ಕಲಬುರಗಿ: ಜಮೀನಿನ ಮ್ಯೂಟೇಷನ್ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮಧ್ಯವರ್ತಿಯೊಬ್ಬನನ್ನು ಲೋಕಾಯುಕ್ತ(Lokayukta) ಅಧಿಕಾರಿಗಳು ಗುರುವಾರ ನಗರದ ಕಂದಾಯ ಇಲಾಖೆ ಕಚೇರಿಯಲ್ಲಿ ಬಂಧಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಕಂದಾಯ ಇಲಾಖೆ ಕಚೇರಿಯಲ್ಲಿ ಈ ಕಾರ್ಯಾ ಚರಣೆ ನಡೆದಿದೆ. ದೂರುದಾರ ಸತೀಶ್ ಎಂಬುವರಿಂದ ₹10 ಸಾವಿರ ಲಂಚದ ಹಣ ಪಡೆಯುತ್ತಿದ್ದ ಸಾಗರ್ ಎಂಬಾತ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಜಮೀನಿನ ಮ್ಯೂಟೇಷನ್ ಮಾಡಿಕೊಡಲು ವಿಲೇಜ್ ಅಕೌಂಟೆಂಟ್ ರಮೇಶ್ ಅವರು ₹10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಅಧಿಕಾರಿಯ ಸೂಚನೆಯಂತೆ ಸಾಗರ್ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ವಿಲೇಜ್ ಅಕೌಂಟೆಂಟ್ ಪಾತ್ರ ಸೇರಿದಂತೆ ವಿವಿಧ ಅಂಶಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.