ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಸಿಮೆಂಟ್ ಕಾರ್ಖಾನೆಯೊಂದರ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿತ್ತು. ಇದೀಗ ಈ ಹತ್ಯೆಗೆ (Murder Case) ಕಾರಣವೇನು ಎಂಬುವುದು ತಿಳಿದುಬಂದಿದೆ. ಸಹೋದರನ ಆತ್ಮಹತ್ಯೆಗೆ ಪ್ರತೀಕಾರವಾಗಿ ಆರೋಪಿಯು, ಏನೂ ಅರಿಯದ, ಜೀವನದಲ್ಲಿ ಬಾಳಿ ಬದುಕಬೇಕಾದ ಯುವತಿಯನ್ನು ಬರ್ಬರ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ರಾಜಶ್ರೀ ಕಾರ್ಖಾನೆಯ ಕಾರ್ಮಿಕ ಸಂಘದ (ಸಿಐಟಿಯು) ಅಧ್ಯಕ್ಷ ಚನ್ನವೀರಪ್ಪ ಸೂಲಹಳ್ಳಿ ಅವರ ಪುತ್ರಿ ಭಾಗ್ಯಶ್ರೀ ಸುಲಹಳ್ಳಿ (21) ಸೆ.11ರಂದು ಸಂಜೆ ಕಾಣೆಯಾಗಿದ್ದಳು. ಈ ಕುರಿತು ಮಳಖೇಡ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುಮಾರು ಒಂದು ವಾರದ ಬಳಿಕ ಕಾರ್ಖಾನೆಯ ಗಾರ್ಡನ್ ಬಳಿಯ ಕಾಲುವೆಯಲ್ಲಿ ಯುವತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿನಿ ಭಾಗ್ಯಶ್ರೀ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿ, ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಬಿಇ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಳು.
ಭಾಗ್ಯಶ್ರೀ ಸಾವು ಸಹಜವಲ್ಲ ಯಾರೋ ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ, ಮಳಖೇಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಸೆಪ್ಟೆಂಬರ್ 11 ರಂದು ತನ್ನ ಅಕ್ಕನ ಜತೆ ಪ್ರತಿನಿತ್ಯದಂತೆ ರಾತ್ರಿ 8 ಗಂಟೆಗೆ ಯುವತಿ ಭಾಗ್ಯಶ್ರೀ ವಾಕಿಂಗ್ ಹೋಗಿದ್ದಳು. ಈ ವೇಳೆ ಈಕೆಯ ಅಕ್ಕ ಕಿರಾಣಿ ಅಂಗಡಿಗೆ ದಿನಸಿ ತರಲು ಹೋಗಿ ಬರುವಷ್ಟರಲ್ಲಿ ಭಾಗ್ಯಶ್ರೀ ನಾಪತ್ತೆಯಾಗಿದ್ದಳು. ಪೊಲೀಸರು ಈಕೆಯ ಹುಡುಕಾಟ ನಡೆಸುತ್ತಿರುವಾಗಲೇ ಮಳಖೇಡದ ಸಿಮೆಂಟ್ ಕಾರ್ಖಾನೆ ಪಕ್ಕದಲ್ಲಿನ ನಾಲೆಯಲ್ಲಿ ಭಾಗ್ಯಶ್ರೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹೊಡೆದು ಕೊಲೆ ಮಾಡಿರುವ ಅಂಶ ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು.
ಈ ಸುದ್ದಿಯನ್ನೂ ಓದಿ | Murder Case: 72 ವರ್ಷದ ಇಳಿ ವಯಸ್ಸಿನಲ್ಲಿ ಮದುವೆ ಕನಸು; ಭಾರತಕ್ಕೆ ಬಂದ ವಿದೇಶಿ ವೃದ್ಧೆಯ ಅಸ್ಥಿ ಚರಂಡಿಯಲ್ಲಿ ಪತ್ತೆ!
ಒಂದು ತಿಂಗಳ ಹಿಂದೆ ಕೊಲೆ ಆರೋಪಿಯ ಸಹೋದರ ವಿನೋದ್ ಸಿಮೆಂಟ್ ಕಾರ್ಖಾನೆಯಲ್ಲಿ ನೌಕರಿ ಕಾಯಂ ಆಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ಕಾರ್ಖಾನೆಯಲ್ಲಿ ಯೂನಿಯನ್ ಲೀಡರ್ ಆಗಿದ್ದ ಭಾಗ್ಯಶ್ರೀ ತಂದೆ ವಿನೋದ್ ನೌಕರಿ ಕಾಯಂ ಆಗದಂತೆ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿಗೆ ಪ್ರತೀಕಾರವಾಗಿ ಚೆನ್ಮಬಸಪ್ಪ ಅವರ ಪುತ್ರಿ ಭಾಗ್ಯಶ್ರೀಯನ್ನು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ಬಾಯಿ ಬಿಟ್ಟಿದ್ದಾನೆ.