ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಡಿಲು ತುಂಬಿದ ಮಮತೆ, 31 ಮಕ್ಕಳಿಗೆ ಹೊಸ ಬದುಕು

ದತ್ತು ಪ್ರಕ್ರಿಯೆ ಕೇವಲ ಕಾನೂನುಬದ್ಧ ಕ್ರಮವಲ್ಲ; ಅದು ಒಂದು ಮಗುವಿನ ಬದುಕನ್ನು ಮರು ರೂಪಿಸುವ ಸಾಮಾಜಿಕ ಜವಾಬ್ದಾರಿ. ಇದೇ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಕಾರಾ (CARA) ಮಾರ್ಗಸೂಚಿಯಡಿ ಜಿಲ್ಲೆಯ ಅಮೂಲ್ಯ ಶಿಶು ಗೃಹ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಪುನರ್ವಸತಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ.

ದೇವೇಂದ್ರ ಜಾಡಿ

ದತ್ತು ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತದ ಮುತುವರ್ಜಿ

ಅಮೂಲ್ಯ ಶಿಶು ಗೃಹ–ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ಕೆ ಮೆಚ್ಚುಗೆ

ಕಲಬುರಗಿ: ಜನ್ಮ ನೀಡಿದವರು ದೂರವಾದರೂ ಬದುಕು ಕೈಬಿಡುವುದಿಲ್ಲ. ಮಮತೆಯ ಮಡಿಲಿ ಗಾಗಿ ಕಾಯುತ್ತಿದ್ದ ಪುಟ್ಟ ಕಣ್ಣುಗಳಿಗೆ ಹೊಸ ಕನಸು, ಹೊಸ ಕುಟುಂಬ ಮತ್ತು ಹೊಸ ಭವಿಷ್ಯ ಕಟ್ಟಿಕೊಡುವ ಕೆಲಸ ನಿಶ್ಯಬ್ದವಾಗಿ ನಡೆಯುತ್ತಿದೆ. ಅನಾಥ, ತ್ಯಜಿತ ಹಾಗೂ ಸಂಕಷ್ಟದಲ್ಲಿರುವ ಮಕ್ಕಳಿಗೆ ಬದುಕಿನ ಹೊಸ ದಾರಿ ತೋರಿಸುವ ದತ್ತು ಪ್ರಕ್ರಿಯೆಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ಅಮೂಲ್ಯ ಶಿಶು ಗೃಹದ ಮೂಲಕ 31 ಮಕ್ಕಳು ಹೊಸ ಕುಟುಂಬಗಳ ಮಡಿಲು ಸೇರಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಡಿಸಿಪಿಯು) ಹಾಗೂ ಜಿಲ್ಲಾಡಳಿತದ ಸಮನ್ವಯದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ದತ್ತು ಪ್ರಕ್ರಿಯೆ ಕೇವಲ ಕಾನೂನುಬದ್ಧ ಕ್ರಮವಲ್ಲ; ಅದು ಒಂದು ಮಗುವಿನ ಬದುಕನ್ನು ಮರುರೂಪಿಸುವ ಸಾಮಾಜಿಕ ಜವಾಬ್ದಾರಿ. ಇದೇ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಕಾರಾ (CARA) ಮಾರ್ಗಸೂಚಿಯಡಿ ಜಿಲ್ಲೆಯ ಅಮೂಲ್ಯ ಶಿಶು ಗೃಹ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಪುನರ್ವಸತಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ. ಮಕ್ಕಳ ಕಲ್ಯಾಣ ಸಮಿತಿ, ನ್ಯಾಯಾಂಗ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರತಿಯೊಂದು ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 6 ಮಕ್ಕಳು, 2024-25ರಲ್ಲಿ 10 ಮಕ್ಕಳು ಹಾಗೂ 2025-26ರಲ್ಲಿ 15 ಮಕ್ಕಳು ದತ್ತು ಹೋಗಿದ್ದಾರೆ. ಒಟ್ಟು 31 ಮಕ್ಕಳಿಗೆ ಕುಟುಂಬದ ಮಮತೆ ದೊರೆತಿದೆ. ಈ ಪೈಕಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿರುವುದು ಸಮಾಜದಲ್ಲಿ ಹೆಣ್ಣು ಮಕ್ಕಳ ದತ್ತು ಸ್ವೀಕಾರದ ಬಗ್ಗೆ ಸಕಾರಾತ್ಮಕ ಮನೋಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.

ದತ್ತು ಪ್ರಕ್ರಿಯೆಗೆ ಮುನ್ನ ಮಗುವಿನ ಕಾನೂನು ಸ್ಥಿತಿ ನಿರ್ಧಾರ, ವೈದ್ಯಕೀಯ ಪರೀಕ್ಷೆ, ಮಕ್ಕಳ ಕಲ್ಯಾಣ ಸಮಿತಿಯ ಅನುಮೋದನೆ, ದತ್ತು ಪಡೆಯುವ ಪೋಷಕರ ಹಿನ್ನೆಲೆ ಪರಿಶೀಲನೆ, ಹೋಮ್ ಸ್ಟಡಿ ವರದಿ ಸೇರಿದಂತೆ ಹಲವು ಹಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ದತ್ತು ಪಡೆದ ನಂತರವೂ ಮಗುವಿನ ಆರೋಗ್ಯ, ಶಿಕ್ಷಣ, ಸುರಕ್ಷತೆ ಹಾಗೂ ಕುಟುಂಬದೊಂದಿಗೆ ಹೊಂದಾಣಿಕೆ ಕುರಿತು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಾರೆ.

Kalaburagi DC

ದತ್ತು ಎನ್ನುವುದು ಮಗುವಿಗೆ ಕೇವಲ ಹೊಸ ಕುಟುಂಬ ನೀಡುವುದಲ್ಲ, ಬದುಕಿಗೆ ಹೊಸ ದಿಕ್ಕು ನೀಡುವ ಮಾನವೀಯ ಕಾರ್ಯ. ಜಿಲ್ಲಾಡಳಿತ, ಮಕ್ಕಳ ರಕ್ಷಣಾ ಘಟಕ ಹಾಗೂ ಅಮೂಲ್ಯ ಶಿಶು ಗೃಹದ ಸಮನ್ವಯದ ಪ್ರಯತ್ನಗಳಿಂದ ಅನೇಕ ಕಂದಮ್ಮಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದ್ದು, ಸಮಾಜಕ್ಕೆ ಮಾದರಿಯಾಗಿದೆ.

ಹೊರ ರಾಜ್ಯಗಳಿಂದಲೂ ಕಲಬುರಗಿಯ ಮಕ್ಕಳಿಗೆ ಬೇಡಿಕೆ

ಕಲಬುರಗಿಯ ಅಮೂಲ್ಯ ಶಿಶು ಗೃಹದಲ್ಲಿ ದಾಖಲಾಗಿರುವ ಮಕ್ಕಳನ್ನು ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕುಟುಂಬ ಗಳೂ ದತ್ತು ಪಡೆಯುತ್ತಿವೆ. ಕಾರಾ ವ್ಯವಸ್ಥೆಯಡಿ ನಡೆಯುವ ಪಾರದರ್ಶಕ ಪ್ರಕ್ರಿಯೆ ಹಾಗೂ ಮಕ್ಕಳ ಆರೈಕೆಯ ಗುಣಮಟ್ಟದಿಂದಾಗಿ ಜಿಲ್ಲೆಯ ದತ್ತು ಸೇವೆಯ ಮೇಲೆ ವಿಶ್ವಾಸ ಹೆಚ್ಚಾಗಿದೆ.

27

ದತ್ತು ಪಡೆಯಲು ಕಡ್ಡಾಯವಾಗಿ ಕಾರಾ ನೋಂದಣಿ

ದತ್ತು ಪಡೆಯಲು ಆಸಕ್ತರು ಕೇಂದ್ರ ಸರ್ಕಾರದ ಕಾರಾ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. ದಾಖಲೆ ಪರಿಶೀಲನೆ, ಹೋಮ್ ಸ್ಟಡಿ ವರದಿ, ಮಕ್ಕಳ ಹೊಂದಾಣಿಕೆ, ನ್ಯಾಯಾಲಯದ ಆದೇಶ ಹಾಗೂ ಅಧಿಕೃತ ಹಸ್ತಾಂತರದ ಬಳಿಕ ದತ್ತು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಯಾವುದೇ ಮಧ್ಯವರ್ತಿಗಳ ಮೂಲಕವಲ್ಲದೆ ಕಾನೂನುಬದ್ಧ ಮಾರ್ಗದ ಮೂಲಕವೇ ದತ್ತು ಪಡೆಯುವಂತೆ ಅಧಿಕಾರಿ ಗಳು ಸಲಹೆ ನೀಡಿದ್ದಾರೆ.

image

ಯಾವೊಬ್ಬ ಮಗು ಅನಾಥ ಎನ್ನುವ ಭಾವನೆ ಬಾರದಂತೆ ಜಿಲ್ಲಾಡಳಿತ ಮುತುವರ್ಜಿ ವಹಿಸುತ್ತದೆ. ಗುಣಮಟ್ಟದ ಆರೈಕೆಯಿಂದ ಮಕ್ಕಳನ್ನು ಪಾಲನೆ ಮಾಡಲಾಗುತ್ತದೆ. ಪ್ರತಿ ಮಗುವಿಗೂ ಕುಟುಂಬದ ಮಮತೆ ಮತ್ತು ಸುರಕ್ಷಿತ ಭವಿಷ್ಯ ದೊರೆಯಬೇಕು ಎಂಬುದು ಸರಕಾರದ ಆಶಯ. ದತ್ತು ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಮಕ್ಕಳ ಹಕ್ಕುಗಳಿಗೆ ಆದ್ಯತೆ ನೀಡಲಾಗುತ್ತಿದೆ.

– ಇಕ್ರಮ್ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ
image

ಯಾರಾದರೂ ಮಕ್ಕಳನ್ನು ದತ್ತು ಪಡೆಯಬೇಕು ಎಂದಾದರೆ, ಕಾನೂನು ಬದ್ಧವಾಗಿ ದತ್ತು ತೆಗೆದುಕೊಳ್ಳಿ, ಅನೈತಿಕವಾಗಿ ಅಡಾಪ್ಟೇಷನ್ ಗೆ ಮುಂದಾದರೆ, ಕಠಿಣ ಕಾನೂನು ಶಿಕ್ಷೆಗೆ ಒಳಗಾಗಬೇಕಾಗುತ್ತೆ. ಮಕ್ಕಳ ಸುರಕ್ಷತೆ ಮತ್ತು ಭವಿಷ್ಯ ಗಮನದಲ್ಲಿಟ್ಟುಕೊಂಡು ಎಲ್ಲ ಪ್ರಕ್ರಿಯೆ ಕಾನೂನುಬದ್ಧವಾಗಿ ಪೂರ್ಣಗೊಳಿಸಲಾಗುತ್ತದೆ. ಆಸಕ್ತರು ಕಾರಾ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು.

- ಮಂಜುಳಾ ಪಾಟೀಲ್, ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ