ಕಲಬುರಗಿ: ನಗರದ ಸರ್ಫರಾಜ್ ಬಜಾರ್ನ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಉಗ್ರ ಸಂಘಟನೆ(Terrorism Organization) ಲಷ್ಕರ್-ಇ-ತಯ್ಯಬಾ (ಎಲ್ಇಟಿ) ಜತೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಕೇಂದ್ರೀಯ ಗುಪ್ತಚರ ಸಂಸ್ಥೆ (ಐಬಿ) ಹಾಗೂ ಕಲಬುರಗಿ ನಗರ ಪೊಲೀಸರು(Kalaburagi Police) ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ಜುಲ್ ಮಲೀಕ್ ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಸಹೋದರನೊಂದಿಗೆ ಕಲಬುರಗಿಯಲ್ಲಿ ನೆಲೆಸಿದ್ದ ಆತ ಚಿನ್ನಾಭರಣ ತಯಾರಿಕೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಗುಪ್ತಚರ ಸಂಸ್ಥೆ(Intelligence Bureau) ಗೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಮಮ್ತಾಜ್ಜುಲ್ನ ಚಟುವಟಿಕೆಗಳ ಕುರಿತು ನಿಗಾ ಇರಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: Terrorism: ಟೆರರ್ ಡಾಕ್ಟರ್ ಅರೆಸ್ಟ್! ದೇಶಾದ್ಯಂತ ಭೀಕರ ದಾಳಿಗೆ ನಡೆಸಿದ ಸಂಚು ವಿಫಲ; 350 ಕೆಜಿ RDX ಸ್ಫೋಟಕ ಸೀಜ್
ಸಾಮಾಜಿಕ ಜಾಲತಾಣಗಳ ಮೂಲಕ ಲಷ್ಕರ್-ಇ-ತಯ್ಯಬಾ ಸಂಘಟನೆಗೆ ಸಂಬಂಧಿಸಿದ ಖಾತೆ ಗಳೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ ಸಂದೇಶಗಳ ಮೂಲಕ ಕೆಲವು ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿರುವ ಶಂಕೆ ತನಿಖಾಧಿಕಾರಿಗಳಿಗೆ ಮೂಡಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಐಬಿ ಅಧಿಕಾರಿಗಳು ಹಾಗೂ ನಗರ ಪೊಲೀಸರ ತಂಡ ಆತನ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ, ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆತನ ಮೊಬೈಲ್ ಫೋನ್ ಸೇರಿದಂತೆ ಕೆಲವು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸಂಪರ್ಕಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನಿಖೆ ಮುಂದುವರಿದಿದ್ದು, ಶಂಕಿತನಿಗೆ ಉಗ್ರ ಸಂಘಟನೆಯೊಂದಿಗೆ ನೇರ ಸಂಪರ್ಕವಿತ್ತೆ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಮಾತ್ರ ಸಂಪರ್ಕ ಹೊಂದಿದ್ದನೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಎರಡು ತಿಂಗಳಲ್ಲಿ ಎರಡನೇ ಪ್ರಕರಣ
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಉಗ್ರ ಸಂಘಟನೆಗಳ ಜತೆ ಸಂಪರ್ಕದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿ ವಶಕ್ಕೆ ಸಿಕ್ಕಿರುವುದು ಗಮನಾರ್ಹವಾಗಿದೆ. ಆಗಸ್ಟ್ನಲ್ಲಿ ನಗರದ ಹೊರವಲಯದ ಮಾಲಗತ್ತಿ ಸಮೀಪದ ಕಸಾಯಿ ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಎಂಬಾತನನ್ನು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
ಇದೀಗ ಸರ್ಫರಾಜ್ ಬಜಾರ್ನ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಗುಪ್ತಚರ ಮಾಹಿತಿ ಆಧರಿಸಿ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ನಡೆಯುತ್ತಿದೆ.