ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆ ಕಲಬುರಗಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಕೊಡುಗೆ; 105 ಕೋಟಿ ರುಪಾಯಿ ಮೊತ್ತದ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ

Priyank Kharge: ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಮಹತ್ವದ ನೀರಾವರಿ ಯೋಜನೆಗಳಿಗೆ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (ಸಂಗ್ರಹ ಚಿತ್ರ)

ಬೆಂಗಳೂರು, ಸೆ. 3: ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಮಹತ್ವದ ನೀರಾವರಿ ಯೋಜನೆಗಳಿಗೆ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ತಿಳಿಸಿದ್ದಾರೆ.

ಬೋರಿ ನದಿಯಿಂದ ನೀರನ್ನು ಎತ್ತಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ 12 ಕೆರೆಗಳಿಗೆ ತುಂಬಿಸುವ 56 ಕೋಟಿ ರೂಪಾಯಿ ಮೊತ್ತದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗೆ 2023-24ನೇ ಸಾಲಿನಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಇದೀಗ ಯೋಜನೆಯನ್ನು ಮುಂದುವರಿಸಲು ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ.

ಯೋಜನೆಯಡಿ 28.94 ಎಂಸಿಎಫ್‌ಟಿ ನೀರನ್ನು 12 ಕೆರೆಗಳಿಗೆ ತುಂಬಿಸಲಾಗುವುದು. ಬೋರಿ ನದಿಯಿಂದ ನೀರನ್ನು ಎತ್ತಲು ಪಂಪಿಂಗ್ ವ್ಯವಸ್ಥೆ ನಿರ್ಮಿಸಲಾಗುತ್ತಿದ್ದು, ಅಗತ್ಯ ಪಂಪ್‌ಹೌಸ್‌, ವಿದ್ಯುತ್‌ ಉಪಕೇಂದ್ರ, ಪೈಪ್‌ಲೈನ್‌ ಹಾಗೂ ವಿತರಣಾ ಜಾಲವನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಯಿಂದ ಆಳಂದ ತಾಲೂಕಿನ ಕೆರೆಗಳಿಗೆ ನೀರು ಲಭ್ಯವಾಗುವುದರ ಜತೆಗೆ, ಜಲಮೂಲಗಳ ಸಮರ್ಪಕ ಬಳಕೆ ಹಾಗೂ ನೀರಾವರಿ ಸೌಲಭ್ಯಕ್ಕೆ ಉತ್ತೇಜನ ದೊರೆಯಲಿದೆ.

ವಿವಿಧ ಸಣ್ಣ ನೀರಾವರಿ ಕಾಮಗಾರಿಗಳಿಗೆ 49.20 ಕೋಟಿ ರೂಪಾಯಿ

ಇದೇ ವೇಳೆ, ಕಲಬುರಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಣ್ಣ ನೀರಾವರಿ ಹಾಗೂ ಜಲಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲು 49.20 ಕೋಟಿ ರೂಪಾಯಿ ಮೊತ್ತದ ಯೋಜನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಯೋಜನೆಯಡಿ ವಿವಿಧ ಪ್ರದೇಶಗಳಲ್ಲಿನ ಕೆರೆಗಳು, ನಾಲಾಗಳು ಹಾಗೂ ಜಲಮೂಲಗಳ ಅಭಿವೃದ್ಧಿ, ಸರಣಿ ಚೆಕ್‌ಡ್ಯಾಂ ನಿರ್ಮಾಣ, ನಾಲಾ ಆಳಗೊಳಿಸುವಿಕೆ ಮತ್ತು ಅಗಲೀಕರಣ ಸೇರಿದಂತೆ ಜಲಸಂಗ್ರಹ ಹಾಗೂ ಅಂತರ್ಜಲ ಮರುಪೂರಣಕ್ಕೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಈ ಎರಡೂ ಯೋಜನೆಗಳ ಮೂಲಕ ಕಲಬುರಗಿ ಜಿಲ್ಲೆಯ ನೀರಾವರಿ ಮೂಲಸೌಕರ್ಯವನ್ನು ಬಲಪಡಿಸುವುದು, ಲಭ್ಯವಿರುವ ನೀರಿನ ಸಮರ್ಪಕ ಬಳಕೆ ಹಾಗೂ ಕೆರೆ-ನಾಲಾಗಳ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ನೀತಿ ಆಯೋಗದ ಉಪಾಧ್ಯಕ್ಷರ ಜತೆ ಸಿಎಂ ಡಿಕೆಶಿ ಸಭೆ; ರಾಜ್ಯದ ಪಾಲಿನ ಅನುದಾನ ಹಂಚಿಕೆಗೆ ಮನವಿ

ʼʼಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ. ನೀರಾವರಿ ಹಾಗೂ ಜಲಸಂರಕ್ಷಣೆಗೆ ಸಂಬಂಧಿಸಿದ ಈ ಎರಡು ಪ್ರಮುಖ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ಜಿಲ್ಲೆಯ ರೈತರು ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ. ನೀರಿನ ಲಭ್ಯತೆ ಹೆಚ್ಚಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆʼʼ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ʼʼಒಟ್ಟು 105.20 ಕೋಟಿ ರೂಪಾಯಿ ಮೊತ್ತದ ಈ ಎರಡು ಯೋಜನೆಗಳು ಕಲಬುರಗಿ ಜಿಲ್ಲೆಯ ನೀರಾವರಿ ಹಾಗೂ ಜಲಸಂರಕ್ಷಣಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಿವೆʼʼ ಎಂದು ಅವರು ಹೇಳಿದ್ದಾರೆ.