ಕಚ್ಚಾ ಬೆಳೆಯಿಂದ ಮೌಲ್ಯವರ್ಧಿತ ಆಹಾರ ಉತ್ಪನ್ನದತ್ತ ಹೆಜ್ಜೆ
ಸ್ಥಳೀಯ ಉದ್ಯಮಗಳಿಗೆ ಹೊಸ ಅವಕಾಶ
ಕಲಬುರಗಿ: ಕಲ್ಯಾಣ ಕರ್ನಾಟಕದ ಹೊಲಗಳಲ್ಲಿ ಬೆಳೆಯುವ ಬೇಳೆಕಾಳುಗಳಿಗೆ ಕೇವಲ ಕಚ್ಚಾ ಕೃಷಿ ಉತ್ಪನ್ನದ ಮಾರುಕಟ್ಟೆಯಷ್ಟೇ ಸೀಮಿತವಾಗದೆ, ಮೌಲ್ಯವರ್ಧಿತ ಆಹಾರ ಉದ್ಯಮದ ಹೊಸ ಅವಕಾಶ ಕಲ್ಪಿಸುವ ಪ್ರಯತ್ನಕ್ಕೆ ಚಾಲನೆ ದೊರೆತಿದೆ. ತೊಗರಿ, ಉದ್ದು, ಹೆಸರು ಹಾಗೂ ಕಡಲೆ ಬೇಳೆಯಿಂದ ಪೌಷ್ಟಿಕಾಂಶಯುಕ್ತ ಎನರ್ಜಿ ಬಾರ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯ ಕೃಷಿ ಉತ್ಪನ್ನವನ್ನು ಗ್ರಾಹಕ ಮಾರುಕಟ್ಟೆಗೆ ಕೊಂಡೊಯ್ಯುವ ಪ್ರಯತ್ನ ಆರಂಭವಾಗಿದೆ.
ಆರು ಬಗೆಯ ಪೌಷ್ಟಿಕ ಉತ್ಪನ್ನ ಅಭಿವೃದ್ಧಿ
ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್‌ನಡಿ ಬೆಂಗಳೂರಿನ ಜೈವಿಕ ನಾವೀನ್ಯತಾ ಕೇಂದ್ರ (ಬಿಬಿಸಿ), ಕೃಷಿ ಇಲಾಖೆಯ ಸಹಯೋಗದಲ್ಲಿ ಈ ಪ್ರಯತ್ನ ಕೈಗೊಂಡಿದೆ. ‘ಕಲಬುರಗಿ ಬೇಳೆಕಾಳುಗಳ ಉಪಕ್ರಮ’ದಡಿ ಆರು ಬಗೆಯ ಶಕ್ತಿವರ್ಧಕ ತಿಂಡಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ವಿವಿಧ ಬೇಳೆಕಾಳುಗಳ ಸಂಯೋಜನೆಯ ಹಾಗೂ ಹೆಚ್ಚಿನ ಪ್ರೋಟೀನ್ ಹೊಂದಿರುವ ವಿಶೇಷ ಮಾದರಿಯೂ ಇದರಲ್ಲಿ ಸೇರಿದೆ.
ಕಚ್ಚಾ ಧಾನ್ಯಕ್ಕೆ ಬದಲು ಮೌಲ್ಯವರ್ಧನೆ
ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳು ಬೇಳೆಕಾಳು ಉತ್ಪಾದನೆಗೆ ಹೆಸರುವಾಸಿ ಯಾಗಿವೆ. ಆದರೆ, ಉತ್ಪಾದನೆಯ ಬಹುಪಾಲು ಕಚ್ಚಾ ಧಾನ್ಯದ ರೂಪದಲ್ಲಿಯೇ ಹೊರಗಿನ ಮಾರು ಕಟ್ಟೆ ಸೇರುತ್ತದೆ. ಹೀಗಾಗಿ ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ಅಂತಿಮ ಉತ್ಪನ್ನದ ಹಂತದಲ್ಲಿ ಸೃಷ್ಟಿಯಾಗುವ ಹೆಚ್ಚಿನ ಮೌಲ್ಯ ಸ್ಥಳೀಯ ರೈತರು ಮತ್ತು ಆರ್ಥಿಕ ವ್ಯವಸ್ಥೆಗೆ ಸಿಗುವುದಿಲ್ಲ. ಈ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಬೇಳೆಕಾಳುಗಳನ್ನು ಸಿದ್ಧ ಆಹಾರ ಉತ್ಪನ್ನಗಳಾಗಿ ಪರಿವರ್ತಿಸುವ ಸಾಧ್ಯತೆಯನ್ನು ಬಿಬಿಸಿ ಪರಿಶೀಲಿಸಿದೆ.
ಸಚಿವ ಖರ್ಗೆ ಮುತುವರ್ಜಿಗೆ ವೇಗ
ಕಲ್ಯಾಣ ಕರ್ನಾಟಕದ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸುವ ಪ್ರಯತ್ನಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Home Minister Priyank Kharge) ಅವರ ಮುತುವರ್ಜಿ ಪ್ರಮುಖವಾಗಿದೆ. ಬೆಂಗಳೂರಿನ ಜೈವಿಕ ನಾವೀನ್ಯತಾ ವ್ಯವಸ್ಥೆ ಹಾಗೂ ಕಲ್ಯಾಣ ಕರ್ನಾಟಕದ ಕೃಷಿ ಸಾಮರ್ಥ್ಯ ವನ್ನು ಬೆಸೆಯುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವುದು ಹಾಗೂ ರೈತರು, ಎಫ್‌ಪಿಒಗಳು ಮತ್ತು ಸ್ಥಳೀಯ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಉಪಕ್ರಮಕ್ಕೆ ಒತ್ತು ನೀಡಲಾಗಿದೆ.
ಎನರ್ಜಿ ಬಾರ್‌ಗಳ ತಯಾರಿಕೆಯಲ್ಲಿ ಹುರಿದ ಕಡಲೆಕಾಯಿ, ಬೆಲ್ಲ, ಓಟ್ಸ್ ಮತ್ತು ಕುಂಬಳಕಾಯಿ ಬೀಜಗಳನ್ನು ಬಳಸಲಾಗಿದೆ. ಯಾವುದೇ ಕೃತಕ ಬಣ್ಣ, ಕೃತಕ ಸುವಾಸನೆ ಅಥವಾ ರಾಸಾಯನಿಕ ಸಂರಕ್ಷಕಗಳನ್ನು ಬಳಸಿಲ್ಲ. ಪ್ರತಿ 30 ಗ್ರಾಂ ಬಾರ್‌ನಲ್ಲಿ ಸುಮಾರು 4 ಗ್ರಾಂ ಪ್ರೋಟೀನ್, 122ರಿಂದ 123 ಕ್ಯಾಲೊರಿ ಹಾಗೂ 1.8ರಿಂದ 2 ಗ್ರಾಂ ಆಹಾರದ ನಾರಿನಂಶವಿದೆ. ಹೆಚ್ಚಿನ ಪ್ರೋಟೀನ್ ಮಾದರಿ ಯಲ್ಲಿ ಸುಮಾರು 4.85 ಗ್ರಾಂ ಪ್ರೋಟೀನ್ ಇದೆ.
ಎಫ್‌ಪಿಒ, ಸ್ವಸಹಾಯ ಸಂಘಗಳಿಗೆ ಉದ್ಯಮಾವಕಾಶ
ಯೋಜನೆಯ ಮುಂದಿನ ಹಂತದಲ್ಲಿ ಉತ್ಪನ್ನಗಳ ಬಾಳಿಕೆ ಅವಧಿ, ಸ್ಥಿರತೆ, ಪೌಷ್ಟಿಕಾಂಶ ಹಾಗೂ ಗ್ರಾಹಕರ ಸ್ವೀಕಾರಾರ್ಹತೆ ಪರೀಕ್ಷೆ ನಡೆಯಲಿದೆ. ಪ್ಯಾಕೇಜಿಂಗ್ ಮತ್ತು ಎಫ್‌ಎಸ್‌ಎಸ್‌ಎಐ ಪರವಾನಗಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಸಕ್ತ ರೈತ ಉತ್ಪಾದಕ ಸಂಘಟನೆಗಳು (ಎಫ್‌ಪಿಒ), ಸ್ವಸಹಾಯ ಸಂಘಗಳು ಹಾಗೂ ಎಂಎಸ್‌ಎಂಇಗಳಿಗೆ ಉತ್ಪನ್ನ ತಯಾರಿಕೆಯ ತಂತ್ರಜ್ಞಾನ ವರ್ಗಾಯಿಸಲು ಉದ್ದೇಶಿಸಲಾಗಿದೆ.
ಬೇಳೆಕಾಳಿನಿಂದ ಪ್ಯಾಕೇಜ್ಡ್ ಆಹಾರ ಉತ್ಪನ್ನದತ್ತ ಹೆಜ್ಜೆ
ಉತ್ಪಾದನೆಯಿಂದ ಸಂಸ್ಕರಣೆ, ಪ್ಯಾಕೇಜಿಂಗ್‌ನಿಂದ ಮಾರುಕಟ್ಟೆಯವರೆಗೆ ಸ್ಥಳೀಯ ಮೌಲ್ಯ ಸರಪಳಿ ನಿರ್ಮಿಸುವುದು ಯೋಜನೆಯ ಆಶಯವಾಗಿದೆ. ಇದರಿಂದ ರೈತರಿಗೆ ಹೆಚ್ಚುವರಿ ಆದಾಯ ದ ಅವಕಾಶದ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಘಟಕಗಳು, ಉದ್ಯೋಗ ಹಾಗೂ ಹೊಸ ಉದ್ಯಮಗಳು ಬೆಳೆಯಲು ಅವಕಾಶ ಸಿಗುವ ನಿರೀಕ್ಷೆಯಿದೆ. ಮುಂದೆ ತೊಗರಿ, ಕೆಂಬಾಳೆ, ಕಬ್ಬು ಸೇರಿದಂತೆ ಇತರ ಕೃಷಿ ಉತ್ಪನ್ನಗಳಿಗೂ ಇದೇ ಮಾದರಿಯ ಮೌಲ್ಯವರ್ಧನೆ ವಿಸ್ತರಿಸುವ ಸಾಧ್ಯತೆಯಿದೆ.
‘ಬೇಳೆಕಾಳಿನಿಂದ ಎನರ್ಜಿ ಬಾರ್’
* ಬಳಕೆ: ತೊಗರಿ, ಉದ್ದು, ಹೆಸರು ಮತ್ತು ಕಡಲೆಬೇಳೆ
* ಅಭಿವೃದ್ಧಿಪಡಿಸಿದ ಉತ್ಪನ್ನ: 6 ವಿಧದ ಶಕ್ತಿವರ್ಧಕ ಪೌಷ್ಟಿಕ ತಿಂಡಿ
* ಪ್ರತಿ 30 ಗ್ರಾಂ ಬಾರ್: ಸುಮಾರು 4 ಗ್ರಾಂ ಪ್ರೋಟೀನ್
* ಕ್ಯಾಲೊರಿ: ಸುಮಾರು 122–123
* ಆಹಾರದ ನಾರಿನಂಶ: 1.8–2 ಗ್ರಾಂ
* ಹೆಚ್ಚಿನ ಪ್ರೋಟೀನ್ ಮಾದರಿ: ಸುಮಾರು 4.85 ಗ್ರಾಂ/30 ಗ್ರಾಂ
* ಹೆಚ್ಚುವರಿ ಪದಾರ್ಥಗಳು: ಕಡಲೆಕಾಯಿ, ಬೆಲ್ಲ, ಓಟ್ಸ್, ಕುಂಬಳಕಾಯಿ ಬೀಜ
* ಕೃತಕ ಬಣ್ಣ/ಸುವಾಸನೆ: ಬಳಸಿಲ್ಲ
* ರಾಸಾಯನಿಕ ಸಂರಕ್ಷಕ: ಬಳಸಿಲ್ಲ
* ಮುಂದಿನ ಗುರಿ: ಎಫ್‌ಪಿಒ, ಸ್ವಸಹಾಯ ಸಂಘ ಹಾಗೂ ಎಂಎಸ್‌ಎಂಇಗಳಿಗೆ ತಂತ್ರಜ್ಞಾನ ವರ್ಗಾವಣೆ
![]()
ಸ್ಥಳೀಯವಾಗಿ ಬೆಳೆಯುವ ಬೇಳೆಕಾಳುಗಳನ್ನು ಹೆಚ್ಚಿನ ಮೌಲ್ಯದ ಆಹಾರ ಉತ್ಪನ್ನಗಳಾಗಿ ಪರಿವರ್ತಿಸುವುದು ರೈತರು ಹಾಗೂ ಸ್ಥಳೀಯ ಉದ್ಯಮಗಳಿಗೆ ಹೊಸ ಅವಕಾಶ. ಬೆಂಗಳೂರಿನ ನಾವೀನ್ಯತಾ ವ್ಯವಸ್ಥೆ ಕಲ್ಯಾಣ ಕರ್ನಾಟಕದೊಂದಿಗೆ ಕೈಜೋಡಿಸಿರುವುದು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
- ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ