ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi Township Row: ''ಡಿ.ಕೆ. ಶಿವಕುಮಾರ್ ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ''; ನಿಖಿಲ್‌ ಕುಮಾರಸ್ವಾಮಿ ಕಿಡಿ

Bidadi Township Row: ಬಿಡದಿ ಟೌನ್​ಶಿಪ್​​​ ಯೋಜನೆ ವಿವಾದ ದಿನೇ ದಿನೇ ಜೋರಾಗಿದೆ. ಇದೀಗ ಜೆಡಿಎಸ್‌ ನಾಯಕ, ದೇವೇಗೌಡ ಅವರ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ. ''ಜೆಡಿಎಸ್‌ ಸದಾ ರೈತರ ಪರವಾಗಿ ನಿಲ್ಲಲಿದ್ದು, ಸರ್ಕಾರದ ಈ ದ್ರೋಹದ ವಿರುದ್ಧ ಉಗ್ರ ಹೋರಾಟ ನಡೆಸಲಿದೆʼʼ ಎಂದಿದ್ದಾರೆ.

ಡಿಕೆಶಿ ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ ಎಂದ ನಿಖಿಲ್‌

ನಿಖಿಲ್‌ ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jul 15, 2026 7:04 PM

ಬೆಂಗಳೂರು, ಜು. 15: ಬಿಡದಿ ಟೌನ್​ಶಿಪ್​​​ ಯೋಜನೆ ವಿವಾದ (Bidadi Township Row) ದಿನೇ ದಿನೇ ಜೋರಾಗಿದೆ. ಇತ್ತೀಚೆಗೆ ಸರ್ವೆ ಮಾಡಲು ಬಂದಿದ್ದ ಜಿಬಿಎ ಅಧಿಕಾರಿಗಳಿಗೆ ಪ್ರತಿಭಟನಾನಿರತ ಮಹಿಳೆಯರು ಪೊರಕೆ ಏಟು ನೀಡಿದ್ದರು. ಕಲ್ಲು ತೂರಿ ಕಾರು ಜಖಂಗೊಳಿಸಿದ್ದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಾಜಿ ಪ್ರಧಾನಿ ಎಚ್.​ಡಿ. ದೇವೇಗೌಡ ಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರಿಗೆ ಪತ್ರ ಬರೆಯುವ ಮೂಲಕ ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ಇದರ ನಡುವೆ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದು, ಇದೀಗ ಜೆಡಿಎಸ್‌ ನಾಯಕ, ದೇವೇಗೌಡ ಅವರ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ನಿಖಿಲ್‌ ಬರೆದುಕೊಂಡಿದ್ದಾರೆ. ʼʼಮಾಧ್ಯಮಗಳ ಮುಂದೆ ಕೈಯಲ್ಲಿ ಪೆನ್ನು-ಪೇಪರ್ ಹಿಡಿದು, ಜಿಬಿಐಟಿ (Greater Bengaluru Integrated Township) ಯೋಜನೆ ಮರುಪರಿಶೀಲನೆಗೆ ಸಮಿತಿ ರಚಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಆದರೆ ಬೆನ್ನ ಹಿಂದೆಯೇ ಬನ್ನಿಗಿರಿ, ಅಲ್ಲಾಸಂದ್ರ ಹಾಗೂ ಕೆ.ಜಿ. ಗೊಲ್ಲರಪಾಳ್ಯ ಗ್ರಾಮಗಳ ಭೂಸ್ವಾಧೀನಕ್ಕೆ ಹಿಂಬಾಗಿಲಿನಿಂದ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆʼʼ ಎಂದು ನಿಖಿಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಎಕ್ಸ್‌ ಪೋಸ್ಟ್‌:



ʼʼಒಂದೆಡೆ ರೈತರ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಾ, ಇನ್ನೊಂದೆಡೆ ಅವರ ಬದುಕಿಗೆ ಕೊಳ್ಳಿ ಇಡುವ ಈ ವಂಚನೆಯ ನಾಟಕವನ್ನು ಒಪ್ಪಲು ಸಾಧ್ಯವೇ ಇಲ್ಲ. ಜೆಡಿಎಸ್‌ ಸದಾ ರೈತರ ಪರವಾಗಿ ನಿಲ್ಲಲಿದ್ದು, ಸರ್ಕಾರದ ಈ ದ್ರೋಹದ ವಿರುದ್ಧ ಉಗ್ರ ಹೋರಾಟ ನಡೆಸಲಿದೆʼʼ ಎಂದು ಘೋಷಿಸಿದ್ದಾರೆ.

ಟೌನ್‌ಶಿಪ್‌ ಯೋಜನೆ ಆರಂಭಿಸಿದ್ದೇ ಕುಮಾರಸ್ವಾಮಿ; ಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು

ಅಂತಿಮ ಅಧಿಸೂಚನೆ

ರಾಜ್ಯ ಸರ್ಕಾರ ಜುಲೈ 15ರಂದು ಪ್ರಕಟಿಸಿದ ಅಂತಿಮ ಅಧಿಸೂಚನೆಯಲ್ಲಿ ಕೆಜಿ ಗೊಲ್ಲರಪಾಳ್ಯ: ಒಟ್ಟು 315 ಎಕರೆ (5 ಎಕರೆ ಕರಾಬು ಜಮೀನು), ಬನ್ನಿಗಿರಿ: ಒಟ್ಟು 775 ಎಕರೆ 6 ಗುಂಟೆ (99 ಎಕರೆ ಕರಾಬು ಜಮೀನು), ಅರಳಾಳುಸಂದ್ರ: ಒಟ್ಟು 1,460 ಎಕರೆ 21 ಗುಂಟೆ (30 ಎಕರೆ ಕರಾಬು ಜಮೀನು) ಸ್ವಾಧೀನ ಪಡಿಸುವುದಾಗಿ ತಿಳಿಸಿದೆ.

ಬಿಡದಿ ಟೌನ್‌ಶಿಪ್: ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ.ಕೆ.ಶಿವಕುಮಾರ್

ಏನಿದು ಯೋಜನೆ?

ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಬಿಡದಿ ಹೋಬಳಿಯಲ್ಲಿ ಅಂದಾಜು 20 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ನಿರ್ಮಿಸುವ ಯೋಜನೆ ಇದಾಗಿದೆ. ಸಿಎಂ ಡಿ.ಕೆ. ಶಿವಕುಮಾರ್‌ ಅವರ ಕನಸಿನ ಯೋಜನೆಯಾದ ಇದಕ್ಕೆ ಜೆಡಿಎಸ್‌ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಬಿಡದಿ ಟೌನ್‌ಶಿಪ್‌ ಯೋಜನೆ ಕೈಬಿಡುವಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸರ್ಕಾರಕ್ಕೆ ಆಗ್ರಹಿಸಿದ್ದರು. ಜೆಡಿಎಸ್‌ ಕಚೇರಿಯಲ್ಲಿ ಜುಲೈ 14ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ʼʼಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ನೀವೇ ಮುಖ್ಯಮಂತ್ರಿಯಾಗಲು ಹೈಕಮಾಂಡ್‌ಗೆ ಏನೇನು ಭರವಸೆ ಕೊಟ್ಟಿದ್ದೀರೊ ಗೊತ್ತಿಲ್ಲ. ಆದರೆ ಈ ಭರವಸೆ ಈಡೇರಿಸಲು ಬಿಡದಿ ರೈತರ ಬದುಕನ್ನು ಬಲಿ ಕೊಡಬೇಡಿʼʼ ಎಂದು ನೇರವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.