ಕಲಬುರಗಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಕ್ರಮಗಳ ಪ್ರಕ್ರಿಯೆ ಯಲ್ಲಿ ಪ್ರಧಾನಿ ಮೋದಿ(PM Modi), ಅಮಿತ್ ಶಾ(Amith Shah) ಮತ್ತು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Election Commissioner Gyanesh Kumar) ಅವರುಗಳೇ ಪ್ರಮುಖ ಆರೋಪಿಗಳು ಎಂದು ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಹೇಳಿದ್ದಾರೆ.
ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕಾಂಗ್ರೆಸ್ ಕೇಳುತ್ತಿರುವ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರಿಸುವ ಬದಲು ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಬೇಕು. ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಕುರಿತು ಪ್ರಶ್ನಿಸುವುದು ತಪ್ಪೇ ಎಂದು ಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಹಾಗೂ ರಾಹುಲ್ ಗಾಂಧಿ(Rahul Gandhi) ಅವರು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಉತ್ತರ ನೀಡುತ್ತಿದ್ದಾರೆಯೇ ಹೊರತು ಚುನಾವಣಾ ಆಯೋಗ ಮೌನವಾಗಿದೆ. ಕಾಂಗ್ರೆಸ್ ಯಾವುದೇ ವಿಷಯ ಪ್ರಸ್ತಾಪಿಸಿದರೂ ತಕ್ಷಣ ಪ್ರತಿಕ್ರಿಯಿಸುತ್ತಿದ್ದ ಚುನಾವಣಾ ಆಯೋಗ, ಕಳೆದ ಒಂದೂವರೆ ತಿಂಗಳಿನಿಂದ ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದು ಟೀಕಿಸಿದರು.
ಸುಮಾರು 13.2 ಕೋಟಿ ಮತದಾರರನ್ನು ಯಾವುದೇ ಸಮರ್ಪಕ ಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಶೇ. 15ರಷ್ಟು ಮತದಾರರ ಹೆಸರುಗಳನ್ನು ತೆಗೆದು ಹಾಕಿರುವ ಕುರಿತು ಪ್ರಶ್ನಿಸುವುದು ತಪ್ಪೇ? ಚುನಾವಣಾ ಆಯೋಗದ ನಿರ್ಧಾರಗಳನ್ನು ಮೂವರು ಆಯುಕ್ತರು ಒಟ್ಟಾಗಿ ಕೈಗೊಳ್ಳಬೇಕಾದ ಸಂದರ್ಭದಲ್ಲಿ, ಇಬ್ಬರು ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ್ದರೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದೇಕೆ ಎಂದು ಪ್ರಶ್ನಿಸಿದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಫಾರ್ಮ್-7 ಅರ್ಜಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ಬಿಜೆಪಿ(BJP) ಮತ್ತು ಆರ್ಎಸ್ಎಸ್ (RSS) ಕಾರ್ಯಕರ್ತರು ಅರ್ಜಿಗಳನ್ನು ಸಲ್ಲಿಸಿ ಮತದಾರರ ಹೆಸರುಗಳನ್ನು ತೆಗೆಸಲು ಪ್ರಯತ್ನಿಸಿ ದ್ದಾರೆ. ವಿಜಯಪುರದಲ್ಲಿ ಮೃತಪಟ್ಟಿದ್ದಾರೆ ಎಂದು ಸುಳ್ಳು ದೂರು ನೀಡಿರುವುದು ಹಾಗೂ ಚಿತ್ತಾಪುರದಲ್ಲಿ ಒಂದು ಸಮುದಾಯದ 40 ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಯತ್ನಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಆರೋಪಿಸಿದರು.
ಚಿತ್ತಾಪುರದಲ್ಲಿ ಪರಿಶೀಲನೆ ನಡೆಸಿದಾಗ ಸಂಬಂಧಪಟ್ಟ ಮತದಾರರು ಅಲ್ಲಿಯೇ ವಾಸವಾಗಿದ್ದು, ಸ್ಥಳಾಂತರಗೊಂಡಿಲ್ಲ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಬೇಕು ಎಂದು ಸೂಚಿಸಿದ್ದರು ಎಂದು ತಿಳಿಸಿದರು.
ಚುನಾವಣಾ ಆಯೋಗದ ಸಾಫ್ಟ್ವೇರ್ ಬದಲಾಯಿಸಿದ್ದು ಯಾರು? ಲಾಗಿನ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ದುರುಪಯೋಗಕ್ಕೆ ಅವಕಾಶ ಕಲ್ಪಿಸಿದ್ದು ಯಾರು? ಫಾರ್ಮ್-6 ಪ್ರಕ್ರಿಯೆ ಯಲ್ಲಿ ಬದಲಾವಣೆ ತಂದವರು ಯಾರು? ಇಸಿಐನ ಇರೋನೆಟ್ ಜಾಲತಾಣದಲ್ಲಿ ಬದಲಾವಣೆ ಮಾಡಲು ಅನುಮತಿ ನೀಡಿದವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದು ಹೇಳಿದರು.
ಎಸ್ಐಆರ್(SIR) ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ಅವರನ್ನು ಆರೋಪಿಗಳೆಂದು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಮತದಾರರ ಪಟ್ಟಿ ಪರಿಷ್ಕರಣೆ ಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆಯಾಗಬೇಕು. ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರು ಈ ವಿಷಯದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಪಿಯೂಷ್ ಗೋಯಲ್ ಅವರು ಈ ಹಿಂದೆ ಬೀದಿಗೆ ಇಳಿದು ಪ್ರತಿಭಟನೆಗಳಲ್ಲಿ ಭಾಗವಹಿಸಿ ರುವ ಉದಾಹರಣೆ ಇಲ್ಲ. ಈಗ ಅವರು ಬೀದಿಗಿಳಿದಿರುವುದು ಎಲ್ಲವೂ ಬಹಿರಂಗ ವಾಗುತ್ತಿದೆ ಎನ್ನುವು ತೋರಿಸುತ್ತದೆ ಎಂದು ಟೀಕಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ವಿದೇಶಿ ಹಣಕಾಸು ನೆರವು ಹಾಗೂ ಅವರ ಹಿಂದೆ ವಿದೇಶಿ ಕೈವಾಡವಿದೆ ಎಂಬ ಆರೋಪಗಳನ್ನು ಮಾಡುವವರು ಅದಕ್ಕೆ ಪುರಾವೆ ನೀಡಬೇಕು. ಸರ್ಕಾರ ನಿಮ್ಮದೇ ಇರುವಾಗ ಯಾಕೆ ದಾಖಲೆಗಳು ನೀಡುತ್ತಿಲ್ಲ ಎಂದು ಸವಾಲು ಹಾಕಿದರು.
ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್(BJP MLC N Ravikumar) ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ಇವರು ಖರ್ಗೆ ಅವರ ರಾಜಕೀಯ ವಯಸ್ಸಿನಷ್ಟು ತಮ್ಮ ವಯಸ್ಸಿದೆ ಎನ್ನುವುದನ್ನು ಮರೆಯಬಾರದು. ತಮ್ಮ ರಾಜಕೀಯ ಗುರು ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರು ಗೆದ್ದಾಗ ಮತದಾನ ವ್ಯವಸ್ಥೆಯ ಬಗ್ಗೆ ಪ್ರಶ್ನಿಸುವುದಿಲ್ಲ. ತಾವು ಗೆದ್ದರೂ ಐಟಿ-ಬಿಟಿ ಸಚಿವನಾಗಿ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗಾಗಿ ಎಥಿಕಲ್ ಹ್ಯಾಕಥಾನ್(Ethical hackathon) ನಡೆಸುವಂತೆ ಹೇಳಿದ್ದೇನೆ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.
ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಸೋತರೆ ಅದು 2028ರ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಾರಾಣಸಿ ಹಾಗೂ ನಾಗಪುರದಲ್ಲಿಯೂ ಮೋದಿ ಅವರು ಸೋತಿದ್ದಾರೆ. ಹಾಗಾದರೆ ಅದನ್ನು ಮುಂದಿನ ಚುನಾವಣೆಯ ದಿಕ್ಸೂಚಿ ಎನ್ನಬಹುದೇ? ಬ್ಯಾಲೆಟ್ ಪೇಪರ್(Ballot Paper) ನಲ್ಲಿ ಗೆಲ್ಲುವವರು ಮುಂದಿನ ಚುನಾವಣೆಯನ್ನೂ ಬ್ಯಾಲೆಟ್ ಪೇಪರ್ನಲ್ಲೇ ಎದುರಿಸಲಿ ಎಂದು ಸವಾಲು ಹಾಕಿದರು.
ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದನೆ: ಈ ವರ್ಷ ಮಳೆಯ ಪ್ರಮಾಣದಲ್ಲಿ ಕೊರತೆಯಾಗಿದ್ದು, ನದಿ ಹಾಗೂ ಜಲಮೂಲಗಳು ಬತ್ತಿಹೋಗಿವೆ. ಜಿಲ್ಲೆಯ 11 ತಾಲೂಕುಗಳು ಬರ ಘೋಷಣೆ ಯಾಗಿದ್ದು, ಗ್ರೌಂಡ್ ಟ್ರೂಥ್ ನಡೆಯುತ್ತಿದೆ. ಬೆಳೆ ನಷ್ಟದ ಕುರಿತು ಜಂಟಿ ಸಮೀಕ್ಷೆ ನಡೆಸ ಲಾಗುತ್ತಿದೆ. ಬೆಳೆ ವಿಮೆ ಮತ್ತು ಪರಿಹಾರ ವಿತರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ರಾಜ್ಯ ಸಲಹಾ ಬೆಲೆ (ಎಸ್ಎಪಿ) ನೀಡುವ ಪ್ರಕ್ರಿಯೆ ಇದೆ. ರೈತರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಅವರು ರೈತರೊಂದಿಗೆ ಚರ್ಚೆ ನಡೆಸಿದ್ದಾರೆ. ರೈತರ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ(Pralhad Joshi) ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದವರು ಈಗ ರೈತರ ಸಮಸ್ಯೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ರೈತರ ಪ್ರತಿಭಟನೆ ಸ್ಥಳಕ್ಕೆ ಕೇಂದ್ರದ ಯಾವ ಸಚಿವರು ಭೇಟಿ ನೀಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರವೇ ಹಣ ಭರಿಸಬೇಕಾದ ಪರಿಸ್ಥಿತಿ ಇದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ರಾಜ್ಯದ ಮೇಲಿನ ಆರ್ಥಿಕ ಹೊರೆ ಕುರಿತು ಚರ್ಚೆಯಾ ಗಬೇಕು. ರೈತರ ಬೆಳೆ ವಿಮೆ, ಬೆಂಬಲ ಬೆಲೆ ಹಾಗೂ ಪರಿಹಾರ ವಿಚಾರಗಳಲ್ಲಿ ಕೇಂದ್ರ ಸರ್ಕಾರವೂ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಬಯೋ ಎಕಾನಮಿ ಯೋಜನೆಗೆ ಚಾಲನೆ ನೀಡಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಡ್ರೋನ್ ಮೂಲಕ ಔಷಧ ಸಿಂಪಡಣೆ ಸೇರಿದಂತೆ ಹೊಸ ಪ್ರಯೋಗಗಳನ್ನು ಕಲಬುರಗಿಯಲ್ಲಿ ಕೈಗೊಳ್ಳಲಾಗು ತ್ತಿದೆ ಎಂದು ಹೇಳಿದರು.
ಭೀಮಾ ನದಿಯಿಂದ 15 ಟಿಎಂಸಿ ನೀರಿಗೆ ಕ್ರಮ:
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಜಲಮೂಲಗಳು ಬತ್ತಿಹೋಗಿದ್ದು, ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಮಹಾರಾಷ್ಟ್ರದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ನೀರು ಬಿಡುವುದಾಗಿ ಅಲ್ಲಿನವರು ಭರವಸೆ ನೀಡಿದ್ದಾರೆ. ಯಾವಾಗ ನೀರು ಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಪ್ರತಿ ತಾಲೂಕಿಗೆ ₹1 ಕೋಟಿ ಅನುದಾನ ನೀಡಲಾಗುತ್ತಿದ್ದು, ಕೊಳವೆಬಾವಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಭೀಮಾ ನದಿ ನೀರಿನ ಹಂಚಿಕೆ ವಿಚಾರವನ್ನು ಸರ್ವಪಕ್ಷ ನಿಯೋಗದ ಮೂಲಕವೂ ಪ್ರಸ್ತಾಪಿಸಲಾಗಿದೆ. ಮುಂದಿನ ಕಾನೂನು ಕ್ರಮಗಳ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಎಚ್ಎಂಟಿ, ಎನ್ಎಎಲ್, ಉಕ್ಕಿನ ಕಾರ್ಖಾನೆ, ಎಚ್ಎಎಲ್ ಹಾಗೂ ಡಿಆರ್ಡಿಒದಂತಹ ಸಂಸ್ಥೆಗಳ ಸ್ಥಾಪನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಈಗ ಕುಮಾರಸ್ವಾಮಿ ಅವರು ಎಚ್ಎಂಟಿ ಕಂಪೆನಿಯ ಎರಡು ಹೊಸ ವಾಚ್ ತರುವುದನ್ನೇ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವರಾಗಿರುವ ಅವರು ರಾಜ್ಯಕ್ಕೆ ಕೈಗಾರಿಕೆ ಸ್ಥಾಪನೆ ಮಾಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಮುಂದುವರೆದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮ ಇಲಾಖೆಯಿಂದ 11 ನೀತಿಗಳನ್ನು ಜಾರಿಗೆ ತಂದಿದ್ದೇನೆ. ಆದರೆ ಅವರು ಸ್ಟಿಂಗ್ ಪ್ರಕರಣ ತಂದು ನಿಜ ಹೊರಗಡೆ ಬರಬೇಕು ಎಂದು ಹೇಳಿದ್ದರು. ಪ್ರಕರಣದಲ್ಲಿ ಬಂಧಿಸಿ ನಿಜ ಹೊರಬಂದಾಗ ಪಾದಯಾತ್ರೆ ಮಾಡುವುದೇಕೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.