ಕಲಬುರಗಿ: ಭಾರತ ಮತ್ತು ಪಾಕ್ ನಡುವೆ ಯುದ್ಧದ (Operation Sindoor) ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ರಜೆಯಲ್ಲಿದ್ದ ಸೈನಿಕರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಭಾರತೀಯ ಸೇನೆ ಬುಲಾವ್ ನೀಡಿದೆ. ಹೀಗಾಗಿ ವಿವಿಧ ಕಾರಣಗಳಿಗಾಗಿ ರಜೆ ಪಡೆದಿದ್ದ ಯೋಧರು ದೇಶ ರಕ್ಷಣೆಯ ಸೇವೆಗೆ ಮರಳುತ್ತಿದ್ದಾರೆ. ಈ ನಡುವೆ ಹೆಂಡತಿ ಹೆರಿಗೆ ಹಿನ್ನೆಲೆ ಊರಿಗೆ ಬಂದಿದ್ದ ಕಲಬುರಗಿ ಮೂಲದ ಸಿಆರ್‌ಪಿಎಫ್ ಯೋಧ ಹಣಮಂತರಾಯ್ ಔಸೆ ಅವರು, 7 ದಿನದ ಮಗು ಹಾಗೂ ಬಾಣಂತಿ ಪತ್ನಿಯನ್ನು ಬಿಟ್ಟು ವಾಪಸ್ ಸೇವೆಗೆ ತೆರಳಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಅವರು ಕಳೆದ 20 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಜಮ್ಮುವಿನ ಶ್ರೀನಗರದಲ್ಲಿ ನಿಯೋಜಿತರಾಗಿದ್ದಾರೆ. ಏಪ್ರಿಲ್ 25ರಂದು ರಜೆ ಪಡೆದು ತಮ್ಮ ತವರಿಗೆ ಬಂದಿದ್ದ ಅವರು, ಹೆಂಡತಿ ಹಾಗೂ ಹೊಸತಾಗಿ ಜನಿಸಿದ ಮಗುವಿನೊಂದಿಗೆ ಕೆಲವು ದಿನಗಳನ್ನು ಕಳೆಯುವ ನಿರೀಕ್ಷೆಯಲ್ಲಿ ಇದ್ದರು.

ವಾರದ ಹಿಂದಷ್ಟೇ ಹಣಮಂತರಾಯ್ ಅವರ ಪತ್ನಿಗೆ ಗಂಡು ಮಗು ಜನನವಾಗಿತ್ತು. ರಜೆ ಅವಧಿಯಲ್ಲಿ ಕೇವಲ 15 ದಿನ ಕಳೆದಿತ್ತು. ಭಾರತೀಯ ಸೇನೆ ತುರ್ತು ಸೇವೆಗೆ ಆಗಮಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದೇಶ ಸೇವೆಗೆ ಯೋಧ ಮರಳುತ್ತಿದ್ದಾರೆ. ನನಗೆ ಮಗು, ಮನೆ, ಕುಟುಂಬಕ್ಕಿಂತ ದೇಶ ಮುಖ್ಯ. ನಾನು ಸೇನೆಗೆ ಸೇರುವ ಮುನ್ನ ನನಗೆ ಇದೇ ವೇದವಾಕ್ಯ. ಹಾಗಾಗಿ ದೇಶ ಸೇವೆಗಾಗಿ ತೆರಳುತ್ತಿದ್ದೇನೆ ಎಂದು ಯೋಧ ಹಣಮಂತರಾಯ್ ಹೇಳಿದ್ದಾರೆ. ಇವರ ಪತ್ನಿ ಸ್ನೇಹಾ ಕೂಡ ನನ್ನ ಗಂಡ ನಮಗೆ ಈ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಿರುವ ಬಗ್ಗೆ ಬೇಜಾರಿಲ್ಲ. ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Operation Sindoor : ʼಕಾಶ್ಮೀರದಲ್ಲಿ ನನ್ನ ತಂದೆಯನ್ನು ಭಯೋತ್ಪಾದಕರು ಹತ್ಯೆ ಮಾಡಿದರುʼ; ಭಾವುಕ ಕ್ಷಣಗಳು ಹಂಚಿಕೊಂಡ ನಟಿ
ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ, ದೇಶ ಸೇವೆಯನ್ನು ಆದ್ಯತೆಯನ್ನಾಗಿ ಮಾಡಿಕೊಂಡ ಯೋಧ ಹಣಮಂತರಾಯ್ ಅವರು ತಕ್ಷಣವೇ ಕರ್ತವ್ಯಕ್ಕೆ ತೆರಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೈದರಾಬಾದ್ ಮೂಲಕ ಜಮ್ಮುವಿಗೆ ತೆರಳುತ್ತಿರುವ ಯೋಧನನ್ನು ಕಲಬುರಗಿ ರೈಲು ನಿಲ್ದಾಣದಲ್ಲಿ ಕುಟುಂಬಸ್ಥರು ಕಣ್ತುಂಬಾ ನೋಡುತ್ತಾ ಬೀಳ್ಕೊಟ್ಟಿದ್ದಾರೆ.
ಹಣಮಂತರಾಯ್ ಔಸೆ ಅವರು ವಾರದ ಹಿಂದಷ್ಟೇ ಜನಿಸಿದ ಮಗು ಹಾಗೂ ಇನ್ನಿಬ್ಬರು ಮಕ್ಕಳಿಗೆ ಸಿಹಿ ಮುತ್ತು ಕೊಟ್ಟು ಜಮ್ಮುವಿಗೆ ತೆರಳಿದ್ದಾರೆ. ಬಾಣಂತಿ ಪತ್ನಿ ಸ್ನೇಹಾ ಅವರು ಪತಿಗೆ ಭಾರವಾದ ಮನಸ್ಸಿನೊಂದಿಗೆ ನಗುತ್ತಲೇ ಕಳುಹಿಸಿಕೊಟ್ಟಿದ್ದಾರೆ. ಕಾಶ್ಮೀರಕ್ಕೆ ತೆರಳಿದ ಯೋಧನಿಗೆ ಸ್ನೇಹಿತರ ಬಳಗ ಸತ್ಕರಿಸಿ ಶುಭ ಹಾರೈಸಿ ಕಳುಹಿಸಿಕೊಟ್ಟಿದೆ.
‘ಕುಟುಂಬಕ್ಕಿಂತ ದೇಶ ಸೇವೆ ಮುಖ್ಯ’ ಎಂಬ ಧೋರಣೆಯೊಂದಿಗೆ ಯೋಧ ಮತ್ತೆ ಕರ್ತವ್ಯಕ್ಕೆ ಮರಳುತ್ತಿರುವುದು ಎಲ್ಲರಿಗೂ ಮಾದರಿ ಎನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಯೋಧನ ಧೈರ್ಯ ಮತ್ತು ಬದ್ಧತೆಯು ಪ್ರಶಂಸೆ ಪಡೆಯುತ್ತಿದೆ.
ದಿಲ್ಲಿ- ಬೆಂಗಳೂರು ರೈಲಿಗೆ ಬಾಂಬ್ ಬೆದರಿಕೆ, ಆರೋಪಿ ಸೆರೆ
ಬೆಂಗಳೂರು: ದೆಹಲಿಯಿಂದ (Delhi) ಬೆಂಗಳೂರಿಗೆ ಆಗಮಿಸುವ ಕೆಕೆ ಎಕ್ಸ್‌ಪ್ರೆಸ್ (Karnataka Express) ರೈಲಿನಲ್ಲಿ ಬಾಂಬ್ ಇಡಲಾಗಿದೆ (bomb threat) ಎಂದು ಕಿಡಿಗೇಡಿಯೊಬ್ಬ ಬೆದರಿಕೆ ಕರೆ ಮಾಡಿದ್ದಾನೆ. ಕೂಡಲೇ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಇದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿದೆ. ಹುಸಿ ಬಾಂಬ್ ಕರೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇವನ ಹೆಸರು ದೀಪಕ್ ಸಿಂಗ್ ಎಂದು ತಿಳಿದು ಬಂದಿದೆ.
ತಡರಾತ್ರಿ 1 ಗಂಟೆ ಸುಮಾರಿಗೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಾಡಿ ಪೊಲೀಸರು ರೈಲಿನಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ರಾತ್ರಿ 1:30ರವರೆಗೆ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಬಾಂಬ್ ಬೆದರಿಕೆ ಕರೆ ಹುಸಿ ಎಂಬುದು ದೃಢವಾಗಿದೆ. ತನಿಖೆ ನಡೆಸಿದ ಪೊಲೀಸರು ಕರೆಯ ಮೂಲ ಬೆಂಬತ್ತಿ ಆರೋಪಿ ದೀಪಕ್ ಸಿಂಗ್‌ನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಬಾಂಬ್‌ಗಾಗಿ ತೀವ್ರ ತಪಾಸಣೆ ಹಿನ್ನೆಲೆಯಲ್ಲಿ ರೈಲಿನ ವೇಳಾಪಟ್ಟಿ ಅಸ್ತವ್ಯಸ್ತವಾಗಿದೆ.