ನವದೆಹಲಿ: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಪ್ರಕಟವಾಗಿದ್ದು, ಕೊಡಗು ಜಿಲ್ಲೆ ಮಡಿಕೇರಿಯ ಯಶೋದ ಪ್ರಕಾಶ್ ಕೊಟ್ಟುಕತ್ತೀರ ಅವರು ನಿರ್ಮಿಸಿ, ನಿರ್ದೇಶಿಸಿರುವ 'ಕಂದೀಲು' ಚಿತ್ರವು (Kandeelu kannada film) ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದಿದೆ. ಇನ್ನು ಬೆಸ್ಟ್ ಸ್ಕ್ರಿಪ್ಟ್ (ನಾನ್ ಫೀಚರ್ ಫಿಲ್ಮ್) ವಿಭಾಗದಲ್ಲಿ ಮೈಸೂರಿನ ಚಿದಾನಂದ ನಾಯಕ್ ಅವರ ನಿರ್ದೇಶನದ ಕಿರುಚಿತ್ರ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ (Sunflowers Were the First Ones to Know) ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಘೋಷಣೆ ಮಾಡಿದ್ದಾರೆ.
ಮಡಿಕೇರಿ ನಿವಾಸಿಯಾಗಿರುವ ಯಶೋದ ಪ್ರಕಾಶ್ ಕೊಟ್ಟುಕತ್ತೀರ ಅವರು ಜಿಲ್ಲೆಯ ಏಕೈಕ ಮಹಿಳಾ ನಿರ್ದೇಶಕರಾಗಿದ್ದಾರೆ. ಇಲ್ಲಿಯವರೆಗೂ ಅನೇಕ ಸಿನಿಮಾಗಳ ನಿರ್ದೇಶನ ಹಾಗೂ ನಿರ್ಮಾಣವನ್ನು ಅವರು ಮಾಡಿದ್ದಾರೆ. ಕನ್ನಡ ಚಿತ್ರೋದ್ಯದ್ಯಮದಲ್ಲಿ ಸಕ್ರಿಯರಾಗಿರುವ ಅವರು, ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ.
'ಕಂದೀಲು' ಗ್ರಾಮವೊಂದರ ಕಥೆಯಾಗಿದ್ದು, ರೈತ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಈ ಸಿನಿಮಾ ಹಲವರ ಜೀವನಾಧಾರಿತ ಕಥೆಯಿಂದ ಪ್ರೇರಣೆ ಪಡೆದಿದೆ. ಅನೇಕ ಸವಾಲುಗಳ ನಡುವೆ ಬದುಕು ಎಷ್ಟು ಮಹತ್ವದ್ದು ಎಂಬುದನ್ನು ಅನೇಕ ಅಯಾಮಾಗಳಲ್ಲಿ ಚಿತ್ರ ವಿವರಿಸಲಿದೆ.
ಈ ಸುದ್ದಿಯನ್ನೂ ಓದಿ | 71st National Film Awards 2023: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಘೋಷಣೆ; ಅತ್ಯುತ್ತಮ ನಟ ಅವಾರ್ಡ್ ಪಡೆದ ಶಾರುಖ್ ಖಾನ್, ವಿಕ್ರಾಂತ್ ಮಾಸ್ಸಿ
ಕನ್ನಡದ ಕಿರುಚಿತ್ರಕ್ಕೆ ಬೆಸ್ಟ್ ಸ್ಕ್ರಿಪ್ಟ್ ಪ್ರಶಸ್ತಿ
ಇನ್ನು ಮೈಸೂರಿನ ಚಿದಾನಂದ ನಾಯಕ್ ಅವರ 'ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ' ಕಿರುಚಿತ್ರವು ಬೆಸ್ಟ್ ಸ್ಕ್ರಿಪ್ಟ್‌ಗಾಗಿ ಪ್ರಶಸ್ತಿ ಪಡೆದುಕೊಂಡಿದೆ. ಇದು ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ 'ಲಾ ಸಿನೆಫ್ ಪ್ರಶಸ್ತಿ' ಮುಡಿಗೇರಿಸಿಕೊಂಡಿತ್ತು. ಇದೀಗ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.
ಕನ್ನಡ ಜಾನಪದ ಕಥೆ ಆಧರಿಸಿ ಮಾಡಿರುವ ಈ ಕಿರುಚಿತ್ರದಲ್ಲಿ ಅಜ್ಜಿಯೊಬ್ಬಳು ಹಳ್ಳಿಯಲ್ಲಿದ್ದ ಹುಂಜ ಕದಿಯುತ್ತಾಳೆ. ಆ ಬಳಿಕ ಆ ಊರಿನಲ್ಲಿ ಸೂರ್ಯೋದಯವೇ ಆಗುವುದಿಲ್ಲ. ಆಗ ಆ ಊರಿನವರು ಏನು ಮಾಡುತ್ತಾರೆ ಎಂಬುದೇ ಚಿತ್ರದ ಕಥೆಯಾಗಿದೆ.
ಫೀಚರ್ ಫಿಲಂ ವಿಭಾಗದಲ್ಲಿ ಆಶುತೋಷ್ ಗೋವರಿಕರ್, ನಾನ್ ಫೀಚರ್ ಫಿಲಂ ವಿಭಾಗದ ಮುಖ್ಯ ತೀರ್ಪುಗಾರರಾಗಿ ಪಿ ಶೇಷಾದ್ರಿ ಅವರು, ನೂರಾರು ಸಿನಿಮಾಗಳನ್ನು ವೀಕ್ಷಿಸಿ ಅವುಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ವಿಭಾಗಾನುಸಾರ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಪ್ರತಿ ಪ್ರಾದೇಶಿಕ ಭಾಷೆಯಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಕನ್ನಡ ಸೇರಿ ಒಟ್ಟು 13 ಪ್ರಾದೇಶಿಕ ಭಾಷೆಗಳ 13 ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಘೋಷಿಸಲಾಗಿದೆ.