ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಜಾತಿ ಗಣತಿ ವರದಿ: ಅಂತಿಮ ತೀರ್ಮಾನಕ್ಕೆ ಬರಲಾಗದೆ ಸಚಿವ ಸಂಪುಟ ಸಭೆ ಮುಕ್ತಾಯ

CM Siddaramaiah: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ ಜಾತಿ ಗಣತಿ ವರದಿಯ ಭವಿಷ್ಯ ನಿರ್ಧರಿಸಲು ಕರೆಯಲಾಗಿದ್ದ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು, ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.

ಜಾತಿ ಗಣತಿ ವರದಿ: ತೀರ್ಮಾನಕ್ಕೆ ಬರಲಾಗದೆ ಸಚಿವ ಸಂಪುಟ ಸಭೆ ಮುಕ್ತಾಯ

ಮುಖ್ಯಮಂತ್ರಿ ಸಿದ್ದರಾಮಯ್ಯ.

Profile Ramesh B Apr 17, 2025 8:47 PM

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ ಜಾತಿ ಗಣತಿ (Caste Census) ವರದಿಯ ಭವಿಷ್ಯ ನಿರ್ಧರಿಸಲು ಕರೆಯಲಾಗಿದ್ದ ಸಚಿವ ಸಂಪುಟ ಸಭೆ (Karnataka Cabinet Meeting) ಮುಕ್ತಾಯವಾಗಿದ್ದು, ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ʼʼಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಯಾವುದೇ ಸ್ಪಷ್ಪ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲʼʼ ಎಂದು ಮೂಲಗಳು ತಿಳಿಸಿವೆ. ಮುಂದಿನ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಹೇಳಿದ್ದಾರೆ. ಮುಂದಿನ ಸಭೆ ಮೇ 2ರಂದು ನಡೆಯುವ ಸಾಧ್ಯತೆ ಇದೆ.

ಏ. 11ರಂದು ನಡೆದ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆಯಾಗಿದ್ದು, ಬಳಿಕ ಸಂಪುಟದ ಎಲ್ಲ ಸದಸ್ಯರಿಗೂ ಈ ವರದಿಯ ದತ್ತಾಂಶ, ಪ್ರಮುಖ ಶಿಫಾರಸು ಒಳಗೊಂಡ ಪ್ರತಿಯನ್ನು ನೀಡಲಾಗಿತ್ತು. ಹೀಗಾಗಿ ವರದಿಯ ಬಗ್ಗೆ ಅಧ್ಯಯನ ನಡೆಸಿಕೊಂಡು ಬಂದ ತಮ್ಮ ತಮ್ಮ ಸಮುದಾಯಗಳ ಜತೆ ಚರ್ಚೆ ಮಾಡಿ ಅಭಿಪ್ರಾಯ ಮಂಡಿಸಿದರು.

ಕಳೆದೊಂದು ವಾರದಿಂದ ಸಾರ್ವಜನಿಕ ವಲಯದಲ್ಲಿಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಮುಖವಾಗಿ ನಾನಾ ಸಮುದಾಯಗಳ ಸಂಘ, ಸಂಸ್ಥೆಯವರು, ಜಾತಿ ಗಣತಿಯ ಪರ ಇರುವವರು ಮತ್ತು ವಿರುದ್ಧ ಇರುವವರು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಮಾಡಿದ್ದಾರೆ. ಮರು ಸಮೀಕ್ಷೆ ಅಗತ್ಯ ಎಂಬ ಒತ್ತಾಯವೂ ಈ ಸಮುದಾಯಗಳಿಂದ ಬಂದ ಹಿನ್ನೆಲೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗಿಲ್ಲ.



ಈ ಸುದ್ದಿಯನ್ನೈ ಓದಿ: ಜಾತಿ ಗಣತಿಯ ಬಳಿಕ ರಾಜಕೀಯ ಅಸ್ತಿತ್ವದಲ್ಲಿಯೂ ಏರುಪೇರು ?

ಸಚಿವರು ಹೇಳಿದ್ದೇನು?

ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಈ ಬಗ್ಗೆ ಮಾತನಾಡಿ, ʼʼಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಧನಾತ್ಮಕವಾಗಿಯೇ ಚರ್ಚೆ ನಡೆದಿದೆ. ಅಭಿಪ್ರಾಯಗಳನ್ನು ಲಿಖಿತ ಅಥವಾ ಮೌಖಿಕ ರೂಪದಲ್ಲಿ ಕೊಡುವಂತೆ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದುʼʼ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಸಚಿವ ಪ್ರಿಯಾಂಕ್‌ ಖರ್ಗೆ, ʼʼಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಯಾರದೇ ವಿರೋಧವಿಲ್ಲʼʼ ಎಂದು ತಿಳಿಸಿದ್ದಾರೆ. ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಮಾಹಿತಿ ನೀಡಿ, ʼʼವರದಿ ಬಗ್ಗೆ ಯಾರದ್ದೂ ವಿರೋಧವಿಲ್ಲ. ಎಲ್ಲರೂ ಅವರವರ ಅಭಿಪ್ರಾಯ ತಿಳಿಸಿದ್ದಾರೆʼʼ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ನ್ಯಾಯಯುತ ತೀರ್ಮಾನ

ʼʼಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ. ಸರ್ಕಾರ ಎಲ್ಲರ ಅಭಿಪ್ರಾಯ ಕೇಳಿದ್ದು, ರಾಜ್ಯದ ಜನತೆಯ ಪರವಾದ ನ್ಯಾಯಯುತ ನಿರ್ಧಾರ ಕೈಗೊಳ್ಳಲಿದೆʼʼ ಎಂದು ಸಚಿವ ಚಲುವರಾಯ ಸ್ವಾಮಿ ಭರವಸೆ ನೀಡಿದ್ದಾರೆ.

ಏನಾಗಲಿದೆ?

ಜಾತಿ ಗಣತಿ ಜಾರಿಯಾದರೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲದು ಎಂದು ಹೇಳಲಾಗುತ್ತಿದೆ. ಜಾತಿ ಗಣತಿ ಸಂಬಂಧದಲ್ಲಿ ಸೋರಿಕೆಯಾಗಿರುವ ಅಂಕಿ, ಅಂಶಗಳನ್ನು ಹಲವು ಬಗೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಈ ವರದಿ ಜಾರಿಯ ಪರ ಇದ್ದಾರೆ. ಆದರೆ ಒಕ್ಕಲಿಗ ಸಮುದಾಯ ವರದಿಯನ್ನು ವಿರೋಧಿಸುತ್ತಿದೆ. ಹೀಗಾಗಿ ವರದಿ ಬಗ್ಗೆ ಕುತೂಹಲ ಮೂಡಿದೆ.