ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Budget 2025: ಸದನದಲ್ಲಿ ವಚನ, ಕವನಗಳ ಕಲರವ...! ಸಿದ್ದು ಬಜೆಟ್‌ ವಿಶೇಷತೆಯೇ ಇದು

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 16ನೆ ಬಜೆಟ್​ ಮಂಡನೆ ಮಾಡಿದ್ದಾರೆ. ಆಯವ್ಯಯ​ ಬಜೆಟ್​ ಗಾತ್ರ 4,09,549 ಕೋಟಿ ರೂಪಾಯಿ ಇದೆ. ಕುವೆಂಪು ಕವನದ ಜೊತೆಗೆ ಬಜೆಟ್‌ ಮಂಡನೆ ಆರಂಭಿಸಿದ ಸಿಎಂ, ಬಜೆಟ್‌ ನಡು ನಡುವೆ ಕವನ , ವಚನಗಳನ್ನು ವಾಚಿಸುವ ಮೂಲಕ ಎಲ್ಲರ ಗಮನ ಸೆಳೆದರು. ಹಾಗಿದ್ದರೆ ಯಾವ ಕವಿ ಪುಂಗವರ ಕವನ, ವಚನಗಳು ಸದನದಲ್ಲಿ ಮೇಳೈಸಿದವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕವನ, ವಚನಗಳ ಜೊತೆಗೆ ಸಿದ್ದು ಬಜೆಟ್‌ ಮಂಡನೆ

Profile Rakshita Karkera Mar 7, 2025 2:23 PM

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ ಮಂಡನೆ(Karnataka Budget 2025) ಮಾಡಿದ್ದಾರೆ. ಕುವೆಂಪು ಕವನದ ಜೊತೆಗೆ ಬಜೆಟ್‌ ಮಂಡನೆ ಆರಂಭಿಸಿದ ಸಿಎಂ, ಬಜೆಟ್‌ ನಡು ನಡುವೆ ಕವನ , ವಚನಗಳನ್ನು ವಾಚಿಸುವ ಮೂಲಕ ಎಲ್ಲರ ಗಮನ ಸೆಳೆದರು. ಗೋಪಾಲ ಕೃಷ್ಣ ಅಡಿಗ, ಕುಮಾರವ್ಯಾಸ, ವಿಲ್ಸನ್‌ ಕಟೀಲ್, ಸಾವಿತ್ರಿಬಾಯಿ ಪುಲೆ, ಕೆ. ಎಸ್‌. ನಿಸಾರ್‌ ಅಹಮದ್ ಹೀಗೆ ಹಲವರ ಕವನ, ವಚನಗಳನ್ನು ಹೇಳುವ ಮೂಲಕವೇ ಒಂದೊಂದು ವಿಚಾರವನ್ನು ಸದನದ ಮುಂದಿಟ್ಟರು. ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ವಾಚಿಸಿದ ಕವನ, ವಚನಗಳಾವುವು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಸ್‌

ರಾಷ್ಟ್ರಕವಿ ಕುವೆಂಪು ಹಾಗೂ ಗೋಪಾಲಕೃಷ್ಣ ಅಡಿಗರ ಕವನಗಳ ಸಾಲುಗಳನ್ನು ಉಲ್ಲೇಖಿಸುತ್ತಲೇ ಬಜೆಟ್‌ ಮಂಡನೆ ಆರಂಭಿಸಿದ ಸಿದ್ದರಾಮಯ್ಯ, "ನಮ್ಮ ಕೈಬುಟ್ಟಿಯಲಿ ಸಿಡಿಲ ಗೂಡಿಹುದು, ಹುಡುಕಿ ನೋಡಿದರಲ್ಲಿ ಸುಮದ ಬೀಡಿಹುದು" ಎಂಬ ಕುವೆಂಪು ಸಾಲನ್ನು ವಾಚಿಸಿದರು. ಜೊತೆಗೆ "ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ, ಸಮಬಗೆಯ ಸಮಸುಖದ ಸಮದುಃಖದ ಸಾಮರಸ್ಯದ ಸಾಮಗಾನ ಲಹರಿಯ ಮೇಲೆ, ತೇಲಿ ಬರಲಿದೆ ನೋಡು ನಮ್ಮ ನಾಡು" ಎಂಬ ಗೋಪಾಲಕೃಷ್ಣ ಅಡಿಗರ ಸಾಲುಗಳನ್ನು ಅವರು ನೆನಪಿಸಿಕೊಂಡರು.

ಇನ್ನು ಕೃಷಿ ಮತ್ತು ತೋಟಗಾರಿಗೆ ಬಗ್ಗೆ ಪ್ರಸ್ತಾಪಿಸುವ ಮುನ್ನ ಸಿದ್ದರಾಮಯ್ಯ ಅವರು ಕುಮಾರವ್ಯಾಸನ "ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದು ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸುವುದು" ಎಂಬ ವಚನವನ್ನು ವಾಚಿಸಿದರು. ಇದಾದ ಬಳಿಕ ಅವರು ನೀರಾವರಿ ಇಲಾಖೆ ಬಗ್ಗೆ ಮಾತನಾಡುವಾಗ ಸಾಹಿತಿ ವಿಲ್ಸನ್‌ ಕಟೀಲ್ ಬರೆದಿರುವ "ಹಾ! ಗಂಟಲು ಒಣಗಿದೆ!! ತಕೋ ಈ ಬಂಗಾರದ ಸರಪಳಿ ಬದಲಾಗಿ, ಒಂದು ಗುಟುಕು ನೀರು ಕೊಡು" ಎಂಬ ಕವನದ ಜೊತೆ ಮಾತನ್ನು ಆರಂಭಿಸಿದ್ದರು.

ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಬಗೆಗಿನ ಪ್ರಸ್ತಾಪವನ್ನು ಸಾವಿತ್ರಿಬಾಯಿ ಪುಲೆ ಅವರ "ಶೋಷಿತರ ಬಹಿಷ್ಕೃತರ ಕಣ್ಣೀರನ್ನು ತೊಡೆದು ಹಾಕು, ಜಾತಿವ್ಯವಸ್ಥೆ ಸಂಕೋಲೆಯನ್ನು ಮುರಿದು ಶಿಕ್ಷಣ ಪಡೆದುಕೋ…" ಎಂಬ ಕವನದ ಮೂಲವೇ ಪ್ರಾರಂಭಿಸಿದರು. ಅಲ್ಪಸಂಖ್ಯಾತರ ಕಲ್ಯಾಣ‌ ಇಲಾಖೆಗೆ ಬಗ್ಗೆ ಪ್ರಸ್ತಾಪಿಸುವಾಗ ಕವಿ ಕೆ. ಎಸ್‌. ನಿಸಾರ್‌ ಅಹಮದ್ ಬರೆದಿರುವ "ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ, ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ" ಎಂಬ ಕವನವನ್ನು ಸಿದ್ದರಾಮಯ್ಯ ವಾಚಿಸಿದರು. ಇದರ ಜೊತೆಗೆ ವಚನಕಾರ ನುಲಿಯ ಚಂದಯ್ಯ ಬರೆದಿರುವ "ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ... ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು...ಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದು" ವಚನವನ್ನೂ ವಾಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Karnataka Budget 2025: ಸಹಕಾರ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

ಇನ್ನು ಸಂಪೂರ್ಣ ಬಜೆಟ್‌ ಮಂಡನೆ ನಂತರ ಸಿದ್ದರಾಮಯ್ಯ ಅವರು ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣ ಅವರ "ಆನೆಯನೇರಿಕೊಂಡು ಹೋದಿರೇ ನೀವು..ಕುದುರೆಯನೇರಿಕೊಂಡು ಹೋದಿರೇ ನೀವು...ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ..ಸತ್ಯದ ನಿಲುವನರಿಯದೆ ಹೋದಿರಲ್ಲಾ" ಎಂಬ ವಚನವನ್ನು ವಾಚಿಸಿ ತಮ್ಮ ಮಾತಿಗೆ ವಿರಾಮ ಹಾಕಿದರು.