ಕಮಲಾಪುರ: ಪೊಲೀಸ್ ಇಲಾಖೆಯ ಪೇದೆ ರಾಜಶೇಖರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಎರಡು ಪ್ರತ್ಯೇಕ ಪ್ರಕರಣಗಳು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಗೃಹಿಣಿಯೊಬ್ಬರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ ಆರೋಪದ ಬೆನ್ನಲ್ಲೇ, ಮಹಾಗಾಂವ ಪಿಎಸ್‌ಐ ಬಸವರಾಜ ಚಿತ್ತಕೋಟೆ ಅವರ ಕಾರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಸಿಸಿ ಕ್ಯಾಮೆರಾ ದೃಶ್ಯಗಳ ಪರಿಶೀಲನೆಯಿಂದ ಬಹಿರಂಗವಾಗಿದೆ.
ಸೆ.13ರಂದು ಸಂಜೆ ರೇಷ್ಮಾ ಎಂಬ ಗೃಹಿಣಿಯ ಮನೆಗೆ ನುಗ್ಗಿದ ರಾಜಶೇಖರ್, ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿ ಬೆಂಕಿ ಹಚ್ಚಿದ್ದಾನೆ ಎಂಬ ಆರೋಪವಿದೆ. ಘಟನೆ ಸಂಬಂಧ ಗೃಹಿಣಿ ನೀಡಿದ ದೂರಿನ ಮೇರೆಗೆ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಾದ ಕೆಲವೇ ಹೊತ್ತಿನಲ್ಲಿ ಪಿಎಸ್‌ಐ ಬಸವರಾಜ ಚಿತ್ತಕೋಟೆ ಅವರ ಕಾರಿಗೆ ಬೆಂಕಿ ಹೊತ್ತಿ ಕೊಂಡಿತ್ತು. ಕಾರನ್ನು ಖಾಸಗಿ ಕೊಠಡಿಯ ಎದುರು ನಿಲ್ಲಿಸಲಾಗಿತ್ತು. ಆರಂಭದಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದ್ದು, ಆತ ರಾಜಶೇಖರ್ ಎಂದು ಗುರುತಿಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ಸೆ.14ರಂದು ಮತ್ತೊಂದು ಪ್ರಕರಣ ದಾಖಲಾಗಿದೆ.
ರಾಜಶೇಖರ್ ಈ ಹಿಂದೆ ಗೃಹಿಣಿಯ ಮನೆಗೆ ತೆರಳಿ ಕಿರುಕುಳ ನೀಡಿದ್ದಾನೆ ಎಂಬ ದೂರು ಠಾಣೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಂಡು ಕೆಲ ದಿನಗಳ ಹಿಂದೆ ಆತನನ್ನು ಚಿಂಚೋಳಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಗೃಹಿಣಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಆಕ್ರೋಶಗೊಂಡು ಪಿಎಸ್‌ಐ ಅವರ ಕಾರಿಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕಮಲಾಪುರ ಸಿಪಿಐ ಶಿವಶಂಕರ ಸಾಹು ಹಾಗೂ ಮಹಾಗಾಂವ ಪಿಎಸ್‌ಐ ಬಸವರಾಜ ಚಿತ್ತಕೋಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಪ್ರಕರಣಗಳ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.