ಕಲಬುರಗಿ: ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಪ್ರಸಕ್ತ 2026-27ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ, ಅದರ ಮೀಸಲು ಪ್ರದೇಶದ ರೈತರ ಕಬ್ಬು ನುರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಆದೇಶ ಹೊರಡಿಸಿದ್ದಾರೆ.
ಸಿದ್ದಸಿರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳನ್ನು ಪ್ರಸಕ್ತ ಸಾಲಿಗೆ ಅನ್ವಯ ವಾಗುವಂತೆ ಮೂರು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಲಾಗಿದೆ. ಚಿಂಚೋಳಿ ತಾಲೂಕಿನ ಗ್ರಾಮಗಳನ್ನು ಆಳಂದ ತಾಲೂಕಿನ ಭೂಸನೂರಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ, ಕಾಳಗಿ ತಾಲೂಕಿನ ಗ್ರಾಮಗಳನ್ನು ಅಫಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆಗೆ ಹಾಗೂ ಚಿತ್ತಾಪುರ ಮತ್ತು ಸೇಡಂ ತಾಲೂಕಿನ ಗ್ರಾಮಗಳನ್ನು ಅಫಜಲಪುರ ತಾಲೂಕಿನ ಚಿಣಮಗೇರಾದ ಕೆಪಿಆರ್ ಸಕ್ಕರೆ ಕಾರ್ಖಾನೆಗೆ ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: Kalaburagi News: ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ: ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?
ಹಂಚಿಕೆ ಮಾಡಿರುವ ಗ್ರಾಮಗಳ ರೈತರು ಬೆಳೆದ ಕಬ್ಬನ್ನು ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಸಕಾಲದಲ್ಲಿ ಕಟಾವು ಮಾಡಿಕೊಂಡು ಕಾರ್ಖಾನೆಗೆ ಸಾಗಿಸಬೇಕು. ಅಲ್ಲದೆ, ನಿಗದಿಪಡಿಸಿದ ದರದಂತೆ ರೈತರಿಗೆ ಕಾಲಮಿತಿಯಲ್ಲಿ ಕಬ್ಬಿನ ಬಿಲ್ ಪಾವತಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಡಿಸೆಂಬರ್ ಮೊದಲ ವಾರದಿಂದ ಕಟಾವು: ಚಿಂಚೋಳಿ, ಕಾಳಗಿ, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ರೈತರು ಕಬ್ಬು ನುರಿಸುವ ಕುರಿತು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಕಬ್ಬು ಕಟಾವು ಮತ್ತು ಸಾಗಣೆಗಾಗಿ ಹಂಚಿಕೆ ಮಾಡಿರುವ ಸಕ್ಕರೆ ಕಾರ್ಖಾನೆಗಳು ಟೋಲಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿಂಚೋಳಿ ಹಾಗೂ ಕಾಳಗಿ ಭಾಗದ ರೈತರ ಕಬ್ಬು ಕಟಾವು ಆರಂಭಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರೈತರು ಯಾವುದೇ ಆತಂಕಕ್ಕೊಳಗಾಗದೆ ತಮಗೆ ಹಂಚಿಕೆ ಮಾಡಿರುವ ಸಕ್ಕರೆ ಕಾರ್ಖಾನೆಗಳ ಸಿಬ್ಬಂದಿಗೆ ಕಬ್ಬು ಕಟಾವು ಮಾಡಲು ಸಹಕರಿಸುವಂತೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಮನವಿ ಮಾಡಿದ್ದಾರೆ.