DK Shivakumar: ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದಿಲ್ಲ, ನನಗೆ ಮುಖ್ಯಮಂತ್ರಿ ಆಗುವ ಆತುರವಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
Bengaluru: ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ. ಮಾತಿನ ವೇಳೆ ಯಾರೋ ಸಾರ್ವಜನಿಕರು ನೀವು ಸಿಎಂ ಆಗೋ ಟೈಂ ಹತ್ತಿರ ಬರಲಿ ಅಂದ್ರು. ನಾನು ಅದಕ್ಕೆ ಪ್ರತಿಕ್ರಿಯಿಸಿಲ್ಲ. ನನ್ನ ಹೇಳಿಕೆಯನ್ನು ತಿರುಚುವ ಕೆಲಸ ಆಗುತ್ತಿದೆ ಎಂದಿದ್ದಾರೆ. ನಾನು ಮುಖ್ಯಮಂತ್ರಿ ಆಗುವ ಟೈಂ ಹತ್ತಿರ ಬಂದಿದೆ ಅಂತ ಹೇಳಿಲ್ಲ ಎಂದಿದ್ದಾರೆ ಡಿಕೆಶಿ.

-

ಬೆಂಗಳೂರು: ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ. ಕೆಲವು ಮಾಧ್ಯಮಗಳು ಸುದ್ದಿ ತಿರುಚಿ ವಿವಾದ ಸೃಷ್ಟಿಸುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಬೇಸರ ವ್ಯಕ್ತಪಡಿಸಿದರು. ಲಾಲ್ ಬಾಗ್ ಉದ್ಯಾನದಲ್ಲಿ ಶನಿವಾರ ಬೆಂಗಳೂರು (Bengaluru) ನಡಿಗೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರೊಂದಿಗೆ ಸಂವಾದದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು ನೀವು ಮುಖ್ಯಮಂತ್ರಿ ಆಗಬೇಕು, ಅ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ಸುದ್ದಿ ತಿದ್ದಿ ಪ್ರಸಾರ ಮಾಡುತ್ತಿವೆ. ನೀವು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬೇಡಿ" ಎಂದು ತಿಳಿಸಿದರು.
"ನಾನು ಸಿಎಂ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. ನಾನು ಆ ಹೇಳಿಕೆ ಎಲ್ಲಿ ಹೇಳಿದ್ದೇನೆ. ನಾನು ಆ ರೀತಿ ಹೇಳಿಲ್ಲ, ಅದರ ಅಗತ್ಯವೂ ನನಗೆ ಇಲ್ಲ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೋ ಕೊಡಲಿ. ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರೀಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ" ಎಂದೂ ತಿಳಿಸಿದರು.
ಡಿಸಿಎಂ ಬೆಂಗಳೂರು ನಡಿಗೆ
ಬೆಂಗಳೂರಿನ ಸಾಮಾನ್ಯ ನಾಗರಿಕರ ಬಳಿ ನಾನು ಮಾತನಾಡಬೇಕು. ಅವರ ಸಮಸ್ಯೆ, ಅಭಿಪ್ರಾಯಗಳನ್ನು ಆಲಿಸಬೇಕು. ಈ ಕಾರಣಕ್ಕಾಗಿ ಪ್ರತಿ ಶನಿವಾರ ಹಾಗೂ ಭಾನುವಾರದ ಬೆಳಿಗ್ಗೆ ವೇಳೆ ಪಾಲಿಕೆವಾರು ‘ಉದ್ಯಾನ ನಡಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: Bigg Boss Kannada 12: ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಸ್ಥಿಕೆ, ಜಾಲಿವುಡ್ ಬೀಗಮುದ್ರೆ ಓಪನ್, ಥ್ಯಾಂಕ್ಸ್ ಹೇಳಿದ ಕಿಚ್ಚ
ಪಾಲಿಕೆವಾರು ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದೇ ಶನಿವಾರ ಲಾಲ್ ಬಾಗ್ ನಲ್ಲಿ ಹಾಗೂ ಭಾನುವಾರ ಜೆ.ಪಿ. ಪಾರ್ಕ್ ನಲ್ಲಿ ಈ ನಡಿಗೆ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಇದೇ ರೀತಿ ಮೊದಲ ಹಂತದಲ್ಲಿ 10 ದಿನ 10 ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಮಾಡಲಿದ್ದೇನೆ. ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆದು ಅಗತ್ಯ ಬದಲಾವಣೆ ತಿದ್ದುಪಡಿ ಮಾಡಿಕೊಳ್ಳಲು ಈ ಕಾರ್ಯಕ್ರಮ. ನಡಿಗೆಯ ಅವಧಿ ಒಂದು ಗಂಟೆಯಿರುತ್ತದೆ. ಈ ವೇಳೆ ಜನ ಸಾಮಾನ್ಯರ ಬಳಿ ವಿಚಾರಗಳ ವಿನಿಮಯ ಹಾಗೂ ಚರ್ಚೆ ನಡೆಸಲಾಗುವುದು. ಏಕೆಂದರೆ ನಾಯಕರೇ ಒಂದು ಹೇಳುತ್ತಾರೆ. ಜನಸಾಮಾನ್ಯರೇ ಒಂದಷ್ಟು ಹೇಳುತ್ತಾರೆ. ಜನರ ಸಮಸ್ಯೆ ಏನಿದೆ ಎಂದು ಅವರಿಂದಲೇ ತಿಳಿದುಕೊಳ್ಳಬೇಕು. ಈ ದೃಷ್ಟಿಯಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಟನಲ್ ರಸ್ತೆಯಿಂದ ಲಾಲ್ ಬಾಗ್‌ಗೆ ಹಾನಿಯಾಗಲಿದೆ ಎಂದು ಕೇಳಿದಾಗ “ಟನಲ್ ರಸ್ತೆಯಿಂದ ಲಾಲ್ ಬಾಗ್ ಹಾಳಾಗುತ್ತದೆ ಎಂದು ಹೇಳಲಾಗುತ್ತಿದೆ. ಲಾಲ್ ಬಾಗ್ ಹಾಳಾಗುವುದಿಲ್ಲ. ಅದನ್ನು ಹಾಳು ಮಾಡಿದರೆ ನನ್ನ ತಲೆ ಒಡೆದು ಹಾಕುತ್ತಾರೆ ಎಂಬುದು ನನಗೆ ಗೊತ್ತಿದೆ. ಒಂದು ಮೂಲೆಯಲ್ಲಿ ಭೂಗರ್ಭದಲ್ಲಿ ಹೋಗುತ್ತದೆ. ಲಾಲ್ ಬಾಗ್‌ಗೆ ಯಾವುದೇ ತೊಂದರೆಯಾಗುವುದಿಲ್ಲ, ತೊಂದರೆ ಮಾಡಲು ಆಗುವುದಿಲ್ಲ” ಎಂದರು.
“ಉದ್ಯಾನದ ಒಂದು ಮೂಲೆಯಲ್ಲಿ ಕಲ್ಲು ಬಂಡೆಯಿದ್ದು ಅಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸುವಂತೆ ಯೋಜಿಸಲಾಗಿದೆ. ಆ ಪ್ರದೇಶವನ್ನು ನಾನು ವೀಕ್ಷಣೆ ಮಾಡುತ್ತೇನೆ. ಏನಾದರೂ ತೊಂದರೆಗಳು, ಬದಲಾವಣೆಗಳಿದ್ದರೆ ಅದನ್ನು ಮಾಡಿಕೊಳ್ಳೋಣ. ಐತಿಹಾಸಿಕ ಲಾಲ್ ಬಾಗ್ ಅನ್ನು ಹಾಳು ಮಾಡಲು ಆಗುತ್ತದೆಯೇ? ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ನಾನೇ ಕಣ್ಣಾರೆ ನೋಡಿ ತಿಳಿದುಕೊಳ್ಳುತ್ತೇನೆ” ಎಂದು ತಿಳಿಸಿದರು.