ಕಲಬುರಗಿ, ಸೆ.3: ಕರ್ನಾಟಕದಲ್ಲಿ ಬೀದಿ ನಾಯಿಗಳ ಕಾಟ ಮಿತಿ ಮೀರಿದೆ. ಮನೆ ಬಳಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳ ದಾಳಿಗೊಳಗಾಗಿ (Stray Dogs attacks) ನಾಲ್ಕು ವರ್ಷದ ಬಾಲಕಿಯೊಬ್ಬಳು ಗಂಭೀರ ಗಾಯಗೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ ತಾಲೂಕಿನ ಮೀನಹಬಲ್ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಬಾಲಕಿಯನ್ನು ಸಾನ್ವಿ ಎಂದು ಗುರುತಿಸಲಾಗಿದೆ. ಬಾಲಕಿಯ ಮುಖದಲ್ಲಿ ಆಳವಾದ ಗಾಯಗಳಾಗಿವೆ. ತುಟಿ ಮತ್ತು ಕೆನ್ನೆಗೆ ಗಂಭೀರ ಗಾಯಗಳಾಗಿವೆ.
ಶ್ವಾನಗಳ ದಾಳಿಯಿಂದ ಗಾಯಗೊಂಡ ಬಾಲಕಿಯನ್ನು ಸೇಡಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗಿದ್ದು, ಗಾಯಗಳಿಗೆ ಹೊಲಿಗೆ ಹಾಕಲಾಯಿತು. ಈ ಘಟನೆಯು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ನಿವಾಸಿಗಳಲ್ಲಿ ಕಳವಳವನ್ನು ಹೆಚ್ಚಿಸಿದೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಇದೇ ರೀತಿಯ ದಾಳಿಗಳನ್ನು ತಡೆಯಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಇದೇ ರೀತಿಯ ಬೀದಿ ನಾಯಿ ದಾಳಿ ನಡೆದಿರುವ ಘಟನೆ ಬಗ್ಗೆ ವರದಿಯಾಗಿದ್ದು, ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಕ್ರೂರವಾಗಿ ದಾಳಿಗೊಳಗಾಗಿದ್ದ.
ಬೀದಿ ನಾಯಿ ಕಡಿತದಿಂದ ಸಾವಾದರೆ, ಗಾಯವಾದರೆ ಭಾರಿ ದಂಡ: ಸುಪ್ರೀಂ ಕೋರ್ಟ್ ಎಚ್ಚರಿಕೆ
ರಾಯಚೂರು ನಗರದ ಮಲಿಯಾಬಾದ್‌ನಲ್ಲಿರುವ ತನ್ನ ಮನೆಯ ಬಳಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ಗೋಪಾಲ್ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು. ಮಗುವಿನ ಮೇಲೆ ಎರಗಿದ್ದ ಶ್ವಾನ, ಅವನನ್ನು ಎಳೆದುಕೊಂಡು ಹೋಗಿ ತಲೆಗೆ ಪದೇ ಪದೇ ಕಚ್ಚಿತ್ತು. ಇದರಿಂದ ತೀವ್ರ ಗಾಯಗಳಾಗಿತ್ತು. ಬಾಲಕನ ತಲೆಯ ಹೆಚ್ಚಿನ ಭಾಗವು ಸೀಳಲ್ಪಟ್ಟಿತ್ತು. ಅವನ ಮುಖ ರಕ್ತದಿಂದ ಕೂಡಿತ್ತು. ಈ ದೃಶ್ಯ ಕಂಡು ಸ್ಥಳೀಯರು ಭೀತಿಗೊಳಗಾಗಿದ್ದರು.
ವಿಜಯಪುರದಲ್ಲಿ 3 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಮಾಡಿದ್ದ ಬೀದಿ ನಾಯಿ
ವಿಜಯಪುರದಲ್ಲಿ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದ ಘಟನೆಯ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಕ್ಯಾಮರಾದ ದೃಶ್ಯದಲ್ಲಿ ಮೂವರು ಬಾಲಕರು ಬೀದಿಯಲ್ಲಿ ಆಡುತ್ತಿರುವಾಗ 2 ಬೀದಿ ನಾಯಿಗಳು ಹಿಂಬಾಲಿಸಿದೆ. ಕೂಡಲೇ ಇಬ್ಬರು ಬಾಲಕರು ಓಡಿ ತಪ್ಪಿಸಿಕೊಂಡಿದ್ದರೆ, ಮತ್ತೊಬ್ಬ ಬಾಲಕ 3 ವರ್ಷದ ವಿರಾಜ್ ಸಂತೋಷ್ ಬಿರಾದರ್ ತಪ್ಪಿಸಿಕೊಳ್ಳಲು ಸಾಧ್ಯಲಾಗಲಿಲ್ಲ.
ಕೆಳಗೆ ಬಿದ್ದ ವಿರಾಜ್‌ನಲ್ಲಿ ಕಚ್ಚಿದ್ದ ನಾಯಿ ರಸ್ತೆಯಲ್ಲೇ ಎಳೆದಾಡಿ ಆಚೆಗೆ ಕೊಂಡೊಯ್ದಿದೆ. ಕೂಡಲೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು, ಬೈಕ್ ಸವಾರರು, ಸ್ಥಳದಲ್ಲೇ ಇದ್ದ ಕೆಲವರು ಬಾಲಕನ ನೆರವಿಗೆ ಧಾವಿಸಿ ನಾಯಿಯನ್ನು ಹಿಂಬಾಲಿಸಿದ್ದರು. ವಿಜಯಪುರ ನಗರದ ರಾಜಕುಮಾರ ಲೇಔಟ್‌ನಲ್ಲಿ ಈ ಭೀಕರ ಘಟನೆ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.