಿ ಖಾತೆ, ದರಖಾಸ್ತು ಪೋಡಿ, ಬಗರ್ ಹುಕುಂ ಹಕ್ಕುಪತ್ರ ವಿತರಣೆ ಹಾಗೂ ಪೋಡಿಮುಕ್ತ ಗ್ರಾಮ ಅಭಿಯಾನ ನಡೆಯಲಿದೆ. ರಾಜ್ಯಾದ್ಯಂತ ಒಂದು ಲಕ್ಷ ಕಂದಾಯ ಗ್ರಾಮ ಹಕ್ಕು ಪತ್ರ (94 ಡಿ) ವಿತರಣೆಯ ಗುರಿ ಹೊಂದಲಾಗಿದೆ. ಹಾವೇರಿ ಜಿಲ್ಲೆಯ 31 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಿದ್ದು, ಅದರಲ್ಲಿ 21 ಸಾವಿರ ಕಂದಾಯ ಗ್ರಾಮ ಹಕ್ಕು ಪತ್ರ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಕಾರ್ಯಕ್ರಮದ ಸಿದ್ಧತೆ ಹಾಗೂ ಸವಲತ್ತುಗಳ ವಿತರಣೆ ಬಗ್ಗೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ಆಯೋಜನೆ ಮಾಡಲಾಗಿದೆ. ಆನ್‌ಲೈನ್‌ಗಿಂತ ನೇರವಾಗಿ ಸಭೆ ನಡೆಸುವುದು ಹೆಚ್ಚು ಪರಿಣಾಮಕಾರಿಯಾಗಿದ್ದು, ಮತ್ತೊಮ್ಮೆ ಸಭೆ ಆಯೋಜನೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.
ವಿಜಯನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಶಾಮಿಯಾನಾ ಗುತ್ತಿಗೆ ಪಡೆದವರು ಯಾರು? ಎಂಬ ಬಗ್ಗೆ ಮಾಹಿತಿ ಪಡೆದ ಸಚಿವರು, ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ನಾಗರಾಜ್, ಎಸ್ಪಿ ಯಶೋಧಾ ವಂಟಗೋಡಿ, ಜಿಪಂ ಸಿಇಒ ರುಚಿ ಬಿಂದಲ್, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯುಟಿವ್ ಇಂಜಿನಿಯರ್ ಎನ್.ಎನ್. ಪಾಟೀಲ ಮತ್ತಿತರ ಅಧಿಕಾರಿಗಳು ಇದ್ದರು.
Haveri News: ಜಾತ್ರೆಯಲ್ಲಿ ಪ್ರಾಣಿ-ಪಕ್ಷಿ ಬಲಿ ನಿಷೇಧಿಸಿ ಹಾವೇರಿ ಜಿಲ್ಲಾಧಿಕಾರಿ ಆದೇಶ
ತ್ವರಿತವಾಗಿ ಮಾಡಿ
ವೇದಿಕೆ ನಿರ್ಮಾಣ ಸ್ಥಳದಲ್ಲಿನ ಕೆಲಸ ಪರಿಶೀಲಿಸಿದ ಸಚಿವರು, ಈ ವೇಳೆಗೆ ವೇದಿಕೆ ನಿರ್ಮಾಣ ಆರಂಭವಾಗಬೇಕಿತ್ತು. ವಿಳಂಬವಾದರೆ ಕೊನೆಯ ಹಂತದಲ್ಲಿ ಸಮಸ್ಯೆಯಾಗಬಹುದು. ಹೀಗಾಗಿ ಬೇಗ ಬೇಗ ಕೆಲಸ ಮಾಡಿಸಬೇಕು ಎಂದು ಸೂಚನೆ ನೀಡಿದರು. ದ್ವಿಚಕ್ರ ವಾಹನ ಮತ್ತಿತರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಗಣ್ಯರು, ಅತಿ ಗಣ್ಯರ ವಾಹನಗಳಿಗೆ ಪ್ರತ್ಯೇಕ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ವೇದಿಕೆಯ ಸಮೀಪದಲ್ಲೇ ಗಣ್ಯರ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡುವುದು ಸೂಕ್ತ ಎಂದು ಸಚಿವ ಶಿವಾನಂದ ಪಾಟೀಲ ಸಲಹೆ ಮಾಡಿದರು.