ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಡದಿ ಟೌನ್‌ಶಿಪ್‌ ಯೋಜನೆ ರೂಪು ತಳೆದಿದ್ದು ಹೇಗೆ? 2006ರ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಿಂದ ಇಲ್ಲಿಯವರೆಗಿನ ಬೆಳವಣಿಗೆಯ ಸಮಗ್ರ ಚಿತ್ರಣ

Bidadi Township Row: ಬಿಡದಿ ಟೌನ್‌ಶಿಪ್‌ ವಿವಾದ ತಾರಕಕ್ಕೇರಿದೆ. ಕಾಂಗ್ರೆಸ್‌ ನೇತೃತ್ವದ ಸರಾರ ಈ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಘೋಷಿಸಿದರೆ ಜೆಡಿಎಸ್‌ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆಗೆ ತೀವ್ರ ವ್ಯಕ್ತಪಡಿಸುವ ಎಚ್‌.ಡಿ. ಕುಮಾರಸ್ವಾಮಿಯೇ ಇದನ್ನು ಆರಂಭಿಸಿದ್ದು ಎಂದಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆ ನಡೆದು ಬಂದ ಹಾದಿಯ ಪರಿಚಯ ಇಲ್ಲಿದೆ.

ಬಿಡದಿ ಟೌನ್‌ಶಿಪ್‌ ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಜು. 15: ಸದ್ಯ ರಾಜ್ಯಾದ್ಯಂತ ಬಿಡದಿ ಟೌನ್‌ಶಿಪ್‌ (ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣ) ಯೋಜನೆ ಭಾರಿ ಸದ್ದು ಮಾಡುತ್ತಿದೆ. ಆಡಳಿತರೂಢ ಕಾಂಗ್ರೆಸ್‌ ಮತ್ತು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ನಡುವಿನ ಹಗ್ಗ ಜಗ್ಗಾಟಕ್ಕೆ ಈ ಯೋಜನೆ ಕಾರಣವಾಗಿದ್ದು, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬಿಡದಿ ಹೋಬಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂದಾಜು 20 ಸಾವಿರ ಕೋಟಿ ರುಪಾಯಿ ವೆಚ್ಚದ ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಈ ಯೋಜನೆಯನ್ನು ಮಾಡೇ ತೀರುವುದಾಗಿ ಘೋಷಿಸಿದ್ದರೆ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಈ ಮಧ್ಯೆ ಯೋಜನೆಯನ್ನು ತೀವ್ರವಾಗಿ ವಿರೋಧಿಸುವ ಕುಮಾರಸ್ವಾಮಿ 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇದನ್ನು ಆರಂಭಿಸಿದ್ದರು ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.

ಟೌನ್‌ಶಿಪ್‌ ಯೋಜನೆಗೆ 2006ರಲ್ಲಿ ಗುರುತಿಸಿದ ಭೂಪ್ರದೇಶದ ಪೈಕಿ 8,493 ಎಕ್ರೆಯಲ್ಲಿ ಸಮಗ್ರ ಉಪನಗರ ಯೋಜನೆ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಈ ಯೋಜನೆ ಯಾವಾಗ ಆರಂಭವಾಯ್ತು ಎನ್ನುವ ಹಂತ ಹಂತದ ಸಮಗ್ರ ಮಾಹಿತಿ ಇಲ್ಲಿದೆ.

ಬಿಡದಿ ಟೌನ್‌ಶಿಪ್‌ ಯೋಜನೆ ಆರಂಭಿಸಿದ್ದೇ ಕುಮಾರಸ್ವಾಮಿ; ಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು

ಯೋಜನೆಯ ಆರಂಭ

ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2006ರ ಸೆಪ್ಟೆಂಬರ್‌ 9ರಂದು ನಡೆದ ಸಭೆಯಲ್ಲಿ ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಹೊಸ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಯೋಜನೆಯ ಕುರಿತು ಚರ್ಚೆ ನಡೆಸಲಾಯಿತು. 5 ಸಮಗ್ರ ಉಪನಗರವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು.

  • ನಂದಗುಡಿ ಹೋಬಳಿ, ಹೊಸಕೋಟೆ ತಾಲೂಕು-18,507 ಎಕ್ರೆ
  • ಕಸಬಾ ಹೋಬಳಿ, ರಾಮನಗರ ತಾಲೂಕು-4,013 ಎಕ್ರೆ
  • ಬಿಡದಿ ಹೋಬಳಿ, ರಾಮನಗರ ತಾಲೂಕು-9,684 ಎಕ್ರೆ
  • ಸೋಲೂರು ಹೋಬಳಿ, ಮಾಗಡಿ ತಾಲೂಕು-12,525 ಎಕ್ರೆ
  • ಸಾತನೂರು ಹೋಬಳಿ, ಕನಕಪುರ ತಾಲೂಕು-16,232 ಎಕ್ರೆ

ಅಧಿಸೂಚನೆ

2006ರ ಅಕ್ಟೋಬರ್‌ 10ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಬಿಡದಿ, ಸಾತನೂರು, ರಾಮನಗರ, ಸೋಲೂರು, ನಂದಗುಡಿ-ಒಟ್ಟು 5 ಸಮಗ್ರ ಉಪನಗರ ಯೋಜನೆಯನ್ನು ಕೈಗೊಳ್ಳಲು ಪ್ರಸ್ತಾವಿಸಲಾಯಿತು.

ಅನುಮತಿ ಇಲ್ಲದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಂತೆ ಸೂಚನೆ

2006ರ ನವೆಂಬರ್‌ 29ರಂದು ಉದ್ದೇಶಿತ ಟೌನ್‌ಶಿಪ್‌ ಯೋಜನೆಗಾಗಿ ಘೋಷಿಸಲ್ಪಟ್ಟ ಗ್ರಾಮದಲ್ಲಿ ಯಾವುದೇ ಪ್ರಾಧಿಕಾರವಾಗಲೀ ಅಥವಾ ವ್ಯಕ್ತಿಯಾಗಲಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪೂರ್ವಾನುಮತಿ ಪಡೆಯದೇ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂದು ಸೂಚಿಸಲಾಯಿತು.

DLF Ltd.ಗೆ ಬಿಡ್‌

2007ರ ಅಕ್ಟೋಬರ್‌ 26ರಂದು DLF Ltd. ಸಲ್ಲಿಸಿದ ಬಿಡ್‌ ಒಪ್ಪಿ Development Partner ಆಗಿ ಆದೇಶ ಹೊರಡಿಸಲಾಯಿತು.

ಮರು ಟೆಂಡರ್‌

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2010ರ ಜೂನ್‌ 1ರಂದು ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಕಾರ್ಯಗತಗೊಳಿಸಲು 2ನೇ ಬಾರಿಗೆ ಜಾಗತಿಕ ಮರು ಟೆಂಡರ್‌ ಕರೆಯಲಾಯಿತು.

ಅಭಿವೃದ್ದಿ ಕಾಮಗಾರಿ ಅಳವಡಿಕೆಗೆ ಸೂಚನೆ

ಸದಾನಂದ ಗೌಡ ಸಿಎಂ ಆಗಿದ್ದಾಗ 2011ರ ಸೆಪ್ಟೆಂಬರ್‌ 29ರಂದು ಉದ್ದೇಶಿತ ರಾಮನಗರ, ಸೋಲೂರು, ನಂದಗುಡಿ ಮತ್ತು ಸಾತನೂರು ಸಮಗ್ರ ಉಪನಗರಗಳಿಗೆ ಮೀಸಲಿರಿಸಿದ ಪ್ರದೇಶದ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ವಾಣಿಜ್ಯ, ಕೈಗಾರಿಕೆ, ವಸತಿ ಮತ್ತಿತರ ಅಭಿವೃದ್ದಿಗಾಗಿ ಭೂ ಉಪಯೋಗ ಬದಲಾವಣೆ ಅಥವಾ ಅಭಿವೃದ್ಧಿಗೆ ಬರುವ ಪ್ರಸ್ತಾವನೆಗಳನ್ನು ಸರ್ಕಾರದ ಪೂರ್ವಾನುಮತಿಯೊಂದಿಗೆ ಮಂಜೂರಾತಿ ಪಡೆದು ಕ್ರಮ ಕೈಗೊಳ್ಳಲು ಹಾಗೂ ಈ ಅಭಿವೃದ್ಧಿಗಳನ್ನು ಸಮಗ್ರ ಉಪನಗರ ಯೋಜನೆಯಲ್ಲಿ ಸೂಕ್ತವಾಗಿ ಅಳವಡಿಸಿಕೊಳ್ಳಲು ಆದೇಶ ಹೊರಡಿಸಲಾಯಿತು.

ತಾತ್ಕಾಲಿಕ ಸ್ಥಗಿತ

ಸದಾನಂದ ಗೌಡ ಅವರ ಆಡಳಿತಾವಧಿಯಲ್ಲಿ 2011ರ ನವೆಂಬರ್‌ 3ರಂದು ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಉನ್ನತ ಮಟ್ಟದ ಸಮಿತಿ ರಚನೆ

2012ರ ಜುಲೈ 26ರಂದು ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಟೌನ್‌ಶಿಪ್‌ಗಳ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲು ನೀತಿಯನ್ನು ರೂಪುಗೊಳಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಯಿತು. ಈ ವೇಳೆ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದರು.

ಪ್ರಾಧಿಕಾರ ರಚನೆ

2016ರ ಅಕ್ಟೋಬರ್‌ 21ರಂದು ಗ್ರೇಟರ್‌ ಬೆಂಗಳೂರು ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರದೇಶಕ್ಕೆ ಯೋಜನಾ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಲಾಯಿತು. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದರು.

ಭೂ ಸ್ವಾಧೀನಕ್ಕೆ ಸೂಚನೆ

2020ರ ಜನವರಿ 1ರಂದು ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತು. ಮೇ 15ರಂದು ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆದು ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.

ನವನಗರ ನಿರ್ಮಾನಕ್ಕೆ ಸೂಚನೆ

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವತಿಯಿಂದ 2022ರ ಮಾರ್ಚ್‌ 4ರಂದು ನವನಗರ ನಿರ್ಮಾಣವನ್ನು ಘೋಷಿಸಲಾಯಿತು.

ಮೇಲ್ದರ್ಜೆಗೆ

2023ರ ನವೆಂಬರ್‌ 18ರಂದು ಸಿದ್ದರಾಮಯ್ಯ ಸರ್ಕಾರವು ಗ್ರೇಟರ್‌ ಬೆಂಗಳೂರು ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೇರಿಸಿತು.

7,481 ಎಕರೆ 21 1/2 ಗುಂಟೆ ಸ್ವಾಧೀನಕ್ಕೆ ಅಧಿಸೂಚನೆ

ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗ 2025ರ ಮಾರ್ಚ್‌ 12ರಂದು 9 ಗ್ರಾಮಗಳಾದ ಅರಳಾಳುಸಂದ್ರ, ಬನ್ನಿಗಿರಿ, ಭೈರಮಂಗಲ, ಕೆ.ಜಿ. ಗೊಲ್ಲರಪಾಳ್ಯ, ಹೊಸೂರು, ಮಂಡಲಹಳ್ಳಿ, ಕೆಂಪಯ್ಯನಪಾಳ್ಯ, ಕಂಚುಗಾರನಹ‍್ಳಿ ಮತ್ತು ವಡೇರಹಳ್ಳಿಯ ಒಟ್ಟು 7,481 ಎಕರೆ 21 1/2 ಗುಂಟೆ ಸ್ವಾಧೀನ ಪಡಿಸಲು ಅಧಿಸೂಚನೆ ಹೊರಬಿತ್ತು.

ಅನುಷ್ಠಾನಕ್ಕೆ ಅನುಮೋದನೆ

2026ರ ಮೇ 7ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಅನುಷ್ಟಾನಗೊಳಿಸಲು ಅನುಮೋದನೆ ನೀಡಿತು.

''ಡಿ.ಕೆ. ಶಿವಕುಮಾರ್ ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ''; ನಿಖಿಲ್‌ ಕುಮಾರಸ್ವಾಮಿ ಕಿಡಿ

518 ಎಕರೆ ಭೂಸ್ವಾಧೀನ

2026ರ ಜೂನ್‌ 10ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸರ್ಕಾರ 3 ಗ್ರಾಮಗಳ ಒಟ್ಟು 518 ಎಕರೆ ಸ್ವಾಧೀನಪಡಿಸಲು ಅಧಿಸೂಚನೆ ಹೊರಡಿಸಿತು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author