Karnataka Budget 2025: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವಧನ ಹೆಚ್ಚಳ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು, ಬಹುದಿನಗಳ ಬೇಡಿಕೆಯಾದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವಧನ ಹೆಚ್ಚಿಸಿದ್ದಾರೆ. ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1 ಸಾವಿರ ರೂ. ಹಾಗೂ ಸಹಾಯಕಿಯರ ಗೌರವಧನ 750 ರೂ. ಹೆಚ್ಚಳ ಮಾಡುವುದಾಗಿ ಅವರು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ.

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ (Karnataka Budget 2025). 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೆ ಭರಪೂರ ಕೊಡುಗೆ ಘೋಷಿಸಲಾಗಿದೆ. ಇನ್ನು ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಒದಗಿಸಲಾಗಿದೆ ಎಂದು ಅವರು ತಿಳಿಸಿದರು. ಕಳೆದ ಎರಡು ಆಯವ್ಯಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ. ಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿ. ಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ ಎಂದೂ ತಿಳಿಸಿದರು. ಬಹು ದಿನಗಳ ಬೇಡಿಕೆಯಾದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವಧನ ಹೆಚ್ಚಿಸುವುದಾಗಿ ತಿಳಿಸಿದರು.
- ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1 ಸಾವಿರ ರೂ. ಹಾಗೂ ಸಹಾಯಕಿಯರ ಗೌರವಧನ 750 ರೂ. ಹೆಚ್ಚಳ.
- ಸಕ್ಷಮ ಅಂಗನವಾಡಿ ಯೋಜನೆಯಡಿ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು 175 ಕೋಟಿ ರೂ. ನೆರವು.
- ಅಂಗನವಾಡಿ ಕಟ್ಟಡಗಳಿಗೆ ಸಿ.ಎ. ನಿವೇಶನ ಖರೀದಿಗಾಗಿ 10 ಕೋಟಿ ರೂ.
- ವಿಶೇಷ ಚೇತನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ವಿಕಲಚೇತನರ ಸಮೀಕ್ಷೆ ನಡೆಸಲು ಕ್ರಮ.
- ಮೈಸೂರಿನ ದೃಷ್ಟಿದೋಷವುಳ್ಳ ಮಕ್ಕಳ ಸರ್ಕಾರಿ ವಸತಿಯುತ ಶಾಲೆ ಹಾಗೂ ಬೆಳಗಾವಿಯಲ್ಲಿರುವ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳ ಅಭಿವೃದ್ಧಿಗೆ 5 ಕೋಟಿ ರೂ.
- ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಕಾಯಿಲೆಗಳಿಂದ ಬಳಲುತ್ತಿರುವವರ ಆರೈಕೆದಾರರಿಗೆ ಮಾಸಿಕ 1 ಸಾವಿರ ರೂ. ಪ್ರೋತ್ಸಾಹಧನ ಯೋಜನೆ ವಿಸ್ತರಣೆ.
- ವಿಶೇಷ ಪಾಲನಾ ಯೋಜನೆಯಡಿ ಹೆಚ್.ಐ.ವಿ. ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ನೀಡುವ ಮಾಸಿಕ ಧನಸಹಾಯ 2 ಸಾವಿರ ರೂ.ಗೆ ಹೆಚ್ಚಳ
- ರಾಜ್ಯ ಅನುದಾನದಡಿಯಲ್ಲಿರುವ ವಸತಿಯುತ ವಿಶೇಷ ಶಾಲೆಗಳ ಮಕ್ಕಳ ಪಥ್ಯಾಹಾರ ಭತ್ಯೆ ಮಾಸಿಕ 1,750 ರೂ.ಗಳಿಗೆ ಹೆಚ್ಚಳ.
- ಬಳ್ಳಾರಿಯ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಹಾಗೂ ಹುಬ್ಬಳ್ಳಿಯ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢ ಶಾಲಾ ಹಂತಕ್ಕೆ ಮೇಲ್ದರ್ಜೆಗೇರಿಸಲು ಕ್ರಮ.