ಕಲಬುರಗಿ: ಜೇವರ್ಗಿ ತಾಲೂಕಿನ ಮಾರಡಗಿ ಎಸ್.ಎ. ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 25 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದು ಮಂಗಳವಾರ ನಡೆದಿದೆ. ಮಧ್ಯಾಹ್ನದ ಊಟದ ವಾಂತಿ, ಭೇದಿ ಮೊದಲಾದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಗ್ರಾಮಸ್ಥರು, ಪೋಷಕರಲ್ಲಿ ಆತಂಕ ಮೂಡಿದೆ.
ಅಹಿತಕರ ಪರಿಸ್ಥಿತಿಯನ್ನು ಗಮನಿಸಿದ ಶಿಕ್ಷಕರು ಹಾಗೂ ಸ್ಥಳೀಯರು ಮಕ್ಕಳನ್ನು ತಕ್ಷಣವೇ ಗಂವಾರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ನಿಗಾ ಹಾಗೂ ಚಿಕಿತ್ಸೆಗಾಗಿ ಜೇವರ್ಗಿ ತಾಲೂಕು ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಶರ್ಮ, ತಹಸೀಲ್ದಾರ್ ಮಲ್ಲಣ್ಣ ಯಲಗೋಡ್, ಪಿಎಸ್‌ಐ ಗಜಾನನ ಬಿರಾದಾರ್, ಜೆಡಿಎಸ್ ಮುಖಂಡ ಬಸವರಾಜ ಪಾಟೀಲ್ ನರಿಬೋಳ ಹಾಗೂ ಕಾಂಗ್ರೆಸ್ ನಾಯಕ ರಾಜಶೇಖರ್ ಸೀರಿ ಮತ್ತಿತರರು ಆಸ್ಪತ್ರೆ ಭೇಟಿ ನೀಡಿ, ಮಕ್ಕಳು, ಪೋಷಕರಿಗೆ ಧೈರ್ಯ ತುಂಬಿದ್ದಾರೆ.
ಈ ನಡುವೆ, ಆಹಾರದಲ್ಲಿ ವಿಷದ ಅಂಶ ಇದ್ದಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಆಹಾರ ಮಾದರಿ ಪರೀಕ್ಷೆಗೆ ಕಳಿಸಲಾಗಿದ್ದು, ಲೋಪದೋಷ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Drowned: ಕಡಲಿನಲ್ಲಿ ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು
ಪೋಷಕರ ಬೇಸರ
ಈ ಘಟನೆ ಹಿನ್ನೆಲೆಯಲ್ಲಿ ಶಾಲಾ ಬಿಸಿಯೂಟದ ಗುಣಮಟ್ಟದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಆಹಾರ ತಯಾರಿ ವೇಳೆ ಸ್ವಚ್ಛತೆ, ಆಹಾರ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಮಕ್ಕಳ ಜೀವದೊಂದಿಗೆ ಆಟವಾಡಬಾರದು ಎಂದು ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಕಿಡಿಕಾರಿದ್ದಾರೆ.