ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sugar cane Farmer protest: ಕೇಂದ್ರದೊಂದಿಗೆ ನಡೆದ ಸಂಧಾನ ಸಭೆ ವಿಫಲ, ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡದಿರಲು ರೈತರ ನಿರ್ಧಾರ

ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ನಡೆದ ಸಂಧಾನ ಸಭೆಯಲ್ಲಿಯೂ ರೈತರ ಪ್ರಮುಖ ಬೇಡಿಕೆಗಳಿಗೆ ಸ್ಪಷ್ಟ ಒಪ್ಪಿಗೆ ದೊರೆಯದ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ. ಕೇಂದ್ರದಿಂದ ಬೇಡಿಕೆಗಳಿಗೆ ಒಪ್ಪಿಗೆ ಸಿಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಕಲಬುರಗಿ: ಕಬ್ಬಿಗೆ(Sugarcane) ಕ್ವಿಂಟಲ್‌ಗೆ ₹5,500 ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಕಲಬುರಗಿ ನಗರದ ರಾಮಮಂದಿರ ವೃತ್ತದಲ್ಲಿ ನಡೆಸುತ್ತಿರುವ ಹೆದ್ದಾರಿ ತಡೆ ಪ್ರತಿಭಟನೆ(Protest) ಅಹೋರಾತ್ರಿ ಮುಂದುವರಿಯಲಿದೆ.

ಮಂಗಳವಾರ ಆರಂಭವಾದ ಪ್ರತಿಭಟನೆ ವೇಳೆ ನೂರಾರು ರೈತರು ರಾಮಮಂದಿರ ವೃತ್ತದಲ್ಲಿ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಿದರು. ರಸ್ತೆಯಲ್ಲೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಕಬ್ಬಿನ ಗೂಡು ನಿರ್ಮಿಸಿ ಹೂವಿನ ಹಾರ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ನಡೆದ ಸಂಧಾನ ಸಭೆಯಲ್ಲಿಯೂ ರೈತರ ಪ್ರಮುಖ ಬೇಡಿಕೆಗಳಿಗೆ ಸ್ಪಷ್ಟ ಒಪ್ಪಿಗೆ ದೊರೆಯದ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ. ಕೇಂದ್ರದಿಂದ ಬೇಡಿಕೆಗಳಿಗೆ ಒಪ್ಪಿಗೆ ಸಿಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Sugarcane Growers Protest: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಕಿಚ್ಚು ದುಪ್ಪಟ್ಟು; ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

ರೈತ ಮುಖಂಡ ಜಗದೀಶ ಪಾಟೀಲ್ ರಾಜಾಪುರ ಮಾತನಾಡಿ, ಕಬ್ಬಿಗೆ ₹5,500, ತೊಗರಿಗೆ ₹15 ಸಾವಿರ, ಭತ್ತಕ್ಕೆ ₹7,500, ಮೆಣಸಿನಕಾಯಿಗೆ ₹30 ಸಾವಿರ ಹಾಗೂ ಹತ್ತಿಗೆ ₹15 ಸಾವಿರ ದರ ನಿಗದಿ ಪಡಿಸಬೇಕು. ಸರ್ಕಾರ ಸಭೆಗಳ ನೆಪದಲ್ಲಿ ರೈತರ ಸಮಸ್ಯೆಗಳನ್ನು ಮುಂದೂಡುತ್ತಿದೆ ಎಂದು ಆರೋಪಿಸಿದರು.

ರೈತ ಶಿವಾನಂದ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ(Central Government) ಅದನ್ನು ಈಡೇರಿಸಿಲ್ಲ. ಉಚಿತ ಯೋಜನೆಗಳಿಗಿಂತ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯುವಂತೆ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ರೈತರ ಸಮಸ್ಯೆಯ ಗಂಭೀರತೆ ಅರಿಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಸಿದ್ದರಾಮ ದಣ್ಣೂರ, ಶರಣಬಸಪ್ಪ ಮಮಶೆಟ್ಟಿ, ಜೇವರ್ಗಿಯ ಮಲ್ಲಣ್ಣಗೌಡ, ಶಿವಾನಂದ, ಬಸವರಾಜಪ್ಪ ಕೋರಿ, ಸುಖೇಶ ರೆಡ್ಡಿ ಜೈನಾಪುರ, ಎಂ ಎಸ್ ಪಾಟೀಲ್ ನರಿಬೋಳ, ಮಲ್ಲಿಕಾರ್ಜುನ ಸಾರವಾಡ್, ಸಿದ್ದು ಎಸ್ ಎಲ್, ಕರೆಪ್ಪ ಕಾರಿಗೊಂಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆಗಳು: ಕಬ್ಬಿಗೆ ಕ್ವಿಂಟಲ್‌ಗೆ ₹5,500 ಹಾಗೂ ಸಕ್ಕರೆಗೆ ಕೆಜಿಗೆ ₹60 ಎಂಎಸ್‌ಪಿ ನಿಗದಿ ಪಡಿಸಬೇಕು. ಗೃಹಬಳಕೆ ಸಕ್ಕರೆಗೆ ₹50, ವಾಣಿಜ್ಯ ಸಕ್ಕರೆಗೆ ₹100 ದರ ನಿಗದಿ, ಎಥನಾಲ್(Ethanol) ಉತ್ಪಾದನೆಗೆ ಪೂರ್ಣ ಅನುಮತಿ, ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕ ಮತ್ತು ಸಿಸಿಟಿವಿ ವ್ಯವಸ್ಥೆ, ಡಿಸಿ ಮೇಲ್ವಿಚಾರಣೆಯಲ್ಲಿ ತೂಕ ವ್ಯವಸ್ಥೆ ನಿರ್ವಹಣೆ ಹಾಗೂ ಪ್ರತಿ ಟನ್ ಕಬ್ಬಿಗೆ ಎಸ್‌ಎಪಿ ಮೂಲಕ ₹1,000 ಪ್ರೋತ್ಸಾಹಧನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತೂಕದ ಸೇತುವೆಗಳ ನಿರ್ಮಾಣಕ್ಕೆ ₹1,400 ಕೋಟಿ ಅನುದಾನ, ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಬಿಡುಗಡೆ ಹಾಗೂ ಅಫಜಲಪುರ ತಾಲೂಕಿನ ಎಲ್ಲ ಕಾಲುವೆಗಳ ಕೊನೆಯ ಹಂತದವರೆಗೆ ನೀರು ಹರಿಸುವಂತೆಯೂ ಒತ್ತಾಯಿಸಿದ್ದಾರೆ.

ಅಹೋರಾತ್ರಿ ಧರಣಿಗೆ ಸಿದ್ಧತೆ

ರಾತ್ರಿ ವೇಳೆಯಲ್ಲೂ ಧರಣಿ ಮುಂದುವರಿಸಲು ರೈತರು ಸ್ಥಳದಲ್ಲೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಿಸಿಲಿನ ನಡುವೆಯೂ ದಿನವಿಡೀ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ರೈತರು, ರಾತ್ರಿ ಕೂಡ ಸ್ಥಳದಲ್ಲೇ ಉಳಿದು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಕೆಲ ದಾನಿಗಳು ರೈತರಿಗೆ ನೀರು, ಊಟ ಹಾಗೂ ಟೋಪಿಗಳ ವ್ಯವಸ್ಥೆ ಮಾಡಿದ್ದಾರೆ.

ಸಂಚಾರಕ್ಕೆ ಅಡ್ಡಿ: ಹೆದ್ದಾರಿ ತಡೆ ಹಿನ್ನೆಲೆಯಲ್ಲಿ ರಾಮಮಂದಿರ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತ ಗೊಂಡಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಗರಕ್ಕೆ ಆಗಮಿಸುವ ಬಸ್‌ಗಳು ಹಾಗೂ ಇತರ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.