ಬೆಂಗಳೂರು, ಜೂ. 18: ವಿಧಾನ ಪರಿಷತ್‌ನಲ್ಲಿ ಜೂನ್ 30ರಂದು ತೆರವಾಗಲಿರುವ 7 ಸ್ಥಾನಗಳಿಗೆ ಜೂನ್ 18ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ (Karnataka Legislative Council). ಎಲ್ಲ 222 ಶಾಸಕರು ಹಕ್ಕು ಚಲಾಯಿಸಿದ್ದು, 1 ಮತ ಅಸಿಂಧುಗೊಂಡಿದೆ. ಇನ್ನು ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿಸಿ ಕಾಂಗ್ರೆಸ್ 5 ಹಾಗೂ ಬಿಜೆಪಿ 2 ಸ್ಥಾನ ಗೆದ್ದಿದೆ. ಇನ್ನು ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್‌ಗೆ ಭಾರಿ ಮುಖಭಂಗವಾಗಿದೆ (Karnataka MLC Election Results 2026). ಪರಿಷತ್ ಕಣದಲ್ಲಿ 7 ಸ್ಥಾನಗಳಿಗೆ 8 ಅಭ್ಯರ್ಥಿಗಳು ಅಖಾಡಕ್ಕಿಳಿದ ಹಿನ್ನೆಲೆಯಲ್ಲಿ ಈ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿತ್ತು.
7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್‌ನ 4 ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸುವುದು ನಿಶ್ಚಿತವಾಗಿತ್ತು. ಇನ್ನು 7ನೇ ಸ್ಥಾನಕ್ಕೆ ಜಟಾಪಟಿ ಜೋರಾಗಿತ್ತು. ಆದರೆ ನಿರೀಕ್ಷಿಸದಷ್ಟು ಮತ ದೊರೆಯದೆ ಜೆಡಿಎಸ್ ಅಭ್ಯರ್ಥಿ ಸೋತಿದ್ದು, ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಬಿ.ಎಸ್. ಶಿವಣ್ಣ, ಪಿ.ವಿ. ಮೋಹನ್ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಸ್ಪರ್ಧೆಯಲ್ಲಿದ್ದರು. ಪೈಕಿ ಎಲ್ಲರೂ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಲಿಂಗರಾಜ್ ಪಾಟೀಲ್ ಹಾಗೂ ಮೈಸೂರಿನ ರಘು ಕೌಟಿಲ್ಯ ಜಯಗಳಿಸಿದ್ದಾರೆ. ಇನ್ನು ಜಿದ್ದಾಜಿದ್ದಿನ ಹೋರಾದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೋವಿಂದರಾಜು ಸೋಲುಂಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅವರು ಕಣದಲ್ಲಿದ್ದರು.
ಕಾಂಗ್ರೆಸ್-135, ಬಿಜೆಪಿ-62, ಬಿಜೆಪಿ ಉಚ್ಚಾಟಿತರು-3, ಜೆಡಿಎಸ್-18, ಸರ್ವೋದಯ ಪಕ್ಷ-1, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ-1, ಪಕ್ಷೇತರರು-2 ಶಾಸಕರು ಮತದಾನ ಮಾಡಿದರು. ಗೆಲುವಿಗೆ ಬೇಕಾಗಿರುವ ನಂಬರ್-28.
ವಿಧಾನ ಪರಿಷತ್ ಚುನಾವಣೆ; ಬಸನಗೌಡ ಪಾಟೀಲ್ ಯತ್ನಾಳ್ ಮತ ಅಸಿಂಧುವಾಗುತ್ತ? ಕಾಂಗ್ರೆಸ್ ವಾದವೇನು?
ಡಿಕೆಶಿಗೆ ಬಲ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರಿಗೆ ದೊರೆತ ದೊಡ್ಡ ಗೆಲುವು ಇದು ಎನ್ನುವುದು ವಿಶೇಷ. ತಲಾ 28 ಶಾಸಕರ ಮತಗಳಂತೆ ಒಟ್ಟು 112 ಪ್ರಾಶಸ್ತ್ರದ ಮತಗಳು ಕಾಂಗ್ರೆಸ್‌ನ 4 ಅಭ್ಯರ್ಥಿಗಳಿಗೆ ಚಲಾವಣೆ ಆಗಿವೆ. ಬಳಿಕ ಕಾಂಗ್ರೆಸ್ ಬಳಿ ಉಳಿದ 23 ಮತಗಳ ಜತೆಗೆ ಮೂವರು ಪಕ್ಷೇತರ ಶಾಸಕರು ಹಾಗೂ ಬಿಜೆಪಿ ಇಬ್ಬರು ಉಚ್ಚಾಟಿತ ಶಾಸಕರ ಬೆಂಬಲ ನೀಡುವುದರೊಂದಿಗೆ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆಲುವು ಸಾಧಿಸಿದರು. ಆರಂಭದಿಂದಲೂ ಕಾಂಗ್ರೆಸ್ ತನ್ನ 5 ಅಭ್ಯರ್ಥಿಗಳೂ ಗೆಲುವು ಸಾಧಿಸಲಿದ್ದಾರೆ ಎಂದು ಹೇಳುತ್ತಲೇ ಬಂದಿತ್ತು.
ಜೆಡಿಎಸ್‌ಗೆ ಶಾಕ್
ಸದ್ಯ ಜೆಡಿಎಸ್‌ಗೆ ಶಾಕ್ ಎದುರಾಗಿದೆ. ನಿರೀಕ್ಷಿತ ಮತ ಸಿಗದೆ ದೊಡ್ಡ ಹೊಡೆತ ತಿಂದಿದೆ. ಅಡ್ಡ ಮತದಾನದ ಭೀತಿಯಲ್ಲಿ ಜೆಡಿಎಸ್ ಶಾಸಕರನ್ನು ಬುಧವಾರ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿತ್ತು. ದೇವನಹಳ್ಳಿಯ ಖಾಸಗಿ ರೆಸಾರ್ಟ್‌ನಲ್ಲಿ 18 ಶಾಸಕರು ತಂಗಿದ್ದರು. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತ ಗಳಿಸಿದ್ದು, ಪಕ್ಷಕ್ಕೆ ಭಾರಿ ಆಘಾತ ತಂದಿತ್ತಿದೆ. ಇನ್ನು ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರಿಗೆ 32 ಮತ ಲಭಿಸಿದೆ. ಬಿಜೆಪಿ-ಜೆಡಿಎಸ್‌ನ 11 ಶಾಸಕರು ಅಡ್ಡ ಮತದಾನ ಹಾಕಿರುವ ಮಾಹಿತಿ ಹೊರ ಬಂದಿದೆ. ಸದ್ಯ ಮತ ಕೊರತೆಯಾಗಿದ್ದು ಎಲ್ಲಿ ಎನ್ನುವುದನ್ನು ಪತ್ತೆ ಹಚ್ಚಲು ಪಕ್ಷದ ನಾಯಕರು ಮುಂದಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.