ವಿಧಾನ ಪರಿಷತ್ ಚುನಾವಣೆ; ಬಸನಗೌಡ ಪಾಟೀಲ್ ಯತ್ನಾಳ್ ಮತ ಅಸಿಂಧುವಾಗುತ್ತ? ಕಾಂಗ್ರೆಸ್ ವಾದವೇನು?
Basanagouda Patil Yatnal: ರಾಜ್ಯದ ಕುತೂಹಲ ಕೆರಳಿಸಿದ ವಿಧಾನ ಪರಿಷತ್ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಶೇಕಡಾ 100ರಷ್ಟು ಹಕ್ಕು ಚಲಾವಣೆಗೊಂಡಿದೆ. ಈ ಮಧ್ಯೆ ಮತ ಚಲಾಯಿಸಲು ಬಂದ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ. 18: ರಾಜ್ಯದ ಕುತೂಹಲ ಕೆರಳಿಸಿದ ವಿಧಾನ ಪರಿಷತ್ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಶೇಕಡಾ 100ರಷ್ಟು ಹಕ್ಕು ಚಲಾವಣೆಗೊಂಡಿದೆ. ಎಲ್ಲ 222 ಶಾಸಕರು ಮತ ಚಲಾಯಿಸಿದ್ದು, ಕೆಲವೇ ಹೊತ್ತಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಬಿಜೆಪಿ ಉಚ್ಚಾಟಿತ, ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ ಚಲಾಯಿಸಿದ ಸಂದರ್ಭ ಹೈಡ್ರಾಮವೊಂದು ನಡೆಯಿತು. ಯತ್ನಾಳ್ ಬಿಜೆಪಿ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಅವರನ್ನು ಬೆಂಬಲಿಸುವುದಾಗಿ ಮತ್ತು ಅವರಿಗೆ ಮತ ಹಾಕುವುದಾಗಿ ಬುಧವಾರ ಘೋಷಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಬಹಿರಂಗ ಪತ್ರ ಬರೆದಿದ್ದರಿಂದ ಅವರು ಮತ ಹಾಕಲು ಬಂದಾಗ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು.
ಮತಗಟ್ಟೆ ಕಾಂಗ್ರೆಸ್ ಏಜೆಂಟ್ ವಿ.ಎಸ್. ಉಗ್ರಪ್ಪ ವಿರೋಧ ವ್ಯಕ್ತಪಡಿಸಿ, ʼʼಯತ್ನಾಳ್ ಅವರಿಗೆ ಮತದಾನ ಮಾಡಲು ಅವಕಾಶ ನೀಡಬಾರದುʼʼ ಎಂದು ಹೇಳಿದರು. ಅಧಿಕಾರಿಗಳು ಕೂಡ ತಡೆಯಲು ಮುಂದಾದರೂ ಯತ್ನಾಳ್ ಮತಪತ್ರವನ್ನು ಪೆಟ್ಟಿಗೆಗೆ ಹಾಕಿದರು. ಅಂತಿಮವಾಗಿ ಉಗ್ರಪ್ಪ ಅವರ ಆಕ್ಷೇಪವನ್ನು ತಿರಸ್ಕರಿಸಿ ಯತ್ನಾಳ್ ಅವರಿಗೆ ಮತ ಹಾಕಲು ಚುನಾವಣಾಧಿಕಾರಿ ಅವಕಾಶ ನೀಡಿದರು.
ವಿಡಿಯೊ ಇಲ್ಲಿದೆ:
ಯತ್ನಾಳ್ ಹೇಳಿದ್ದೇನು?
ಬುಧವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರಿಗೆ ಬಹಿರಂಗ ಪತ್ರ ಬರೆದ ಯತ್ನಾಳ್ ವಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ತಿಳಿಸಿದ್ದರು. ಇನ್ನು ಗುರುವಾರ ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ನಾಯಕರು ಮತ ಚಲಾಯಿಸಲು ಹೇಳಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು," ವಿಪಕ್ಷ ನಾಯಕ ಆರ್. ಅಶೋಕ್ ಕರೆ ಮಾಡಿದ್ದರು. ಅದಕ್ಕೂ ಮುನ್ನಾ ಮಾಜಿ ಸಚಿವ ಡಾ. ಅಶ್ವತ್ಥ ನಾರಾಯಣ್ ಕೂಡ ದೂರವಾಣಿ ಮೂಲಕ ಸಂಪರ್ಕಿಸಿದ್ದರು. 'ನೀವು ಬಿಜೆಪಿಯಿಂದ ಆಯ್ಕೆಯಾಗಿದ್ದೀರಿ, ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬೇಕು' ಎಂದು ಅವರು ತಿಳಿಸಿದ್ದರು. ಅದಕ್ಕೆ ನಾನು, 'ನಾನು ಇದೇ ಪಕ್ಷದಿಂದ ಗೆದ್ದು ಬಂದಿದ್ದೇನೆ. ಪಕ್ಷದ ಚಿಹ್ನೆಯಡಿ ಯಾರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದಾರೋ ಅವರಿಗೆ ಮತ ಹಾಕಲು ನಾನು ಸಿದ್ಧನಿದ್ದೇನೆ' ಎಂದು ಹೇಳಿದ್ದೆ. ಅದರಂತೆಯೇ ನಾನು ನಡೆದುಕೊಂಡು, ಪಕ್ಷದ ಸೂಚನೆಯಂತೆ ಮತ ಚಲಾಯಿಸಿದ್ದೇನೆ" ಎಂದು ಹೇಳಿದರು.
ಈಶ್ವರಪ್ಪ, ಯತ್ನಾಳ್, ಹೆಬ್ಬಾರ್, ಎಸ್‌ಟಿಎಸ್ ಮರಳಿ ಬಿಜೆಪಿಗೆ ?
ಬಿಜೆಪಿಗೆ ಮತ ಚಲಾಯಿಸಿದ್ದು ಏಕೆ?
ʼʼನಾನು ಬಿಜೆಪಿಯಿಂದ ಆಯ್ಕೆಯಾದ ಶಾಸಕ. ಪಕ್ಷದ ಹೈಕಮಾಂಡ್ ಸೂಚನೆಯನ್ನು ಪಾಲಿಸುವುದು ನನ್ನ ಕರ್ತವ್ಯ. ಆದ್ದರಿಂದ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದೇನೆ. ಇದರಲ್ಲಿ ಯಾವುದೇ ಗೊಂದಲ ಅಥವಾ ಬೇರೆ ಉದ್ದೇಶ ಇಲ್ಲ. ನನ್ನ ಮೇಲೆ ಏನೇನೋ ಆರೋಪಗಳು ಹಾಗೂ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ನಾನು ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿ ಬಂದ ಶಾಸಕ. ಒಂದು ಕುಟುಂಬದ ಹಿತಾಸಕ್ತಿಗಾಗಿ ಬಿಜೆಪಿಗೆ ಮೋಸ ಮಾಡಬಾರದು ಎಂಬುದು ನನ್ನ ನಿಲುವು" ಎಂದು ಶಾಸಕ ಬಸನಗೌಡ ಪಾಟೀಲ ಸ್ಪಷ್ಟಪಡಿಸಿದರು.
ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಮತ್ತೆ ಪಕ್ಷಕ್ಕೆ ಮರಳುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ʼನಾನು ಕಂಬ್ಯಾಕ್‌ಗಾಗಿ ಮತ ಹಾಕಿಲ್ಲ. ನನ್ನ ರಾಜಕೀಯ ನಿರ್ಧಾರಗಳು ಗಟ್ಟಿಯಾಗಿವೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕುಟುಂಬ ರಾಜಕಾರಣ ಅಂತ್ಯಗೊಳ್ಳುವವರೆಗೂ ನನ್ನ ನಿರ್ಧಾರವನ್ನು ಬದಲಾಯಿಸುವುದಿಲ್ಲʼ’ ಎಂದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.