ಕಲಬುರಗಿ: ಕಬ್ಬಿಗೆ ಟನ್‌ಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ (farmers protest in Kalaburagi) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶನಿವಾರ ನಗರದ ರಾಮ ಮಂದಿರ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಶನಿವಾರ ಪ್ರತಿಭಟನೆ ನಡೆಸಿದರು. ರೈತರೊಂದಿಗೆ ನಡೆಸಿದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಮತ್ತೆ ರಸ್ತೆಗಿಳಿದು ಹೋರಾಟ ನಡೆಸಿದರು. ಕಬ್ಬಿಗೆ ರಾಜ್ಯಾದ್ಯಂತ ಏಕರೂಪದ ದರ ನಿಗದಿಪಡಿಸಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಕ್ಕರೆಗೆ ಕೆ.ಜಿ.ಗೆ 60 ರೂ., ಕಬ್ಬಿಗೆ ಟನ್‌ಗೆ 5,500 ರೂ., ತೊಗರಿಗೆ ಕ್ವಿಂಟಲ್‌ಗೆ 15,000 ರೂ., ಹತ್ತಿಗೆ 15,000 ರೂ. ಮೆಣಸಿನಕಾಯಿಗೆ 30,000 ರೂ. ಹಾಗೂ ಭತ್ತಕ್ಕೆ ಕ್ವಿಂಟಲ್‌ಗೆ 5,000 ರೂ. ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಇತರ ಬೆಳೆಗಳಿಗೂ ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳಂತೆ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ರೈತರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ, ರಾಜ್ಯ ಕಾರ್ಯದರ್ಶಿ ಬಸವರಾಜ ಸಿ.ಕೋರಿ, ಹಿರಿಯ ರೈತ ಹೋರಾಟಗಾರ ಉಮಾಪತಿ ಪಾಟೀಲ ನಂದೂರ, ಸಾಮಾಜಿಕ ಹೋರಾಟಗಾರ ಸಿದ್ಧು ಎಸ್.ಹಿರೇಮಠ, ಮಲ್ಲಿಕಾರ್ಜುನ, ಕರೇಪ್ಪ ಕಾರಗುಂಡ, ಯುವ ಘಟಕದ ಜಿಲ್ಲಾಧ್ಯಕ್ಷ ಸಿದ್ಧು ಎಸ್.ಎಲ್. ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕದಲ್ಲಿ ಕಬ್ಬಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಮತ್ತು ಸೂಕ್ತ ದರ ನಿಗದಿಪಡಿಸುವಂತೆ ಒತ್ತಾಯಿಸಿ ಅಕ್ಟೋಬರ್ 2026 ರಲ್ಲಿ ರೈತರ ಪ್ರತಿಭಟನೆಗಳು ತೀವ್ರಗೊಂಡಿವೆ. ಬೆಳಗಾವಿ, ಗದಗ (ಮುಳಗುಂದ ನಾಕಾ), ಲೋಕಾಪುರ (ಬಾಗಲಕೋಟೆ), ಹುಬ್ಬಳ್ಳಿ ಮತ್ತು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ರಸ್ತೆ ತಡೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬಂದ್ ಹಾಗೂ ಬಸ್ ತಡೆ ನಡೆಸಿದ್ದಾರೆ.