ಕಲಬುರಗಿಯಲ್ಲಿ ಕಾಯಂ ವಿಶೇಷ ಸಚಿವಾಲಯ ಸ್ಥಾಪನೆ
ಎರಡನೇ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಒತ್ತಾಯ
ಕಲಬುರಗಿ: ಕಲ್ಯಾಣ ಕರ್ನಾಟಕ(Kalyana karnataka) ಭಾಗದ ಸಮಗ್ರ ಕೈಗಾರಿಕಾ, ಆರ್ಥಿಕ ಹಾಗೂ ಮೂಲಸೌಕರ್ಯ ಪ್ರಗತಿಯನ್ನು ವೇಗಗೊಳಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಸಮರ್ಪಿತ "ಕಲ್ಯಾಣ ಕರ್ನಾಟಕ ಬೆಳವಣಿಗೆಯ ಮಿಷನ್" ಅನ್ನು ಪ್ರಾರಂಭಿಸಬೇಕು ಎಂದು ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(KKCCI) ಒತ್ತಾಯಿಸಿದೆ.
ಕಲ್ಯಾಣ ಕರ್ನಾಟಕ ಪ್ರವಾಸ ನಿಮಿತ್ತ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Chief Minister D K Shivkumar) ಅವರಿಗೆ ಮಂಗಳವಾರ ನಗರದ ಐವಾನ್-ಏ-ಶಾಹಿ ಅತಿಥಿ ಗೃಹದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ್ ಇಂಗಿನಶೆಟ್ಟಿ ಅವರು, 18 ಪ್ರಮುಖ ಬೇಡಿಕೆಗಳನ್ನೊಳಗೊಂಡ ಜ್ಞಾಪನಾ ಪತ್ರವನ್ನು ಸಲ್ಲಿಸಿದರು.
ಸಂವಿಧಾನದ 371(ಜೆ) ವಿಧಿಯ ವಿಶೇಷ ರಕ್ಷಣೆ ಇದ್ದಾಗ್ಯೂ ಈ ಭಾಗದ ಐತಿಹಾಸಿಕ ಹಿನ್ನಡೆಯನ್ನು ಸರಿಪಡಿಸಲು ಭವಿಷ್ಯದ ಸರ್ಕಾರಿ ಹೂಡಿಕೆಗಳಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿತು.
ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App
ಪ್ರಾದೇಶಿಕ ಯೋಜನೆಗಳ ತ್ವರಿತ ಅನುಷ್ಠಾನ ಹಾಗೂ ನಿಧಿಯ ಸಮರ್ಪಕ ಬಳಕೆಯ ಉಸ್ತುವಾರಿ ಗಾಗಿ ಕಲಬುರಗಿ ನಗರದಲ್ಲೇ "ಕಾಯಂ ವಿಶೇಷ ಸಚಿವಾಲಯ" ಸ್ಥಾಪಿಸಬೇಕು ಎಂದು ಚೇಂಬರ್ ಬಲವಾಗಿ ಆಗ್ರಹಿಸಿತು. ಜತೆಗೆ, ಕಲಬುರಗಿಯ 'ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್' ಮತ್ತು ಕಡೇಚೂರು ಕೈಗಾರಿಕಾ ಪ್ರದೇಶದ 'ಔಷಧ ಹಬ್' ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕೋರಲಾಯಿತು.
ನಗರದ ಕ್ಷಿಪ್ರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಟ್ರಾಫಿಕ್ ದಟ್ಟಣೆ ನಿಯಂತ್ರಣಕ್ಕಾಗಿ ಎರಡನೇ ಹೊರವರ್ತುಲ ರಸ್ತೆ, ಆಧುನಿಕ ಸ್ಯಾಟಲೈಟ್ ಬಸ್ ನಿಲ್ದಾಣಗಳು ಮತ್ತು ಹೊಸ ಎಪಿಎಂಸಿ ಯಾರ್ಡ್ ನಿರ್ಮಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕಲಬುರಗಿಯವರೆಗೆ ವಿಸ್ತರಿಸುವುದು ಮತ್ತು ಗೋವಿಂದರಾವ್ ಸಮಿತಿ ಶಿಫಾರಸುಗಳ ಜಾರಿಗೆ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡುವಂತೆ ಒತ್ತಾಯಿಸಿದರು. ಚೇಂಬರ್‌ನ ಬೇಡಿಕೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಇವುಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಿಯಾಂಡ್ ಬೆಂಗಳೂರು ಒತ್ತು ನೀಡಿ: ಸರಕಾರದ "ಬಿಯಾಂಡ್ ಬೆಂಗಳೂರು" ದೂರದೃಷ್ಟಿಯ ಅಡಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಹೊಸ ಐಟಿ ಪಾರ್ಕ್‌ಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಹಾಗೂ ವಿಶೇಷ ಆರ್ಥಿಕ ವಲಯಗಳನ್ನು (SEZ) ಸ್ಥಾಪಿಸಬೇಕು. ಮುಂಬರುವ ಹೊಸ ಎಂಎಸ್ಎಂಇ ನೀತಿಯಲ್ಲಿ ಈ ಭಾಗದ ಸಣ್ಣ ಕೈಗಾರಿಕೆಗಳಿಗೆ ವಿಶೇಷ ಬಂಡವಾಳ ಮತ್ತು ಬಡ್ಡಿ ಸಬ್ಸಿಡಿಯ ಪ್ಯಾಕೇಜ್ ಘೋಷಿಸಬೇಕು ಎಂದು ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಮನವಿ ಮಾಡಿದರು.