ಕಲಬುರಗಿ: ಭೀಮಾ ಮತ್ತು ಅಮರಜಾ ನದಿಗಳಲ್ಲಿ ಪ್ರವಾಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ (Kalaburagi rains) ಪುಣ್ಯಕ್ಷೇತ್ರ ಗಾಣಗಾಪುರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ನದಿಗಳ ಸಂಗಮದ ಪ್ರದೇಶ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಕಾಳೇಶ್ವರ ದೇವಸ್ಥಾನದ ಬಳಿ ಕೂಡ ನೀರು ತುಂಬಿದೆ.
ಪ್ರವಾಹದ ಕಾರಣದಿಂದಾಗಿ ದೇವಾಲಯಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ದರ್ಶನಕ್ಕಾಗಿ ಆಗಮಿಸಿರುವ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶಿಸಿ ದೇವರ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ, ಪ್ರವಾಹದ ನೀರು ದೇವಸ್ಥಾನದ ಆವರಣಕ್ಕೆ ನುಗ್ಗಿದ್ದರಿಂದ ಪೂಜಾರಿಗಳು ನಿತ್ಯದ ಪೂಜಾ ಕೈಂಕರ್ಯಗಳನ್ನು ನಡೆಸಲೂ ಕೂಡ ಸಾಧ್ಯವಾಗುತ್ತಿಲ್ಲ.
ಭೀಮಾ ನದಿ ತೀರದಲ್ಲಿ ಮಳೆ ಹಾನಿ ಪರಿಶೀಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ ಜಿಲ್ಲೆಯಾದ್ಯಂತ ನಿರಂತರ ಮಳೆ ಬೀಳುತ್ತಿದ್ದು ಭೀಮಾ ನದಿಗೆ ತುಂಬಿ ಹರಿಯುತ್ತಿದೆ. ಹೀಗಾಗಿ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ಬಳಿಯ ಭೀಮಾ ತೀರದ ಪ್ರದೇಶಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ತಾಲೂಕಿನ ದೇವಲ್ ಗಾಣಗಾಪುರ ಗ್ರಾಮದ ಬಳಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿ, ಸೌಲಭ್ಯ ಒದಗಿಸಿರುವುದರ ಕುರಿತು ಮಾಹಿತಿ ಪಡೆದುಕೊಂಡರು.
ತಾಲೂಕಿನ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಕೂಡಾ ಸಚಿವರ ಪರಿಶೀಲಿಸಿ ರೈತರೊಂದಿಗೆ ಮಾತನಾಡಿದರು. ಈ ವೇಳೆ ತೊಗರಿ ಸೇರಿದಂತೆ ಇತರೆ ಬೆಳೆ ಹಾನಿಗೀಡಾಗಿರುವುದನ್ನು ಪರಿಶೀಲಿಸಿದ ಸಚಿವರು, ಸ್ಥಳದಲ್ಲಿದ್ದ ಕೃಷಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಬೆಳೆ ಹಾನಿಯಾದ ಕುರಿತು ಸಮರ್ಪಕ ಹಾಗೂ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.
ಶಾಶ್ವತ ಪರಿಹಾರ ಕಲ್ಪಿಸಿ ಎಂದು ಡಿಸಿ ಕಾಲಿಗೆ ಬಿದ್ದ ನೆರೆ ಸಂತ್ರಸ್ಥರು

ಕಲಬುರಗಿಯ ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಡಿಸಿ ಕಾಲಿಗೆ ಬಿದ್ದು ಮನವಿ ಮಾಡಿದ್ದಾರೆ. ಕಲಬುರಗಿಯ ಅಫಜಲಪುರದ ಮಣ್ಣೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ವೇಳೆ ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ವೇಳೆ ಸಂಸ್ರಸ್ಥರು, ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸಾವಿರ ವರ್ಷ ಆದ್ರೂ ಸಾವು ತಪ್ಪಲ್ಲ, ನಮ್ಮ ಮನೆ ಮುಳುಗೋದು ನಿಲ್ಲಲ್ಲ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿ, ಬೇರೆಡೆ ಸ್ಥಳಾಂತರ ಮಾಡುವಂತೆ ಡಿಸಿ ಕಾಲಿಗೆ ಬಿದ್ದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Health Tips: ಮೈಗ್ರೇನ್ ಉಪಶಮನಕ್ಕೆ ರೋಸ್‌ಮೆರಿ ಎಂಬ ಸುಗಂಧ ತೈಲ!
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಎರಡ್ಮೂರು ದಿನ ಕಳೆಯಲಿ, ಚರ್ಚೆ ಮಾಡೋಣ ಎಂದು ಸಂತ್ರಸ್ಥರನ್ನು ಸಮಾಧಾನ ಮಾಡಿದ್ದಾರೆ.