Sonu Nigam Case: ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಸೋನು ನಿಗಮ್ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ
Sonu Nigam Case: ತಮ್ಮ ಮೇಲಿನ ಎಫ್‌ಐಆರ್ ರದ್ದು ಮಾಡುವಂತೆ ಗಾಯಕ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯ ದಿನಾಂಕದವರೆಗೆ ಗಾಯಕ ಸೋನು ನಿಗಮ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ.


ಬೆಂಗಳೂರು: ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ (Sonu Nigam Case) ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ಗುರುವಾರ ನಗರ ಪೊಲೀಸರಿಗೆ ಅನುಮತಿ ನೀಡಿದೆ. ಆದರೆ, ಗಾಯಕನ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನ್ಯಾಯಾಲಯ ಸೂಚಿಸಿದೆ. ತಮ್ಮ ಮೇಲಿನ ಎಫ್‌ಐಆರ್ ರದ್ದು ಮಾಡುವಂತೆ ಗಾಯಕ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯ ದಿನಾಂಕದವರೆಗೆ ಗಾಯಕ ಸೋನು ನಿಗಮ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ.
ಇನ್ನು ಸೋನು ನಿಗಮ್ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಅಗತ್ಯವಿದ್ದರೆ ತನಿಖಾ ಅಧಿಕಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ದಾಖಲಿಸಿಕೊಳ್ಳಲು ನ್ಯಾಯಾಲಯವು ಸೂಚಿಸಿದೆ. ಒಂದು ವೇಳೆ ದೈಹಿಕವಾಗಿ ಹಾಜರಾಗು ಎಂದಾದರೆ, ತನಿಖಾಧಿಕಾರಿಯೇ ಸೋನು ನಿಗಮ್ ಅವರನ್ನು ಭೇಟಿ ಮಾಡಬಹುದು ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಸೋನು ನಿಗಮ್ ಭರಿಸುವಂತೆ ನ್ಯಾಯಾಲಯ ತಿಳಿಸಿದೆ.
ವಿಚಾರಣೆಯ ಸಮಯದಲ್ಲಿ, ನಿಗಮ್ ಪರ ವಕೀಲ ಧನಂಜಯ್ ವಿದ್ಯಾಪತಿ, ದೂರು ಕೇವಲ ಪ್ರಚಾರಕ್ಕಾಗಿ ಮಾತ್ರ ದಾಖಲಾಗಿದ್ದು, ಐಪಿಸಿ ಸೆಕ್ಷನ್ 505ರ ಅಡಿಯಲ್ಲಿ ಸಾರ್ವಜನಿಕ ಕಿರುಕುಳದ ಆರೋಪ ಸಾಬೀತಾಗಿಲ್ಲ ಎಂದು ವಾದಿಸಿದರು. ಇದು ಒಂದು ಪ್ರತ್ಯೇಕ ಘಟನೆ, ಸಂಗೀತ ಕಾರ್ಯಕ್ರಮ ಸರಾಗವಾಗಿ ನಡೆಯಿತು. ಆದರೆ ಮೂರನೇ ವ್ಯಕ್ತಿ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | Kuladalli keelyavudo Movie: ಸೋನು ನಿಗಮ್ ಹಾಡಿರುವ ಹಾಡನ್ನು ನಮ್ಮ ಚಿತ್ರದಿಂದ ತೆಗೆದಿದ್ದೇವೆ: ʼಕುಲದಲ್ಲಿ ಕೀಳ್ಯಾವುದೋʼ ಚಿತ್ರತಂಡ
ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ನಿಗಮ್ ಅವರ ಹೇಳಿಕೆಗಳನ್ನು ತನಿಖೆಯ ಸಂದರ್ಭದಲ್ಲಿ ಪರಿಶೀಲಿಸುವ ಅಗತ್ಯವಿದೆ. ಕಾನೂನು ಉದ್ದೇಶಪೂರ್ವಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೆಕ್ಷನ್ 482 (CrPC) ಅಡಿಯಲ್ಲಿ ನಿರ್ಣಯಿಸಲಾಗುವುದಿಲ್ಲ. ಅವರು ತನಿಖೆಗೆ ಸಹಕರಿಸಿಲ್ಲ. ಕಾನೂನು ಪ್ರಕ್ರಿಯೆಯನ್ನು ಗೌರವಿಸದ ವ್ಯಕ್ತಿಗೆ 482ರ ಅಡಿಯಲ್ಲಿ ಪ್ರಯೋಜನವನ್ನು ನೀಡಲಾಗುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿಯಲ್ಲ, ಆದರೆ ಅದಕ್ಕಾಗಿಯೇ ಅವರು ಅಂತಹ ಹೇಳಿಕೆಯನ್ನು ನೀಡಬಾರದು ಎಂದು ತಿಳಿಸಿದರು.
ಏನಿದು ಪ್ರಕರಣ?
ಏಪ್ರಿಲ್ 25ರಂದು ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಒತ್ತಾಯ ಮಾಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್, ಕನ್ನಡ, ಕನ್ನಡ... ಇಂತಹವರಿಂದಲೇ ಪಹಲ್ಗಾಮ್ ದಾಳಿ ಆಗಿರುವುದು ಎಂದು ಹೇಳಿದ್ದರು. ಹೀಗಾಗಿ ಸೋನು ನಿಗಮ್ ಆಕ್ಷೇಪಾರ್ಹ ಮತ್ತು ಕನ್ನಡಿಗರ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ ಎಂದು ಮೇ 2ರಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ ಎ ಧರ್ಮರಾಜ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಮೇ 3ರಂದು ಎಫ್‌ಐಆರ್ ದಾಖಲಿಸಿದ್ದರು. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 351 (2) (ಕ್ರಿಮಿನಲ್ ಬೆದರಿಕೆ), 353 (ಸಾರ್ವಜನಿಕವಾಗಿ ಕಿರಿಕಿರಿ ಉಂಟು ಮಾಡುವ ಹೇಳಿಕೆ), 352(1) (ಉದ್ದೇಶಪೂರ್ವಕವಾಗಿ ಅವಮಾನ) ಅಡಿ ಕರವೇ ಧರ್ಮರಾಜ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ.