ರೌಡಿಗಳೊಂದಿಗೆ ಸಂಬಂಧ ಹೊಂದಿದರೆ ಸಹಿಸಲ್ಲ; ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾರ್ನಿಂಗ್
Priyank Kharge: ಪ್ರಾಮಾಣಿಕವಾಗಿ ಕೆಲಸ ಮಾಡಿ; ಸರ್ಕಾರ ನಿಮ್ಮೊಂದಿಗಿದೆ. ಪೊಲೀಸ್ ಸಿಬ್ಬಂದಿ ಪ್ರಾಮಾಣಿಕವಾಗಿ, ಕಾನೂನುಬದ್ಧವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕಾನೂನಿನ ಪ್ರಕಾರ ಕೆಲಸ ಮಾಡುವವರೆಗೆ ಗೃಹ ಸಚಿವರು ಮತ್ತು ಸರ್ಕಾರ ನಿಮ್ಮೊಂದಿಗಿರುತ್ತದೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ರೀತಿಯ ರಕ್ಷಣೆ ಇರುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
-
ಬೆಂಗಳೂರು, ಆ.31: ಕಾನೂನಿನ ಚೌಕಟ್ಟಿನೊಳಗೆ ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಬೆನ್ನಿಗೆ ಸರ್ಕಾರ ಹಾಗೂ ಗೃಹ ಸಚಿವರು ನಿಲ್ಲಲಿದ್ದಾರೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಪಷ್ಟಪಡಿಸಿದರು. ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ʼಗೃಹ ಸಚಿವರೊಂದಿಗೆ ಸಂವಾದʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಪೊಲೀಸ್ ಕಾನ್ಸ್‌ಟೇಬಲ್‌ಗಳು, ಹೆಡ್ ಕಾನ್ಸ್‌ಟೇಬಲ್‌ಗಳು, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್‌ಗಳು ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಯ ಸೇವೆ, ಕರ್ತವ್ಯದ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಆರೋಗ್ಯ ಮತ್ತು ಮಾನಸಿಕ ಒತ್ತಡ, ವರ್ಗಾವಣೆ ಹಾಗೂ ಬಡ್ತಿ, ಕುಟುಂಬ ಮತ್ತು ಮಕ್ಕಳ ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಚಿವರು ಸಿಬ್ಬಂದಿಯೊಂದಿಗೆ ನೇರವಾಗಿ ಸಂವಾದ ನಡೆಸಿದರು.
ಪೊಲೀಸ್ ಇಲಾಖೆಯ ಜವಾಬ್ದಾರಿ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಸೀಮಿತವಲ್ಲ. ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮತ್ತು ಕರ್ನಾಟಕದ ಸುರಕ್ಷಿತ ಹೂಡಿಕೆ ತಾಣ ಎಂಬ ಹೆಗ್ಗಳಿಕೆಯಲ್ಲಿಯೂ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ʼಬೇಡ ಬ್ರೋʼ ಮಿಷನ್ ಮೋಡ್‌ನಲ್ಲಿ ನಡೆಯಲಿ
ಸಿಂಥೆಟಿಕ್ ಡ್ರಗ್ಸ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವಿರುದ್ಧದ ‘ಬೇಡ ಬ್ರೋ’ ಅಭಿಯಾನವನ್ನು ಪೊಲೀಸರು ಮಿಷನ್ ಮೋಡ್‌ನಲ್ಲಿ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ತಮ್ಮ ವ್ಯಾಪ್ತಿಯಲ್ಲಿ ಯಾರು ಮಾದಕ ವಸ್ತುಗಳನ್ನು ಸೇವಿಸುತ್ತಾರೆ, ಯಾರು ಮಾರಾಟ ಮಾಡುತ್ತಾರೆ, ಯಾವ ಮೆಡಿಕಲ್ ಶಾಪ್ ಅಥವಾ ಫಾರ್ಮಸಿಯಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಾಮಾನ್ಯವಾಗಿಯೇ ತಿಳಿದಿರುತ್ತದೆ. ನಿರ್ದಿಷ್ಟ ಗುರಿ ನೀಡಿದಾಗ ಮಾತ್ರ ಮಾಹಿತಿ ನೀಡುವ ಪ್ರವೃತ್ತಿ ಸರಿಯಲ್ಲ ಎಂದು ಅವರು ಹೇಳಿದರು. “ಇದು ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ. ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಗುರಿ ನೀಡಿದಾಗ ಮಾತ್ರ ಮಾಡುವ ಕೆಲಸವನ್ನಾಗಿ ನೋಡಬಾರದು” ಎಂದು ತಿಳಿಸಿದರು.
ನಾನೂ ರೈತನ ಮಗ, ನಿಮ್ಮ ನೋವನ್ನು ಕಡಿಮೆ ಮಾಡುತ್ತೇನೆ: ಭೂಮಿ ಕಳೆದುಕೊಂಡವರಿಗೆ ಸಿಎಂ ಭರವಸೆ
ಮಾದಕ ವಸ್ತುಗಳ ಸೇವನೆಯಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಈ ಸಮಸ್ಯೆ ಬೆಂಗಳೂರು, ಮಂಗಳೂರು ಅಥವಾ ಬೆಳಗಾವಿಗೆ ಮಾತ್ರ ಸೀಮಿತವಾಗಿಲ್ಲ. ಚಿತ್ತಾಪುರ, ಚಿಂಚೋಳಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಗಾಂಜಾ ಬೆಳೆಯುತ್ತಿರುವುದು ಕಂಡುಬಂದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ ನೆರೆ ರಾಜ್ಯಗಳ ಪೊಲೀಸರು ಬಂದು ದಾಳಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.
ರೌಡಿಗಳೊಂದಿಗೆ ಯಾವುದೇ ರೀತಿಯ ನೆಂಟಸ್ತಿಕೆ ಬೇಡ
ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಪೊಲೀಸರು ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಯಾರು ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರ ಬಳಿ ಇರುತ್ತದೆ, ಕೆಲವೊಮ್ಮೆ ಪೊಲೀಸರೇ ಇಂತಹ ವ್ಯಕ್ತಿಗಳನ್ನು ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ರೌಡಿಗಳೊಂದಿಗೆ ನೆಂಟಸ್ತಿಕೆ ಬೆಳೆಸುವುದು, ಅವರಿಗೆ ಮಾಹಿತಿ ನೀಡುವುದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹೋಗುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಯಾವುದೇ ರೀತಿಯಲ್ಲಿ ಅವರನ್ನು ಪ್ರೋತ್ಸಾಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದರು.
“ರೌಡಿಗಳು ಪೊಲೀಸರಿಗೆ ಹೆದರಬೇಕೇ ಹೊರತು, ಸಾರ್ವಜನಿಕರು ಪೊಲೀಸರಿಗೆ ಹೆದರಬಾರದು. ತಪ್ಪು ಮಾಡುವವರಿಗಷ್ಟೇ ಪೊಲೀಸರ ಭಯ ಇರಬೇಕು” ಎಂದು ಹೇಳಿದರು. ರೌಡಿಗಳಿಂದ ನಮ್ಮ ಮಕ್ಕಳು ಮತ್ತು ಯುವಕರು ಹಾಳಾಗುತ್ತಿದ್ದಾರೆ. ಆದ್ದರಿಂದ ರೌಡಿಗಳೊಂದಿಗೆ ಯಾವುದೇ ರೀತಿಯ ಹೊಂದಾಣಿಕೆಯನ್ನು ಪೊಲೀಸರು ಬೆಳೆಸಬಾರದು. ಪೊಲೀಸ್ ಸಿಬ್ಬಂದಿಯ ಕೈ ಸ್ವಚ್ಛವಾಗಿದ್ದರೆ ರೌಡಿಗಳು ಪೊಲೀಸರಿಗೆ ಹೆದರುತ್ತಾರೆ ಎಂದರು.
ಸೈಬರ್ ಅಪರಾಧಗಳ ವಿರುದ್ಧ ಸಂವೇದನಾಶೀಲ ಕ್ರಮ
ತಂತ್ರಜ್ಞಾನ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಮಹಿಳೆಯರು ತಮ್ಮ ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರು ನೀಡಿದಾಗ ಪೊಲೀಸರು ಅತ್ಯಂತ ಸಂವೇದನಾಶೀಲವಾಗಿ ಸ್ಪಂದಿಸಬೇಕು. ಚಿತ್ರ ಅಥವಾ ವಿಡಿಯೋ ತೆಗೆದುಕೊಳ್ಳಲು ನೀಡಿದ ಸಮ್ಮತಿ ಎಂದರೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಮ್ಮತಿ ನೀಡಿದಂತಲ್ಲ. ಕಾನೂನು ಈ ವಿಚಾರದಲ್ಲಿ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. “ಯಾವುದೇ ಮಹಿಳೆ ಅಥವಾ ಆಕೆಯ ಪೋಷಕರು ದೂರು ಅಥವಾ ಮನವಿಯೊಂದಿಗೆ ಬಂದಾಗ ತಕ್ಷಣ ಕ್ರಮ ಕೈಗೊಳ್ಳಬೇಕು. ಮಹಿಳೆಯ ಗೌರವಕ್ಕಿಂತ ದೊಡ್ಡದು ಯಾವುದೂ ಇಲ್ಲ” ಎಂದು ಸಚಿವರು ಸೂಚಿಸಿದರು.
ಪೊಲೀಸ್ ಸಿಬ್ಬಂದಿಯ ಆರೋಗ್ಯಕ್ಕೂ ಸರ್ಕಾರದ ಆದ್ಯತೆ
ಪೊಲೀಸ್ ಸಿಬ್ಬಂದಿಯ ಕರ್ತವ್ಯದ ಸ್ವರೂಪ ಅತ್ಯಂತ ಒತ್ತಡದಿಂದ ಕೂಡಿದೆ. ಹಬ್ಬ-ಹರಿದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವುದು, ಸಂಚಾರದ ಒತ್ತಡ ಎದುರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ದೂರುಗಳಿಗೆ ಸ್ಪಂದಿಸುವುದು ಸೇರಿದಂತೆ ನಿರಂತರ ಒತ್ತಡದ ವಾತಾವರಣದಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರತ್ಯೇಕ ಯೋಜನೆ ರೂಪಿಸಲಾಗುವುದು. ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಿಬ್ಬಂದಿಯ ಕುಟುಂಬ, ವರ್ಗಾವಣೆ ಮತ್ತು ಬಡ್ತಿಗೂ ಗಮನ
ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಲಿದೆ. ವರ್ಗಾವಣೆ, ಬಡ್ತಿ, ಸೇವಾ ಮೌಲ್ಯಮಾಪನ ಸೇರಿದಂತೆ ವಿವಿಧ ವಿಚಾರಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಉತ್ತಮ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಕೇವಲ ಸೇವಾವಧಿಯ ಆಧಾರದ ಮೇಲೆ ಬಡ್ತಿಯನ್ನು ಪರಿಗಣಿಸುವುದರ ಜತೆಗೆ ಕಾರ್ಯಕ್ಷಮತೆ ಮತ್ತು ಸರ್ಕಾರದ ಆದ್ಯತೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯಕ್ಕೂ ಮಹತ್ವ ನೀಡಲಾಗುವುದು ಎಂದು ಅವರು ತಿಳಿಸಿದರು.
ಪೊಲೀಸರ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ
ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೂ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ. ಕೇವಲ ಪ್ರಮಾಣಪತ್ರ ಪಡೆಯುವ ಶಿಕ್ಷಣಕ್ಕಿಂತ ಕೈಗಾರಿಕೆಗೆ ಅಗತ್ಯವಾದ ಕೌಶಲ್ಯ, ಭಾಷಾ ಜ್ಞಾನ ಮತ್ತು ಸಂವಹನ ಕೌಶಲ್ಯ ಬೆಳೆಸುವುದು ಮುಖ್ಯ ಎಂದು ಸಚಿವರು ಹೇಳಿದರು. ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ವ್ಯವಸ್ಥೆ ರೂಪಿಸಲಾಗುವುದು. ಉದ್ಯೋಗದ ಖಾತರಿ ನೀಡಲು ಸಾಧ್ಯವಾಗದಿದ್ದರೂ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ನೀಡುವ ಖಾತರಿಯನ್ನು ಸರ್ಕಾರ ನೀಡಲಿದೆ ಎಂದರು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ‘ನಿಪುಣ ಕರ್ನಾಟಕʼ ಕಾರ್ಯಕ್ರಮದ ಮೂಲಕ ಕೌಶಲ್ಯಾಭಿವೃದ್ಧಿ, ಉತ್ತಮ ಸಂವಹನ ಕೌಶಲ್ಯ ಹಾಗೂ ಭಾಷಾ ಪ್ರಯೋಗಾಲಯಗಳಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ನೇಹಪರ ಪೊಲೀಸ್ ಠಾಣೆ ಎಂದರೆ ಕಟ್ಟಡವಲ್ಲ
ಸ್ನೇಹಪರ ಪೊಲೀಸ್ ಠಾಣೆ ಎಂದರೆ ಕೇವಲ ಹೊಸ ಕಟ್ಟಡ ನಿರ್ಮಿಸುವುದಲ್ಲ. ಆ ಠಾಣೆಯೊಳಗಿನ ಸಿಬ್ಬಂದಿಯ ನಡವಳಿಕೆ ಮತ್ತು ಸಾರ್ವಜನಿಕರೊಂದಿಗೆ ಇರುವ ಸಂಬಂಧವೇ ಸ್ನೇಹಪರ ಪೊಲೀಸ್ ವ್ಯವಸ್ಥೆಯ ನಿಜವಾದ ಅರ್ಥ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಪೊಲೀಸ್ ಠಾಣೆಗೆ ಬರುವ ವ್ಯಕ್ತಿಗೆ ಅದು ಮೊದಲ ಬಾರಿಗೆ ಎದುರಾಗಿರುವ ಸಮಸ್ಯೆಯಾಗಿರಬಹುದು. ಆದರೆ ಪೊಲೀಸರಿಗೆ ಅದು ದಿನನಿತ್ಯದ ಕೆಲಸವಾಗಿರಬಹುದು. ಈ ವ್ಯತ್ಯಾಸವನ್ನು ಪೊಲೀಸರು ಅರ್ಥಮಾಡಿಕೊಂಡು ಸಾರ್ವಜನಿಕರೊಂದಿಗೆ ಮಾನವೀಯವಾಗಿ ಮತ್ತು ಗೌರವಯುತವಾಗಿ ವರ್ತಿಸಬೇಕು. ಜನರು ಪೊಲೀಸರನ್ನು ಸಂಪರ್ಕಿಸಲು ಯಾವುದೇ ರೀತಿಯ ಹಿಂಜರಿಕೆ ಇರಬಾರದು. ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹಿತರಂತೆ ವರ್ತಿಸಬೇಕೆಂದಿಲ್ಲ; ಆದರೆ ಮಾನವೀಯತೆ ಮತ್ತು ಗೌರವದಿಂದ ವರ್ತಿಸಬೇಕು ಎಂದು ಅವರು ಹೇಳಿದರು.
ʼನೀವು ಕರ್ನಾಟಕ ಪೊಲೀಸ್ ಮಾತ್ರವಲ್ಲ, ರಾಜ್ಯದ ಮುಖʼ
“ನೀವು ಕೇವಲ ಕರ್ನಾಟಕ ಪೊಲೀಸ್ ಅಲ್ಲ; ನೀವು ಕರ್ನಾಟಕ ರಾಜ್ಯದ ಮುಖ” ಎಂದು ಪೊಲೀಸ್ ಸಿಬ್ಬಂದಿಗೆ ಪ್ರಿಯಾಂಕ್ ಖರ್ಗೆ ಹೇಳಿದರು. ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಗೃಹ ಇಲಾಖೆಯ ಪಾತ್ರ ಬಹಳ ಮಹತ್ವದ್ದಾಗಿದೆ. ದೇಶ-ವಿದೇಶಗಳಲ್ಲಿ ಹೂಡಿಕೆದಾರರನ್ನು ಕರ್ನಾಟಕಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ ರಾಜ್ಯದ ಉತ್ತಮ ಮಾನವ ಸಂಪನ್ಮೂಲ, ಶಿಕ್ಷಣ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಸಾಮರ್ಥ್ಯದ ಜತೆಗೆ ಕರ್ನಾಟಕ ಸುರಕ್ಷಿತ ರಾಜ್ಯ ಎಂಬ ವಿಶ್ವಾಸವನ್ನೂ ಮೂಡಿಸಬೇಕಾಗುತ್ತದೆ ಎಂದರು. ಹೂಡಿಕೆದಾರರು ಕೇವಲ ತಮ್ಮ ಬಂಡವಾಳಕ್ಕೆ ಸುರಕ್ಷಿತ ತಾಣವನ್ನು ಹುಡುಕುವುದಿಲ್ಲ; ತಮ್ಮ ಕುಟುಂಬ ಮತ್ತು ಸಿಬ್ಬಂದಿಯೂ ಸುರಕ್ಷಿತವಾಗಿ ವಾಸಿಸಬಹುದಾದ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಈ ನಂಬಿಕೆಯನ್ನು ಮೂಡಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ನಿರ್ಣಾಯಕವಾಗಿದೆ ಎಂದು ಹೇಳಿದರು.
ಸಿಬ್ಬಂದಿಯ ಸಲಹೆಗಳಿಗೆ ಸರ್ಕಾರ ಸ್ಪಂದನೆ
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಪೊಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 200 ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಆರೋಗ್ಯ, ಬಡ್ತಿ, ವರ್ಗಾವಣೆ, ಹ್ಯಾಂಡ್‌ಕಫ್ಸ್, ಪೊಲೀಸ್ ಪದಕ ಸೇರಿದಂತೆ ಹಲವು ವಿಷಯಗಳ ಕುರಿತು ಸಲಹೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಸಿಬ್ಬಂದಿ ಪ್ರಸ್ತಾಪಿಸಿದ ಪ್ರತಿಯೊಂದು ವಿಚಾರವೂ ದಾಖಲಿಸಲಾಗಿದೆ. ಯಾವ ವಿಷಯಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು, ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿ; ಸರ್ಕಾರ ನಿಮ್ಮೊಂದಿಗಿದೆ. ಪೊಲೀಸ್ ಸಿಬ್ಬಂದಿ ಪ್ರಾಮಾಣಿಕವಾಗಿ, ಕಾನೂನುಬದ್ಧವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕಾನೂನಿನ ಪ್ರಕಾರ ಕೆಲಸ ಮಾಡುವವರೆಗೆ ಗೃಹ ಸಚಿವರು ಮತ್ತು ಸರ್ಕಾರ ನಿಮ್ಮೊಂದಿಗಿರುತ್ತದೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ರೀತಿಯ ರಕ್ಷಣೆ ಇರುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.
Gruha Jyothi Scheme: ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಪರಿಷ್ಕರಣೆ ಅವಧಿ ಸೆ.30ರವರೆಗೆ ವಿಸ್ತರಣೆ
ಸರ್ಕಾರದಿಂದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ನಿರೀಕ್ಷಿಸುವಂತೆ, ಪೊಲೀಸ್ ಸಿಬ್ಬಂದಿಯಿಂದಲೂ ಅದೇ ಮಟ್ಟದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸರ್ಕಾರ ನಿರೀಕ್ಷಿಸುತ್ತದೆ ಎಂದರು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಇಲಾಖೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಸಾಧ್ಯ. ಸಚಿವರು, ಅಧಿಕಾರಿಗಳು ಬಂದು ಹೋಗುತ್ತಾರೆ; ಪೊಲೀಸ್ ಸಿಬ್ಬಂದಿಯೂ ಒಂದು ದಿನ ನಿವೃತ್ತರಾಗುತ್ತಾರೆ. ಆದರೆ ಸೇವೆಯಲ್ಲಿರುವ ಅವಧಿಯಲ್ಲಿ ಅಭಿವೃದ್ಧಿ, ಉತ್ತಮ ಸಂಬಂಧ ಮತ್ತು ಸಾರ್ವಜನಿಕ ಸೇವೆ ಎಂಬ ಉದ್ದೇಶದೊಂದಿಗೆ ಕೆಲಸ ಮಾಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.