ಕಲಬುರಗಿ, ಅ.26: ಕಲಬುರಗಿ (Kalaburagi) ಜಿಲ್ಲೆಯ ಚಿತ್ತಾಪುರದಲ್ಲಿ (Chittapura) ಆರ್‌ಎಸ್‌ಎಸ್ ಪಥಸಂಚಲನ (RSS patha sanchalana) ವಿಚಾರ ಈಗಾಗಲೇ ಹೈಕೋರ್ಟ್ (Karnataka high court) ಕಟಕಟೆಯಲ್ಲಿದೆ. ಕಲಬುರಗಿ ಜಿಲ್ಲಾಡಳಿತಕ್ಕೆ ಅಕ್ಟೋಬರ್ 28ರಂದು ಶಾಂತಿ ಸಭೆ (Peace Meet) ನಡೆಸಿ ವರದಿ ನೀಡುವಂತೆ ಕೋರ್ಟ್ ಸೂಚಿಸಿದೆ. ಇದರ ಬೆನ್ನಲ್ಲೇ ಆರ್‌ಎಸ್‌ಎಸ್, ಭೀಮ್ ಆರ್ಮಿ ಸೇರಿ 10 ಸಂಘಟನೆಗಳಿಗೆ ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿದೆ.
ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಜಿಲ್ಲಾಡಳಿತ ಅಕ್ಟೋಬರ್ 28ರಂದು ಬೆಳಗ್ಗೆ 11.30ಕ್ಕೆ ಶಾಂತಿ ಸಭೆಗೆ ಆಹ್ವಾನಿಸಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ನಡೆಯಲಿದ್ದು, ಪ್ರತಿ ಸಂಘಟನೆಯಿಂದ ಮೂವರು ಸದಸ್ಯರು ಸಭೆಗೆ ಹಾಜರಾಗಿ ಲಿಖಿತ ಹೇಳಿಕೆ ಸಲ್ಲಿಸುವಂತೆ ಡಿಸಿ ಸೂಚಿಸಿದ್ದಾರೆ.
ಇದನ್ನೂ ಓದಿ: RSS procession: ನ.2ರಂದು ‘RSS’ ಪಥಸಂಚಲನಕ್ಕೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್
ಸದ್ಯ ರಾಜ್ಯದಲ್ಲಿ ಆರ್‌ಎಸ್‌ಎಸ್ ಸಂಘರ್ಷ ತಾರಕಕ್ಕೇರಿದೆ. ರಾಜ್ಯದ ನಾನಾ ಭಾಗದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಯುತ್ತಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ದಿನಕ್ಕೊಂದು ಡ್ರಾಮಾ ನಡೆಯುತ್ತಿದೆ. ಸದ್ಯ ಪಥಸಂಚಲನ ಮಾಡುವ ವಿಚಾರ ಕೋರ್ಟ್ ಕಟಕಟೆಯಲ್ಲಿದೆ.
ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 11 ಸಂಘಟನೆಗಳು ಅರ್ಜಿ
ಇತ್ತ ಆರ್‌ಎಸ್‌ಎಸ್ ಮಾತ್ರ ಚಿತ್ತಾಪುರದಲ್ಲಿ ಪಥಸಂಚಲನ ಮಾಡೇ ಮಾಡ್ತೀವಿ ಅಂತಾ ಸೆಡ್ಡು ಹೊಡೆದಿದೆ. ನಿನ್ನೆಯಷ್ಟೇ ಕಲ್ಲಡ್ಕ ಪ್ರಭಾಕರ್ ಭಟ್ ಅಬ್ಬರಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಮಾಡಲಿ ನೋಡೋಣ. ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 11 ಸಂಘಟನೆಗಳು ಅರ್ಜಿ ಹಾಕಿವೆ, ಕೋರ್ಟ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಇನ್ನೂ ಆರ್‌ಎಸ್‌ಎಸ್ ದೇವರಿಗಿಂತ ದೊಡ್ಡದಾಗಿ ಬಿಟ್ಟಿದೆಯಾ ಎಂದಿರುವ ಪ್ರಿಯಾಂಕ್ ಖರ್ಗೆ, ಮತ್ತೆ ದೇಣಿಗೆ ಎಲ್ಲಿಂದ ಬರುತ್ತೆ ಅಂತ ಪ್ರಶ್ನಿಸಿದ್ದಾರೆ. ಆ ಮೂಲಕ ಕಲಬುರಗಿ ಅಭಿವೃದ್ಧಿ ಬಗ್ಗೆ ಪ್ರಶ್ನೆ ಎತ್ತಿದ್ದ ಬಿಜೆಪಿಗೂ, ಕಲಬುರಗಿ ನೋಡಿದ್ದಾರಾ ಎಂದು ಕುಟುಕಿದ್ದಾರೆ.