Karnataka Budget 2025: ಜನರ ಮೇಲೆ ಆರ್ಥಿಕ ಹೊರೆ ಹೇರುವ ಜನ ವಿರೋಧಿ ಬಜೆಟ್: ಬಸವರಾಜ ಬೊಮ್ಮಾಯಿ ಆರೋಪ
Karnataka Budget 2025: 2025-26 ರ ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆ, ಆರ್ಥಿಕ ಸಬಲೀಕರಣದತ್ತ ರಾಜ್ಯವನ್ನು ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ. ಇದೊಂದು ಮತ್ತೊಂದು ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನ ವಿರೋಧಿ ನಿರಾಶಾದಾಯಕ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ 25-26 ರ ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆ, ಆರ್ಥಿಕ ಸಬಲೀಕರಣದತ್ತ ರಾಜ್ಯವನ್ನು ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ. ಇದೊಂದು ಮತ್ತೊಂದು ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನ ವಿರೋಧಿ ನಿರಾಶಾದಾಯಕ ಬಜೆಟ್ (Karnataka Budget 2025) ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ. ರಾಜ್ಯ ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ಬಜೆಟ್‌ನಲ್ಲಿ ಹೇಳಿರುವುದಕ್ಕೂ ಮಾಡಿರುವುದಕ್ಕೂ ಬಹಳ ವ್ಯತ್ಯಾಸ ಇದೆ. ಕಳೆದ ವರ್ಷ ಒಟ್ಟು ಆದಾಯ 3,68,674 ಕೋಟಿ ಬಜೆಟ್‌ನಲ್ಲಿ ಹೇಳಿದ್ದು ಈಗ ಅದು 3,58,657 ಕೋಟಿ. ಹತ್ತು ಸಾವಿರ ಕೋಟಿ ಕಡಿಮೆ ಆದಾಯವನ್ನು ರಾಜ್ಯ ಸಾಧಿಸಿದೆ. ಎರಡನೇಯದಾಗಿ ಕಳೆದ ವರ್ಷ ಬಜೆಟ್‌ನಲ್ಲಿ ಒಟ್ಟು ವೆಚ್ಚ 3,71,383 ಕೋಟಿ ಎಂದು ಬಜೆಟ್‌ನಲ್ಲಿ ಹೇಳಿದ್ದು ಅದು ಬಜೆಟ್ 3,65,865 ಕೋಟಿಗೆ ಇಳಿಸಲಾಗಿದೆ ಅದರಲ್ಲಿಯೂ ಬಂಡವಾಳ ವೆಚ್ಚ ಕುಸಿದಿದೆ. ಅಂದರೆ 2024-25 ಅಭಿವೃದ್ಧಿಯ ದರದಲ್ಲಿ ಕುಂಠಿತವಾಗಿದೆ ಎಂದು ದೂರಿದ್ದಾರೆ.
ಈ ವರ್ಷದ ಬಜೆಟ್‌ನಲ್ಲಿ ವಿತ್ತೀಯ ಕೊರತೆ 2.95 ಅಂತ ಬಜೆಟ್‌ನಲ್ಲಿ ತೋರಿಸಿದ್ದು ವಾಸ್ತವಿಕವಾಗಿ ನಮ್ಮ ಜಿಎಸ್‌ಡಿಪಿಯ ಶೇ 3% ಕ್ಕಿಂತ ಹೆಚ್ಚಿಗೆ ಆಗುವುದು ನಿಶ್ಚಿತ. ಇದು ಕೇವಲ ಅಂಕಿ ಅಂಶಗಳ ಹೊಂದಾಣಿಕೆ. ಮತ್ತು ಒಟ್ಟು ಸಾಲ 7,64,655 ಕೋಟಿ ಆಗಿರುವುದು ನಮ್ಮ ಜಿಎಸ್‌ಡಿಪಿಯ ಸುಮಾರು 25% ರಷ್ಟು ಇರುವುದು ಆರ್ಥಿಕ ದಿವಾಳಿಗೆ ಸಾಕ್ಷಿಯಾಗಿದೆ ಎಂದು ದೂರಿದ್ದಾರೆ.
ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ. 2% ರಷ್ಟು ಮಹಿಳಾ ಮಕ್ಕಳ ಇಲಾಖೆಗೆ ಶೇ. 1% ರಷ್ಟು ಕಡಿಮೆ ಅನುದಾನ ನೀಡಲಾಗಿದೆ. ನೀರಾವರಿ, ಗ್ರಾಮೀಣ ಅಭಿವೃದ್ಧಿ, ಕೃಷಿಗೆ ವಿಶೇಷವಾಗಿರುವ ಯಾವುದೇ ಅನುದಾನ ನೀಡದಿರುವುದು ರೈತಾಪಿ ವರ್ಗಕ್ಕೆ ನಿರಾಶಾದಾಯಕವಾಗಿದೆ. ಇದೊಂದು ರೈತ ವಿರೋಧಿ ಬಜೆಟ್ ಆಗಿದೆ.
ಈ ಸುದ್ದಿಯನ್ನೂ ಓದಿ | Karnataka Budget 2025: ರಾಜ್ಯ ಆಯವ್ಯಯದ ಬಗ್ಗೆ ಸಂಪೂರ್ಣ ಮಾಹಿತಿ ಬೇಕೆ? ಬಜೆಟ್ ಕಾಪಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಾದೇಶಿಕ ಆಸಮತೋಲನ ನಿವಾರಣೆ ಮಾಡಲು ಯಾವುದೇ ದಿಟ್ಟ ಕ್ರಮ ತೆಗೆದುಕೊಳ್ಳುವ ವಿಚಾರ ಈ ಬಜೆಟ್‌ನಲ್ಲಿ ಪ್ರಕಟವಾಗಿಲ್ಲ. ಕೆಕೆಆರ್‌ಡಿಬಿಗೆ ಕೊಟ್ಟಿರುವ 5000 ಕೋಟಿ ರೂ. ಮೂಗಿಗೆ ತುಪ್ಪ ಸವರಿದಂತೆ. ಏಕೆಂದರೆ ಕಳೆದ ವರ್ಷ ಮೀಸಲಿಟ್ಟ ಹಣ ಖರ್ಚಾಗಿಲ್ಲ. ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಯಾವುದೇ ವಿಶೇಷ ಆರ್ಥಿಕ ನೆರವು ಘೋಷಣೆ ಮಾಡದಿರುವುದು ಆ ಭಾಗದ ಜನರಿಗೆ ನಿರಾಶಾದಾಯಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.